ಮೈಸೂರು: ನಾಗರಿಕ ಸೇವಾ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ ಪೌರಕಾರ್ಮಿಕರು ಹಾಗೂ ಕಡುಬಡವರ ಮಕ್ಕಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ತಿಳಿಸಿದರು.
ಇಲ್ಲಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ನೆಹರು ಯುವ ಕೇಂದ್ರ, ಎಜ್ಯುಕೇರ್–ಐಟಿಇಎಸ್ ಸಂಸ್ಥೆಗಳ ವತಿಯಿಂದ ಶುಕ್ರವಾರ ನಡೆದ ‘ನೆರೆಹೊರೆ ಯುವ ಸಂಸತ್ತು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರ ಮಕ್ಕಳು ಐಎಎಸ್ ತರಬೇತಿ ಪಡೆಯುತ್ತಿರುವುದನ್ನು ನೋಡಿ ಸಂತಸವಾಯಿತು. ಇಂತಹ ಮಕ್ಕಳಿಗೆ ನೆರವು ನೀಡುವ ಎಜ್ಯುಕೇರ್‌ನಂತಹ ಸಂಸ್ಥೆಗಳಿಗೂ ಸಾಧ್ಯವಿರುವ ಸಹಕಾರ ನೀಡಲಾಗುವುದು ಎಂದರು.
ಸರ್ಕಾರಿ ಕೆಲಸ ನಂಬಿಕೊಂಡು ಕೂರಬಾರದು. ಯುವಜನತೆ ತಾವೇ ಉದ್ಯಮಿಗಳಾಗಿ ಮತ್ತಷ್ಟು ಜನರಿಗೆ ಕೆಲಸ ಕೊಡುವಂತಹ ಗುರಿಗಳನ್ನಿರಿಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಎಜ್ಯುಕೇರ್‌ನಂತಹ ಸಂಸ್ಥೆಗಳು ಕಾರ್ಯೋನ್ಮುಖವಾಗಿದ್ದು, ಇವರು ನೀಡುವ ತರಬೇತಿ ಪಡೆದು ವೃತ್ತಿ ಜೀವನ ಕಟ್ಟಿಕೊಳ್ಳಿ ಎಂದು ಹೇಳಿದರು.
ಸರ್ಕಾರ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆದರೆ, ಯುವ ಜನತೆ ಇದರ ಉಪಯೋಗ ಪಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಲೋಕಾಯುಕ್ತ ಜಿಲ್ಲಾ ಎಸ್.ಪಿ.ಸ್ನೇಹಾ ಮಾತನಾಡಿ, ಸಂಘ ಸಂಸ್ಥೆಗಳಿಂದ ನೀಡುವ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಪಡೆಯಬೇಕು. ನಾವು ಎಷ್ಟೇ ಓದಿದರೂ, ಜೀವನದಲ್ಲಿ ಕೌಶಲ್ಯ ಎಂಬುದು ಮುಖ್ಯ ಎಂದು ಹೇಳಿದರು.
ಕೌಶಲ್ಯಾಭಿವೃದ್ಧಿ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎನ್.ಎಸ್.ಶಿವಣ್ಣ, ರಾಜ್ಯ ಒಕ್ಕಲಿಗರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷರಾದ ಎಚ್.ಎಲ್.ಯಮುನಾ, ಸಹ ಪ್ರಾಧ್ಯಾಪಕ ಕೆ.ಎನ್.ಪ್ರಸನ್ನಕುಮಾರ್, ಕ್ರೆಡಿಟ್-ಐ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಾ.ಎಂ.ಪಿ.ವರ್ಷ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.