ಮೈಸೂರು: ಮಾಜಿ ಸಂಸದ ಧ್ರುವನಾರಾಯಣ ನಿಧನಕ್ಕೆ ರಾಜಕೀಯ ಕ್ಷೇತ್ರದ ಹಲವರು ಕಂಬನಿ ಮಿಡಿದಿದ್ದಾರೆ.
ಪ್ರಾಮಾಣಿಕ, ಶಿಸ್ತಿನ ಸಿಪಾಯಿನಾಡು ಕಂಡ ಅಪರೂಪದ ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದ ಧ್ರುವನಾರಾಯಣ ಸದಾ ನಗುಮುಖದಿಂದ ಇರುತ್ತಿದ್ದರು. ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷರಾಗಿ ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಅವರು ಅತ್ಯಂತ ಪ್ರಾಮಾಣಿಕ ಮತ್ತು ಶಿಸ್ತಿನ ಸಿಪಾಯಿಯಾಗಿದ್ದರು. ಮಾನವೀಯ ಮೌಲ್ಯಗಳ ವ್ಯಕ್ತಿತ್ವವುಳ್ಳ ರಾಜಕಾರಣಿ. ಎಂದೂ ದ್ವೇಷದ ರಾಜಕಾರಣ ಮಾಡಿದವರಲ್ಲ.
- ಜಿ.ಟಿ.ದೇವೇಗೌಡ, ಶಾಸಕ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ
ಎಲ್ಲರ ಪ್ರೀತಿ ಗಳಿಸಿದ್ದರು
ಧ್ರುವನಾರಾಯಣ ಅಕಾಲಿಕ ನಿಧನದಿಂದ ಬಹಳ ದುಃಖ ಹಾಗೂ ನೋವು ಉಂಟಾಗಿದೆ. ಅತ್ಯಂತ ಸಜ್ಜನ ರಾಜಕಾರಣಿ. ನನಗೆ ಆತ್ಮೀಯರಾಗಿದ್ದ ಅವರು ಸಾಮಾಜಿಕ ಬದ್ಧತೆಯಿಂದ ಜನಾನುರಾಗಿಯಾಗಿ ಎಲ್ಲರ ಪ್ರೀತಿ ಸಂಪಾದಿಸಿದ್ದರು. ಎರಡು ಬಾರಿ ಶಾಸಕ, ಎರಡು ಬಾರಿ ಸಂಸದರಾಗಿ ಜನರ ಆಶೋತ್ತರಗಳಿಗೆ ಧನಿಯಾಗಿದ್ದರು. ಅಧಿಕಾರ ಇಲ್ಲದಿದ್ದಾಗಲೂ ಜನರಿಂದ ದೂರವಾಗದೆ, ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಿದ್ದರು.
–ಎಸ್.ಟಿ.ಸೋಮಶೇಖರ್, ಜಿಲ್ಲಾ ಉಸ್ತುವಾರಿ ಸಚಿವ
ಅಂತಃಕರಣದ ರಾಜಕಾರಣಿ
ಮಾನವೀಯ ಅಂತಃಕರಣವುಳ್ಳ ಮತ್ತು ಪ್ರಮಾಣಿಕ ರಾಜಕಾರಣಿಯಾಗಿದ್ದ ಧ್ರುನಾರಾಯಣ ಅಕಾಲಿಕ ನಿಧನ ನೋವುಂಟು ಮಾಡಿದೆ. ಜನಾನುರಾಗಿಯಾಗಿ ಭರವಸೆಯ ನಾಯಕರಾಗಿದ್ದರು. ಅತ್ಯಂತ ಉನ್ನತ ಸ್ಥಾನಮಾನಗಳನ್ನು ಹೊಂದಬಹುದಾಗಿದ್ದ ಸಾಮರ್ಥ್ಯ ಮತ್ತು ಅರ್ಹತೆವುಳ್ಳ ದಲಿತ ಸಮುದಾಯದ ಪ್ರಮುಖ ನಾಯಕರಾಗಿದ್ದರು. ಜನಪರ ಚಳವಳಿಗಳ ಹಿತೈಷಿಯಾಗಿದ್ದರು. ರಾಜಕಾರಣಿಗಳ ನಡೆ-ನುಡಿ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದರು.
–ಗುರುಪ್ರಸಾದ್ ಕೆರಗೋಡು, ರಾಜ್ಯ ಸಂಚಾಲಕ, ಆಲಗೂಡು ಶಿವಕುಮಾರ್, ಜಿಲ್ಲಾ ಸಂಚಾಲಕ, ದಸಂಸ
ಆದರ್ಶ ರಾಜಕಾರಣಿ
ಧ್ರುವನಾರಾಯಣ ಸರಳ, ಸಜ್ಜನಿಕೆ, ಸ್ವಚ್ಛ, ಆದರ್ಶ ರಾಜಕಾರಣಕ್ಕೆ ಹೆಸರಾಗಿದ್ದರು. ಅವರ ಹಠಾತ್ ನಿಧನದಿಂದ ಆಘಾತವಾಗಿದೆ. ಒಂದು ಮತದ ಅಂತರದಿಂದ ಗೆದ್ದು ಇಡೀ ದೇಶಕ್ಕೆ ಮತ ಮೌಲ್ಯವನ್ನು ತಿಳಿಸಿಕೊಟ್ಟಿದ್ದರು. ಎಷ್ಟೇ ಒತ್ತಡಗಳಲ್ಲೂ ಎಲ್ಲೆ ಮೀರಿ ಮಾತನಾಡದೇ ಸಂಘಟನೆ, ಪಕ್ಷದ ಶಿಸ್ತಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದರು. ಸೋತ ನಂತರವೂ ಜನರ ಮಧ್ಯೆ ಇರುತ್ತಿದ್ದರು. ಮಾದರಿ ಸಂಸದರಾಗಿ ಹೆಸರು ಗಳಿಸಿದ್ದರು. ರಾಜ್ಯದ ಅತಿ ದೊಡ್ಡ ಹುದ್ದೆಗೆರುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದರು.
–ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ಮುಖಂಡ
ಸಜ್ಜನಿಕೆಗೆ ಹೆಸರಾಗಿದ್ದರು
ಚಾಮರಾಜನಗರದ ಮಾಜಿ ಸಂಸದ ಆರ್.ಧ್ರುವನಾರಾಯಣ ಸಾವು ಬರಸಿಡಿಲು ಬಡಿದಂತಾಯಿತು. ಸರಳ– ಸಜ್ಜನಿಕೆಯ ವ್ಯಕ್ತಿಯಾಗಿದ್ದರು.
–ಕುರುಬೂರು ಶಾಂತಕುಮಾರ್, ಅಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.