ADVERTISEMENT

‘ಇಷ್ಟಪಟ್ಟು ಓದಿದರೆ, ಉನ್ನತ ಹುದ್ದೆಯ ಅವಕಾಶ’: ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 13:27 IST
Last Updated 29 ಫೆಬ್ರುವರಿ 2020, 13:27 IST
ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ವತಿಯಿಂದ ಶನಿವಾರ ಮೈಸೂರಿನ ಮಹಾರಾಜ ಕಾಲೇಜಿನ ನೂತನ ಕಟ್ಟಡದಲ್ಲಿ ಸಿಂಡಿಕೇಟ್‌ ಸದಸ್ಯರಾದ ಸಿಂಧು ಸುರೇಶ್‌, ಡಾ.ಇ.ಸಿ.ನಿಂಗರಾಜೇಗೌಡ, ಡಾ.ಕೆ.ವಸಂತಕುಮಾರ್, ಎಸ್‌.ಯಶಸ್ವಿನಿ, ಲಾವಣ್ಯ ರವಿಕುಮಾರ್, ಎಸ್‌.ಡಿ.ದೊಡ್ಡಾಚಾರ್, ಆರ್.ಪ್ರದೀಪ್‌ಕುಮಾರ್ ದೀಕ್ಷಿತ್, ಡಾ.ಎಂ.ಎಸ್.ದಾಮೋದರ ಅವರನ್ನು ಅಭಿನಂದಿಸಲಾಯಿತು
ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ವತಿಯಿಂದ ಶನಿವಾರ ಮೈಸೂರಿನ ಮಹಾರಾಜ ಕಾಲೇಜಿನ ನೂತನ ಕಟ್ಟಡದಲ್ಲಿ ಸಿಂಡಿಕೇಟ್‌ ಸದಸ್ಯರಾದ ಸಿಂಧು ಸುರೇಶ್‌, ಡಾ.ಇ.ಸಿ.ನಿಂಗರಾಜೇಗೌಡ, ಡಾ.ಕೆ.ವಸಂತಕುಮಾರ್, ಎಸ್‌.ಯಶಸ್ವಿನಿ, ಲಾವಣ್ಯ ರವಿಕುಮಾರ್, ಎಸ್‌.ಡಿ.ದೊಡ್ಡಾಚಾರ್, ಆರ್.ಪ್ರದೀಪ್‌ಕುಮಾರ್ ದೀಕ್ಷಿತ್, ಡಾ.ಎಂ.ಎಸ್.ದಾಮೋದರ ಅವರನ್ನು ಅಭಿನಂದಿಸಲಾಯಿತು   

ಮೈಸೂರು: ‘ಐಪಿಎಸ್‌ ಅಧಿಕಾರಿ ಆಗಬೇಕು ಎಂಬುದು ನನ್ನ ಬಾಲ್ಯದ ಕನಸಾಗಿತ್ತು. ಇದರ ಸಾಕಾರಕ್ಕಾಗಿ ಇಷ್ಟಪಟ್ಟು ಓದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದೆ. ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದೆ...’

‘ಗಾಂಧಿ ಅಧ್ಯಯನ ಕೇಂದ್ರದಿಂದ ಎರಡು ವರ್ಷದ ಹಿಂದಷ್ಟೇ ಪಿಎಚ್‌ಡಿ ಪದವಿ ಪಡೆದೆ. ಬಾಲ್ಯದ ಕನಸು ಇದೀಗ ನನಸಾಗಿದೆ... ಇದು ನನ್ನೊಬ್ಬನ ಯಶೋಗಾಥೆಯಲ್ಲ. ಕಷ್ಟಪಟ್ಟು–ಇಷ್ಟಪಟ್ಟು ವ್ಯವಸ್ಥಿತವಾಗಿ ಓದಿದರೆ ಎಲ್ಲರೂ ಉನ್ನತ ಹುದ್ದೆಯನ್ನು ಗಿಟ್ಟಿಸಬಹುದು’ ಎಂದು ಮೈಸೂರು ಪೊಲೀಸ್ ಉಪ ಆಯುಕ್ತ (ಡಿಸಿಪಿ) ಡಾ.ಎ.ಎನ್.ಪ್ರಕಾಶ್‌ಗೌಡ, ವಿದ್ಯಾರ್ಥಿ ಸಮೂಹಕ್ಕೆ ಸ್ಫೂರ್ತಿಯ ಮಾತುಗಳನ್ನೇಳಿದರು.

ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ವತಿಯಿಂದ ಶನಿವಾರ ಮಹಾರಾಜ ಕಾಲೇಜಿನ ನೂತನ ಕಟ್ಟಡದಲ್ಲಿ ಸಿಂಡಿಕೇಟ್‌ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಡಿಸಿಪಿ, ‘ಟೈಂ ಪಾಸಿಗಾಗಿ ಓದುವುದನ್ನು ಬಿಡಿ. ನಿಮ್ಮೊಳಗಿನ ಎಲ್ಲ ವೈಫಲ್ಯಗಳನ್ನು ಬದಿಗೊತ್ತಿ. ಗುರುವಿನ ಮಾರ್ಗದರ್ಶನ, ತಂದೆ–ತಾಯಿಯ ಬೆಂಬಲದೊಂದಿಗೆ, ನಿಮ್ಮಲ್ಲಿರುವ ಆತ್ಮವಿಶ್ವಾಸದ ಛಲದೊಂದಿಗೆ ಮುನ್ನುಗಿ. ಯಶಸ್ಸು ಎಂಬುದು ಕಟ್ಟಿಟ್ಟ ಬುತ್ತಿಯಾಗಿರಲಿದೆ’ ಎಂದು ಹೇಳಿದರು.

ADVERTISEMENT

‘ಪ್ರತಿಯೊಬ್ಬರ ತಂದೆ–ತಾಯಿ ತಮ್ಮ ಮಕ್ಕಳನ್ನು ನಾವು ಮಾಡದ ಸಾಧನೆ ಮಾಡಲಿ ಎಂದೇ ಕಷ್ಟಪಟ್ಟು ಓದಿಸುತ್ತಾರೆ. ಇದರ ಅರಿವಿಟ್ಟುಕೊಳ್ಳಬೇಕು. ಸಿಕ್ಕಿದ ಸುವರ್ಣ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗುರು–ತಂದೆ–ತಾಯಿಗೆ ಗೌರವ ನೀಡುವ ಜತೆ, ಅವರ ಪರಿಶ್ರಮಕ್ಕೆ ಸೂಕ್ತ ಸಾರ್ಥಕತೆ ದೊರಕಿಸುವ ನಿಟ್ಟಿನಲ್ಲಿ ಪರಿಶ್ರಮಿಸಬೇಕು’ ಎಂದು ವಿದ್ಯಾರ್ಥಿ ಸಮೂಹಕ್ಕೆ ಕಿವಿಮಾತು ಹೇಳಿದರು.

ಬಿಜೆಪಿ ವಿಭಾಗ ಪ್ರಮುಖ್ ಮೈ.ವಿ.ರವಿಶಂಕರ್, ಮಹಾರಾಜ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಅನಿಟಾ ವಿಮ್ಲ ಬ್ರಾಗ್ಸ್‌, ಪ್ರೊ.ಬಿ.ಎನ್.ಯಶೋಧಾ, ಎಂ.ರುದ್ರಯ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಭಾವತಾರಿಣಿ ಪ್ರಾರ್ಥಿಸಿದರು. ಡಾ.ಲಿಂಗರಾಜು ತಂಡ ನಾಡಗೀತೆ ಹಾಡಿತು. ವೇದಿಕೆ ಅಧ್ಯಕ್ಷ ಆರ್.ವಾಸುದೇವ್‌ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.