ADVERTISEMENT

ಕೊಡಗಿನಲ್ಲಿ BJP ಸಂಸದ ಪ್ರತಾಪ ಸಿಂಹ ಬೇನಾಮಿ ಆಸ್ತಿ: ಕಾಂಗ್ರೆಸ್‌ ವಕ್ತಾರ ಲಕ್ಷ್ಮಣ್‌

ಸಂಸದರ ವಿರುದ್ಧ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್‌ ಆರೋಪ

​ಪ್ರಜಾವಾಣಿ ವಾರ್ತೆ
Published 20 ಜೂನ್ 2023, 13:27 IST
Last Updated 20 ಜೂನ್ 2023, 13:27 IST
ಎಂ.ಲಕ್ಷ್ಮಣ್‌
ಎಂ.ಲಕ್ಷ್ಮಣ್‌   

ಮೈಸೂರು: ‘ಸಂಸದ ಪ್ರತಾಪ ಸಿಂಹ ಕೊಡಗು ನ್ಯೂಟ್ರಿಷಿಯನ್ ಎಂಬ ಕಂಪನಿಯಲ್ಲಿ ಬೇನಾಮಿ ಹೆಸರಿನಲ್ಲಿ ₹50 ಕೋಟಿಯಿಂದ ₹60 ಕೋಟಿ ಹೂಡಿಕೆ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ ವಕ್ತಾರ ಎಂ. ಲಕ್ಷ್ಮಣ್‌ ಆರೋಪಿಸಿದರು.

‘ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರೊಬ್ಬರ ಮೂಲಕ ವಸೂಲಿ ಮಾಡುತ್ತಿರುವ ಹಣ ಹಾಗೂ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜನೆಯಲ್ಲಿ ಕಮಿಷನ್ ರೂಪದಲ್ಲಿ ಪಡೆದ ಹಣವನ್ನು ಪ್ರತಾಪ ಸಿಂಹ ಕೊಡಗಿನಲ್ಲಿರುವ ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಕೆಲವು ಅಧಿಕಾರಿಗಳೂ ಇದರಲ್ಲಿ ಹಣ ಹಾಕಿದ್ದಾರೆ. ಈ ಬಗ್ಗೆ ಐ.ಟಿ ಹಾಗೂ ಇ.ಡಿ.ಗೆ ದೂರು ನೀಡುತ್ತೇನೆ. ತನಿಖೆಗೆ ನಡೆಸುವಂತೆ ಮುಖ್ಯಮಂತ್ರಿಗೂ ಪತ್ರ ಬರೆಯುತ್ತೇನೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಎಂ.ಬಿ. ಪಾಟೀಲ ಅವರು ಸಿದ್ದರಾಮಯ್ಯ ಚೇಲಾ ಸಂಘದ ಅಧ್ಯಕ್ಷ’ ಎಂಬ ಪ್ರತಾಪ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರತಾಪ ಸಿಂಹ ಅವರು ಬಿ.ಎಲ್. ಸಂತೋಷ್‌ ಚೇಲಾಗಳ ಸಂಘದ ಅಧ್ಯಕ್ಷ. ಸಿ.ಟಿ. ರವಿ ಕಾರ್ಯದರ್ಶಿ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಆ ಪಕ್ಷದ ನಾಲ್ವರು ಪೈಪೋಟಿ ನಡೆಸುತ್ತಿದ್ದು, ಹೈಕಮಾಂಡ್‌ ಅನ್ನು ಮೆಚ್ಚಿಸಲು ಹೀಗೆ ಬಾಯಿ ಬಡಿದುಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ADVERTISEMENT

ಚರ್ಚೆಗೆ ಸಿದ್ಧ: ‘ವಿಮಾನ ನಿಲ್ದಾಣ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಸಿದ್ಧ. ಸಂಸದರು ಕೇವಲ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಲಿ’ ಎಂದು ಲಕ್ಷ್ಮಣ್‌ ಸವಾಲು ಹಾಕಿದರು.

‘ಪ್ರತಾಪ ಸಿಂಹ ಈ ಚುನಾವಣೆಯಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸರ್ಕಸ್‌ ಮಾಡುತ್ತಿದ್ದಾರೆ. ಹೀಗಾಗಿ ನಾಲ್ವರು ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಸಭೆಯ ನಾಟಕ ಆಡುತ್ತಿದ್ದಾರೆ. ಆದರೆ, ವಿಮಾನ ನಿಲ್ದಾಣ ವಿಚಾರದಲ್ಲಿ ಯಾವುದೇ ಪ್ರಗತಿ ಆಗಿಲ್ಲ. ವಿಮಾನ ನಿಲ್ದಾಣ ವಿಸ್ತರಣೆಗೆ ಬೇಕಾದ ಜಾಗ ಕೊಡಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಈ ಬಗ್ಗೆ ಚರ್ಚೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಸಂಸದರ ಕಚೇರಿಗೆ ಕರೆದೊಯ್ಯಲು ಸಿದ್ಧರಿದ್ದೇವೆ’ ಎಂದರು.

‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಸೋತಿದ್ದೀರಿ. ಅದರ ನೇರ ಹೊಣೆ ಯಾರು ಹೊರುತ್ತೀರಿ? ರಾಜ್ಯದಲ್ಲಿ ಬಿಜೆಪಿ ಸೋಲಿನ ನೈತಿಕ ಹೊಣೆ ಹೊತ್ತು ಯಾರು ರಾಜೀನಾಮೆ ನೀಡಿದ್ದೀರಿ? ಸಚಿವ ಎಂ.ಬಿ. ಪಾಟೀಲರ ಬಗ್ಗೆ ಮಾತನಾಡುವಷ್ಟು ನೈತಿಕತೆಯಾಗಲಿ, ಯೋಗ್ಯತೆ ಆಗಲಿ ನಿಮಗೆ ಇದೆಯೇ? ಕಾಂಗ್ರೆಸ್‌ನಲ್ಲಿ ಯಾರು ಎಷ್ಟು ವರ್ಷ ಮುಖ್ಯಮಂತ್ರಿ ಆಗಿರಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ಮತ್ತು ಶಾಸಕರು ತೀರ್ಮಾನಿಸುತ್ತಾರೆ. ಮಹದೇವಪ್ಪ ಹೇಳಿಕೆಯನ್ನು ತಿರುಚುವ ಪ್ರಯತ್ನ ಏಕೆ ಮಾಡುತ್ತೀರಿ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ಕಾರ್ಯದರ್ಶಿ ಶಿವಣ್ಣ, ಮುಖಂಡರಾದ ಮಹೇಶ್‌, ಬಿ.ಎಂ. ರಾಮು, ಗಿರೀಶ್ ಇದ್ದರು.

25 ಸಾವಿರ ಟನ್‌ ಅಕ್ಕಿ ನಾಶ’ ‘

ಭಾರತೀಯ ಆಹಾರ ನಿಗಮದಲ್ಲಿ (ಎಫ್‌ಸಿಐ) ಕಳೆದ 5 ವರ್ಷದಲ್ಲಿ 25 ಸಾವಿರ ಟನ್‌ ಅಕ್ಕಿ ಹಾಳಾಗಿದೆ ಎಂದು ಕೇಂದ್ರ ಆಹಾರ ಸಚಿವರೇ ಹೇಳಿಕೆ ನೀಡಿದ್ದಾರೆ. ಸದ್ಯ ನಿಗಮದಲ್ಲಿ 262 ಲಕ್ಷ ಟನ್‌ನಷ್ಟು ಅಕ್ಕಿ ದಾಸ್ತಾನು ಇದೆ. ಇದರಲ್ಲಿ ನಾವು ಕೇವಲ 2.47 ಲಕ್ಷ ಟನ್‌ ಮಾತ್ರ ಕೇಳುತ್ತಿದ್ದೇವೆ. ಬಿಜೆಪಿಯವರು ಕೇಂದ್ರದಿಂದ ಅಕ್ಕಿ ಕೊಡುವುದನ್ನು ತಪ್ಪಿಸಿ ಇನ್ನೊಂದೆಡೆ ಪ್ರತಿಭಟನೆ ನಾಟಕ ಆಡುತ್ತಿದ್ದಾರೆ’ ಎಂದು ಎಂ. ಲಕ್ಷ್ಮಣ್‌ ಆಕ್ಷೇಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.