ADVERTISEMENT

ಬಿಜೆಪಿಗರಿಗೆ ಕಾಂಗ್ರೆಸ್ ಪ್ರತಿ ಮುತ್ತಿಗೆ: ಲಕ್ಷ್ಮಣ

ಅಧಿಕಾರ ದುರುಪಯೋಗ ಆರೋಪ: ದಾಖಲೆ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 16:00 IST
Last Updated 11 ಜುಲೈ 2024, 16:00 IST
ಎಂ.ಲಕ್ಷ್ಮಣ
ಎಂ.ಲಕ್ಷ್ಮಣ   

ಮೈಸೂರು: ‘ಬಿಜೆಪಿ ಮುಖಂಡರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮುತ್ತಿಗೆ ಹಾಕಲು ಮುಂದಾದರೆ ನಾವು ಅವರಿಗೆ ಪ್ರತಿ ಮುತ್ತಿಗೆ ಹಾಕುತ್ತೇವೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್‌ ನಾಯಕರ ತೇಜೋವಧೆ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಜುಲೈ 12ರಂದು ಬೆಳಿಗ್ಗೆ 10ಕ್ಕೆ ಮುಡಾ ಮುತ್ತಿಗೆ ಹಾಕುವುದಾಗಿ ಹೇಳಿದೆ. ಸಾವಿರಾರು ಜನರನ್ನು ಸೇರಿಸಿದರೆ ಅಷ್ಟೇ ಸಂಖ್ಯೆಯಲ್ಲಿಯೇ ಪಕ್ಷದ ಕಾರ್ಯಕರ್ತರು, ನಾಗರಿಕರು ಬಿಜೆಪಿಗರನ್ನು ಸುತ್ತುವರಿಯಲಿದ್ದಾರೆ’ ಎಂದರು.

‘20 ದಿನಗಳಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ. ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಜನರು ತಿರಸ್ಕರಿಸಿದ್ದರು. ಕಾಂಗ್ರೆಸ್‌ ಟೀಕಿಸಲು ಯಾವುದೇ ಅಸ್ತ್ರ ಇರಲಿಲ್ಲ. ಹೀಗಾಗಿಯೇ, ವಿಚಾರವೇ ಇಲ್ಲದ ಮುಡಾ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ’ ಎಂದು ಹರಿಹಾಯ್ದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ತೇಜೋವಧೆಯನ್ನು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಲೋಪ ಆಗಿರುವುದು ಕಂಡುಬಂದರೆ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರೆ, ಪ್ರಭಾವ ಬಳಸಿದ್ದರೆ ಸೂಕ್ತ ದಾಖಲೆ ಬಿಡುಗಡೆ ಮಾಡಲಿ ಉತ್ತರ ಕೊಡುತ್ತೇವೆ’ ಎಂದು ಸವಾಲು ಹಾಕಿದರು.

‘ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿ.ಟಿ.ರವಿ, ಆರ್‌.ಅಶೋಕ, ಸಿ.ಎನ್‌. ಅಶ್ವತ್ಥನಾರಾಯಣ ಅವರೊಂದಿಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಕರೆತರಲಿ’ ಎಂದು ಆಗ್ರಹಿಸಿದರು.

‘ವಿಜಯೇಂದ್ರ ಪರ್ಯಾಯ ಸರ್ಕಾರ ನಡೆಸುತ್ತಿದ್ದರೆಂದು, ₹50 ಸಾವಿರ ಕೋಟಿ ಲೂಟಿ ಮಾಡಿದ್ದಾರೆಂದು ಬಿಜೆಪಿ ನಾಯಕರೇ ಹೈಕಮಾಂಡ್‌ಗೆ 2019ರಲ್ಲಿ ಪತ್ರ ಬರೆದಿದ್ದರು. ಆ ಬಗ್ಗೆಯೂ ತನಿಖೆ ನಡೆಯಲಿ’ ಎಂದರು.

‘ದೇಶದ ಸ್ವಚ್ಛ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಅವರಿಗೆ ನಂಬರ್ 1 ಸ್ಥಾನವಿದೆ. ಅವರನ್ನು ತೇಜೋವಧೆ ಮಾಡಲು ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಹೇಳಿದರು.

ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ ಖಾನ್, ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ, ಮುಖಂಡರಾದ ಎಚ್‌.ವಿ. ರಾಜೀವ್‌, ಬಿ.ಎಂ. ರಾಮು, ಪ್ರದೀಪ್‌ಕುಮಾರ್‌, ಎಂ.ಶಿವಣ್ಣ, ಆರೀಫ್‌ ಹುಸೇನ್‌, ಗಿರೀಶ್‌, ಮಹದೇವ, ಕೆ.ಮಹೇಶ್‌  ಹಾಜರಿದ್ದರು.

‘ಪ್ರತಿಭಟನೆ ಮಾಡಲು ನೈತಿಕತೆಯಿಲ್ಲ’

‘ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ (ಆರ್‌ಟಿಜಿಎಸ್‌) ಮೂಲಕ ಹಣ ಪಡೆದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭ್ರಷ್ಟಾಚಾರದ ರಾಜ. ಬಿಜೆಪಿಗರಿಗೆ ಪ್ರತಿಭಟನೆ ಮಾಡಲು ಯಾವ ನೈತಿಕತೆಯೂ ಉಳಿದಿಲ್ಲ’ ಎಂದು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್‌ ಕುಮಾರ್ ಟೀಕಿಸಿದರು. ‘ಕೋವಿಡ್‌ ವೇಳೆ ₹22 ಸಾವಿರ ಕೋಟಿ ಭ್ರಷ್ಟಾಚಾರ ನಡೆಸಿದ್ದರೆಂದು ಬಿಜೆಪಿ ನಾಯಕರು ಹೈಕಮಾಂಡ್‌ಗೆ ಪತ್ರ ಬರೆದಿದ್ದರು. ಇಂಥವರು ನಿಷ್ಕಳಂಕ ರಾಜಕಾರಣ ಮಾಡಿರುವ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು. ‘ಮುಡಾ ಕಚೇರಿ ಬಲಭಾಗದಲ್ಲಿ ಪ್ರತಿಭಟನೆ ಮಾಡಲು ಅವಕಾಶ ನೀಡುವಂತೆ ಪೊಲೀಸರನ್ನು ಕೇಳಿದ್ದು ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರು ಎಲ್ಲ ಹಂತದ ಪದಾಧಿಕಾರಿಗಳು ಭಾಗವಹಿಸುವರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.