ADVERTISEMENT

ಸತತ ಐದನೇ ಬಾರಿಗೆ ಸೋಲುಂಡ ಮೈಸೂರು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 14:04 IST
Last Updated 4 ಜೂನ್ 2024, 14:04 IST
ಎಂ. ಲಕ್ಷ್ಮಣ
ಎಂ. ಲಕ್ಷ್ಮಣ   

ಮೈಸೂರು: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ. ಲಕ್ಷ್ಮಣ ಅವರು 5ನೇ ಚುನಾವಣೆಯಲ್ಲೂ ಗೆಲುವು ಸಾಧಿಸಲಾಗಲಿಲ್ಲ.

ಹಲವು ಜನಪರ ಹೋರಾಟಗಳಲ್ಲಿ ಭಾಗಿಯಾಗಿದ್ದುದು ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದ ಕಾರಣಕ್ಕೆ ‘ಜನಾದೇಶ’ ದೊರೆಯಬಹುದು ಎಂಬುದು ಅವರ ನಿರೀಕ್ಷೆಯಾಗಿ‌ತ್ತು. ಆದರೆ, ಅದು ಹುಸಿಯಾಗಿದ್ದು ಸೋಲಿನಿಂದ ಕಂಗೆಟ್ಟಿದ್ದಾರೆ.

ಚಾಮರಾಜ ವಿಧಾನಸಭಾ ಕ್ಷೇತ್ರದಿಂದ 2008ರಲ್ಲಿ ಪಕ್ಷೇತರರಾಗಿ ಕಣಕ್ಕಿಳಿದು 1,855 ಮತಗಳನ್ನಷ್ಟೆ ಪಡೆದು ಸೋತಿದ್ದರು.

ADVERTISEMENT

2010ರಲ್ಲಿ ವಿಧಾನಪರಿಷತ್‌ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಪದವೀಧರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ, 3,697 ಮತ ಗಳಿಸಿದ್ದರು.

2012ರಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಜೆಡಿಎಸ್‌ನ ಮರಿತಿಬ್ಬೇಗೌಡ ಅವರ ವಿರುದ್ಧ ಸೋತಿದ್ದರು.

2018ರಲ್ಲಿ ಮತ್ತೆ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜೆಡಿಎಸ್‌ನ ಮರಿತಿಬ್ಬೇಗೌಡ ವಿರುದ್ಧ ಪರಾಜಿತರಾಗಿದ್ದರು. ಈಗ, ಲೋಕಸಭಾ ಚುನಾವಣೆಯ ‘ಟಿಕೆಟ್‌ ಫೈಟ್‌’ನಲ್ಲಿ ಗೆದ್ದರಾದರೂ ಚುನಾವಣೆಯಲ್ಲಿ ವಿಜಯಲಕ್ಷ್ಮಿ ಒಲಿಯಲಿಲ್ಲ.

ಸತತ ಸೋಲಿನಿಂದ ಕಂಗೆಟ್ಟಿದ್ದ ಅವರು, ‘ಇದು ನನಗೆ ಕಡೆಯ ಅವಕಾಶ. ನಾನು ಈ ಬಾರಿ ಸೋತರೆ ಸತ್ತಂತೆ’ ಎಂಬ ಭಾವನಾತ್ಮಕ ಮಾತುಗಳನ್ನೂ ಆಡಿದ್ದರು. ಜಾತಿಯ ಅಸ್ತ್ರವನ್ನೂ ಮುಂದು ಮಾಡಿದ್ದರು. ಅವರಿಗೆ ಅನುಕಂಪವೂ ನೆರವಾಗಿದೆ. 6,56,241 ಮತಗಳನ್ನು ಗಳಿಸಿದ ಅವರಿಗೆ ಬಿಜೆಪಿ–ಜೆಡಿಎಸ್‌ ಮೈತ್ರಿ ‘ಗೆಲ್ಲಲಾಗದ ರೀತಿ’ಯಲ್ಲಿ ಹೊಡೆತ ನೀಡಿದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.