ADVERTISEMENT

ಕಾಂಗ್ರೆಸ್‌ ಅಲ್ಪಸಂಖ್ಯಾತರನ್ನು ಓಲೈಸುತ್ತಿಲ್ಲ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 14:22 IST
Last Updated 21 ನವೆಂಬರ್ 2024, 14:22 IST
   

ಮೈಸೂರು: ‘ಕಾಂಗ್ರೆಸ್‌ ಪಕ್ಷದಿಂದ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವ ಬದ್ಧತೆಯಿಂದ ಅವರ ಪರವಾಗಿ ನಿಂತಿದ್ದೇವೆಯೇ ಹೊರತು ಓಲೈಸುತ್ತಿಲ್ಲ; ಬೇರಾವುದೇ ದುರುದ್ದೇಶವೂ ಇಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಇಲ್ಲಿನ ಕಾಂಗ್ರೆಸ್‌ ಭವನದಲ್ಲಿ ಗುರುವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ದೇಶದಲ್ಲಿ ಹುಟ್ಟಿ ಬೆಳೆದ ಅಲ್ಪಸಂಖ್ಯಾತರು ಬೇರೆಯವರಾ? ಅವರ ಮೇಲೆ ಬಿಜೆಪಿಯವರಿಗೆ ಏಕಿಷ್ಟು‌ ಕೋಪ? ನಮ್ಮದು ಹಿಂದೂ ರಾಷ್ಟ್ರ ನಿಜ. ಆದರೆ, ಇಲ್ಲಿರುವ ಎಲ್ಲರಿಗೂ ಸಮಾನ ಅವಕಾಶ ಹಾಗೂ ಹಕ್ಕು ಇದೆ. ಅದರಂತೆ ನಡೆದುಕೊಳ್ಳುತ್ತಿದ್ದೇವೆ’ ಎಂದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದಾಗ, ಮುಸ್ಲಿಮರನ್ನು ದೇಶದಲ್ಲಿ ಉಳಿಸಿಕೊಂಡ ಕಾರಣದಿಂದಲೇ ಗೋಡ್ಸೆ ಮಹಾತ್ಮ ಗಾಂಧಿಗೆ ಗುಂಡಿಟ್ಟ’ ಎಂದು ಹೇಳಿದರು.

ADVERTISEMENT

‘ಸಿದ್ದರಾಮಯ್ಯ ಅವರು ₹ 160 ಕೋಟಿ ಖರ್ಚು ಮಾಡಿ ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿ ಗಣತಿ ವರದಿ ಪಡೆದಿದ್ದಾರೆ. ಯಾವ ಸಮುದಾಯ ಹಿಂದೆ ಬಿದ್ದಿದೆಯೋ ಅದನ್ನು ಮುಂದೆ ತರುವುದು ನಮ್ಮ ಉದ್ದೇಶ. ಸದ್ಯದಲ್ಲೇ ವರದಿಯ ವಿವರಗಳನ್ನು ಬಿಡುಗಡೆ ಮಾಡಲಾಗುವುದು. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ದೇಶದಾದ್ಯಂತ ಇಂತಹ ಗಣತಿ ನಡೆಸುತ್ತೇವೆ ಎಂದು ರಾಹುಲ್ ಗಾಂಧಿ ಕೂಡ ಹೇಳಿದ್ದಾರೆ’ ಎಂದರು.

ಲೆಕ್ಕ ಮಾಡಿಯೇ ಕ್ರಮ:

‘ಬಿಜೆಪಿಯವರು ಹೇಳುವಂತೆ ನಾವು ಗ್ಯಾರಂಟಿ ಕಾರ್ಯಕ್ರಮಗಳನ್ನು ಕಣ್ಮುಚ್ಚಿಕೊಂಡು ಜಾರಿಗೊಳಿಸಿಲ್ಲ. ಎಷ್ಟು ಹಣ ಬೇಕಾಗುತ್ತದೆ ಎಂಬುದನ್ನೆಲ್ಲಾ ಲೆಕ್ಕಹಾಕಿಯೇ ಮಾಡಿದ್ದೇವೆ. ಸಿದ್ದರಾಮಯ್ಯ ಆರ್ಥಿಕ ತಜ್ಞರಾಗಿ ಎಲ್ಲವನ್ನೂ ಬಜೆಟ್‌ನಲ್ಲಿ ಸೇರಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗಾಗಿಯೇ ₹ 56ಸಾವಿರ ಕೋಟಿ ಒದಗಿಸುತ್ತಿರುವುದು ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಗ್ಯಾರಂಟಿಗಳನ್ನು ಬಿಜೆಪಿ, ಜೆಡಿಎಸ್‌ನವರು ಹಾಗೂ ಸ್ವತಃ ಪ್ರಧಾನಿಯೇ ಟೀಕಿಸುತ್ತಿದ್ದಾರೆ. ಆದರೆ, ಅದನ್ನೇ ಅನುಸರಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಕೆಪಿಸಿಸಿ ಅಧ್ಯಕ್ಷರಾದವರು ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ಸ್ವಾಭಾವಿಕವಾಗಿಯೇ ಹಲವರು ಭಾವಿಸಿದ್ದರು. 2013ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ‌ಬಂತು. ಆದರೆ, ನಾನು ಸೋತೆ’ ಎಂದು ನೆನೆದರು. ‘ಆಗ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ನೀಡಿದಂತಹ ಪ್ರತಿ ಕಾರ್ಯಕ್ರಮಗಳೂ ಮಹತ್ವದ್ದಾಗಿದ್ದವು’ ಎಂದು ಹೇಳಿದರು.

ನಾನೇ ಬರಲಾಗಲಿಲ್ಲ:

‘ಕೆಪಿಸಿಸಿ ಅಧ್ಯಕ್ಷ ಆಗಿದ್ದಾಗ, ಸಚಿವರೆಲ್ಲರೂ ಕಾಂಗ್ರೆಸ್‌ ಕಚೇರಿಗೆ ಭೇಟಿ ಕೊಡಬೇಕು ಎಂದು ಫರ್ಮಾನು ಹೊರಡಿಸಿದ್ದೆ. ಆದರೆ, ಈಗ ನಾನೇ ಪಾಲಿಸಿಲ್ಲ. ಹಲವು ಬಾರಿ ಮೈಸೂರಿಗೆ ಬಂದಿದ್ದರೂ ಇಲ್ಲಿಗೆ ಬಂದಿರಲಿಲ್ಲ. ಇದಕ್ಕಾಗಿ ವಿಷಾದಿಸುತ್ತೇನೆ’ ಎಂದರು.

‘ಬಡವರು, ಶೋಷಿತರನ್ನು ಮುಖ್ಯ ವಾಹಿನಿಗೆ ತರುವುದು ಪಕ್ಷದ ಧ್ಯೇಯೋದ್ದೇಶ. 138 ವರ್ಷ ಹಳೆಯ ಸಂಸ್ಥೆಯಲ್ಲಿ ನಾವೂ ಇದ್ದೇವೆ ಎನ್ನುವುದಕ್ಕೆ ಕಾರ್ಯಕರ್ತರು ಹೆಮ್ಮೆ ಪಡಬೇಕು. ಹಿಂದಿನಿಂದಲೂ ನಮ್ಮ ಬದ್ಧತೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬಿಜೆಪಿಯಲ್ಲಿ ಬದಲಾವಣೆ ಆಗುತ್ತಿರುತ್ತದೆ. ಪ್ರಪಂಚದ ರಾಜಕೀಯ ‌ಇತಿಹಾಸದಲ್ಲಿ ಬದ್ಧತೆ ಉಳಿಸಿಕೊಂಡಿರುವ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ’ ಎಂದು ಹೇಳಿದರು.

ಬಡವರು, ಶಾಂತಿಯ ಪರ:

‘ನಾವು ಬಡವರು, ಅಭಿವೃದ್ಧಿ ಹಾಗೂ ಶಾಂತಿಯ ಪರವಾಗಿ ‌ನಿಂತಿದ್ದೇವೆ. ಬೇರೆ ಯಾವುದೇ ಪಕ್ಷದಲ್ಲಿ ಇದನ್ನು ನೋಡಲು ಸಾಧ್ಯವಿಲ್ಲ. ಅಂಬೇಡ್ಕರ್ ನೀಡಿರುವ ಸಂವಿಧಾನದ ಪ್ರತಿ ಅಕ್ಷರವನ್ನೂ ನಂಬಿರುವವರು ನಾವು. ಈ ಬದ್ಧತೆಯನ್ನು ಉಳಿಸಿಕೊಂಡು ಹೋಗಬೇಕಾಗಿರುವುದೇ‌ ನಮ್ಮೆದುರಿನ ಸವಾಲಾಗಿದೆ’ ಎಂದರು.

ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಪಕ್ಷದ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್, ಮುಖಂಡರಾದ ನರೇಂದ್ರ, ಈಶ್ವರ ಚಕ್ಕಡಿ, ಪುಷ್ಪಲತಾ ಚಿಕ್ಕಣ್ಣ ಪಾಲ್ಗೊಂಡಿದ್ದರು.

‘ಬಡವರ ಮೇಲೆತ್ತಿದ ಗ್ಯಾರಂಟಿಗಳು’

‘ನಮ್ಮ ಗ್ಯಾರಂಟಿಗಳು ಬಡವರನ್ನು ಮೇಲೆತ್ತುವ ಕೆಲಸ ಮಾಡಿವೆ. ಆ ಹಣ ದುರುಪಯೋಗ ಆಗಿಲ್ಲ. ಮಹಿಳೆಯರು ಹಣವನ್ನು ಹಲವು ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿರುವ ಅರ್ಧದಷ್ಟು ಜನಸಂಖ್ಯೆಗೆ ಅನುಕೂಲ ಮಾಡಿಕೊಡುವುದು ತಪ್ಪೇ? ನಮ್ಮ ಕಾರ್ಯಕ್ರಮಗಳಿಂದ ಕೆಳವರ್ಗದವರಿಗೆ ಆಗುತ್ತಿರುವ ಅನುಕೂಲವನ್ನು ಬಿಜೆಪಿ, ಜೆಡಿಎಸ್‌ನವರು ಅರ್ಥ ಮಾಡಿಕೊಂಡಿಲ್ಲ. ಅಭಿವೃದ್ಧಿ ಕುಂಠಿತ ಮಾಡದೇ ಗ್ಯಾರಂಟಿಗಳನ್ನು ಅನುಷ್ಠಾನಗಗೊಳಿಸುತ್ತಿದ್ದೇವೆ’ ಎಂದು ‍‍ಪರಮೇಶ್ವರ ಹೇಳಿದರು.

‘ಟ್ರಾಫಿಕ್‌ ಸಮಸ್ಯೆ ನಿವಾರಿಸಿ’

‍ಪಕ್ಷದ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ‘ಸಂಚಾರ ನಿರ್ವಹಣೆಯಲ್ಲಿ ತೊಂದರೆ ಆಗುತ್ತಿದೆ. ನಿಯೋಜಿತ ಸಿಬ್ಬಂದಿ ನಿಗದಿತ ಸ್ಥಳದಲ್ಲಿರುವುದಿಲ್ಲ. ಇದರಿಂದ ಟ್ರಾಫಿಕ್ ಸಮಸ್ಯೆ ‌ಆಗುತ್ತಿದೆ. ಇದನ್ನು ತ‍ಪ್ಪಿಸಿ, ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಕೋರಿದರು.

ಇದಕ್ಕೆ ಸ್ಪಂದಿಸಿದ ಸಚಿವರು, ‘ಸಂಚಾರ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸುವೆ’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.