ADVERTISEMENT

ಮೈಸೂರು | ಕಾಂಗ್ರೆಸ್‌ನಿಂದ ‘ಮುಂದಿಲ್ಲ ಮೋದಿ–2024’ ಗೋಡೆ ಬರಹ ಅಭಿಯಾನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 15:45 IST
Last Updated 9 ಫೆಬ್ರುವರಿ 2024, 15:45 IST
   

ಮೈಸೂರು: ನಗರದಲ್ಲಿ ಹಮ್ಮಿಕೊಂಡಿರುವ ‘ಮುಂದಿಲ್ಲ ಮೋದಿ–2024’ ಗೋಡೆ ಬರಹದ ಅಭಿಯಾನಕ್ಕೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ಶುಕ್ರವಾರ ಚಾಲನೆ ನೀಡಿದರು.

ನಂತರ ಮಾತನಾಡಿ, ‘ಮತ್ತೊಮ್ಮೆ ಮೋದಿ-2024 ಎಂಬ ಗೋಡೆ ಬರಹಕ್ಕೆ ಬಿಜೆಪಿಯವರು ನಗರದಲ್ಲಿ ಚಾಲನೆ ನೀಡಿದ್ದರು. ಆ ಮೂಲಕ ಮತ್ತೊಮ್ಮೆ ದೇಶವನ್ನು ಕೋಮು ಗಲಭೆಯ, ಆರ್ಥಿಕ ಸುಭದ್ರತೆ ಇಲ್ಲದ, ಬಡ– ಮಧ್ಯಮ ಮತ್ತು ಎಲ್ಲಾ ವರ್ಗದ ವಿರೋಧಿ ನಾಯಕನನ್ನು ಬೆಂಬಲಿಸಲು ಕೋರಿರುವುದು ಖಂಡನೀಯ’ ಎಂದರು.

‘ಅಭಿವೃದ್ಧಿ ಬಿಟ್ಟು ರಾಮ–ಧರ್ಮ–ಭಾವನಾತ್ಮಕ ರಾಜಕೀಯದ ಮೂಲಕ ಅಧಿಕಾರದ ಗದ್ದುಗೆಗೆ ಏರಲು ಹವಣಿಸುತ್ತಿರುವ ಸರ್ವಾಧಿಕಾರಿಯನ್ನು ಜನರು ಬೆಂಬಲಿಸಬಾರದು. ಇದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಸರ್ವಾಧಿಕಾರಿ ಆಡಳಿತಕ್ಕೆ ಮಂಗಳ ಹಾಡಬೇಕು’ ಎಂದು ಕೋರಿದರು.

ADVERTISEMENT

‘ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಜನರು ತುದಿಗಾಲಲ್ಲಿ ನಿಂತಿದ್ದಾರೆ. ಒಬ್ಬ ಪ್ರಧಾನಿ ಆದವರನ್ನು ಗೋಡೆಯಲ್ಲಿ ಬರೆದು ಜನರಿಗೆ ತೋರಿಸುವ ಕೆಲಸ ಮಾಡುತ್ತಿರುವುದು ಬಿಜೆಪಿಯ ದುಃಸ್ಥಿತಿಯನ್ನು ತೋರಿಸುತ್ತದೆ’ ಎಂದು ಟೀಕಿಸಿದರು.

ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಮಾತನಾಡಿ, ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರ ಆಟ ನಡೆಯುವುದಿಲ್ಲ. ಜನರ ಮನಸ್ಸಿನಲ್ಲಿ ಮೋದಿ ಅಳಿಸಿ ಹೋಗಿದ್ದಾರೆ’ ಎಂದರು.

‘ಮುಂದಿಲ್ಲ ಮೋದಿ, ಬರಲ್ಲ ಮೋದಿ, ಬೇಡ ಬೇಡ ಮೋದಿ ಬೇಡ’ ಎಂಬ ಘೋಷಣೆ ಕಾರ್ಯಕರ್ತರಿಂದ ಮೊಳಗಿತು.

ಪಕ್ಷದ ಬ್ಲಾಕ್ ಅಧ್ಯಕ್ಷರಾದ ಜಿ.ಸೋಮಶೇಖರ್, ಶ್ರೀಧರ್, ಮಾಜಿ ಮೇಯರ್‌ಗಳಾದ ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಮುಖಂಡರಾದ ಜೆ.ಗೋಪಿ, ಜೋಗಿ ಮಹೇಶ್, ಮಂಜು, ವಿಜಯ್ ಕುಮಾರ್, ರವಿಶಂಕರ್, ಪರಶಿವಮೂರ್ತಿ, ಗುಣಶೇಖರ್, ವಿಶ್ವನಾಥ್, ರಮೇಶ್ ರಾಮಪ್ಪ, ಮಹ್ಮದ್ ಫಾರೂಖ್, ಮಧುರಾಜ್, ಇಂದಿರಾ, ಮನೋಜ್, ವಿನಯ್, ಕುಮಾರ್, ಲೋಕೇಶ್ ಕುಮಾರ್, ನಾಗರತ್ನಾ ಮಂಜುನಾಥ್, ಉತ್ತನಹಳ್ಳಿ ಶಿವಣ್ಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.