ADVERTISEMENT

ಮೈಸೂರು | ಸಮಪಾಲು–ಸಮಬಾಳು ಸಂವಿಧಾನದ ಆಶಯ: ಪ್ರೊ.ಎಸ್.ಆರ್.ನಿರಂಜನ

ದಸರಾ: ‘ಪ್ರಭುತ್ವ ಮತ್ತು ಸಂವಿಧಾನದ ಆಶಯ’ ರಾಷ್ಟ್ರೀಯ ಸಮ್ಮೇಳನ ಆರಂಭ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 4:57 IST
Last Updated 6 ಅಕ್ಟೋಬರ್ 2024, 4:57 IST
ಮೈಸೂರಿನಲ್ಲಿ ಶನಿವಾರ ಆರಂಭವಾದ ‘ಪ್ರಭುತ್ವ ಮತ್ತು ಸಂವಿಧಾನದ ಆಶಯ’ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪ್ರೊ.ಎಸ್.ಆರ್.ನಿರಂಜನ ಸೇರಿದಂತೆ ಗಣ್ಯರು ಪುಷ್ಪನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ಶನಿವಾರ ಆರಂಭವಾದ ‘ಪ್ರಭುತ್ವ ಮತ್ತು ಸಂವಿಧಾನದ ಆಶಯ’ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪ್ರೊ.ಎಸ್.ಆರ್.ನಿರಂಜನ ಸೇರಿದಂತೆ ಗಣ್ಯರು ಪುಷ್ಪನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಡಾ.ಬಿ.ಆರ್. ಅಂಬೇಡ್ಕರ್‌ ಅವರು ನೀಡಿರುವ ಸಂವಿಧಾನದ ಆಶಯಗಳು ಈಡೇರಬೇಕಾದರೆ ಸರ್ವರಿಗೂ ಸಮಪಾಲು– ಸಮಬಾಳು‌ ದೊರೆಯಬೇಕು’ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಆಶಯ ವ್ಯಕ್ತಪಡಿಸಿದರು.

‘ದಸರಾ ರಾಷ್ಟ್ರೀಯ ಸಮ್ಮೇಳನ ಉಪ ಸಮಿತಿ’, ಜಿಲ್ಲಾಡಳಿತ ಮತ್ತು ಮೈಸೂರು ವಿವಿಯ ಡಾ.ಬಿ.ಆರ್. ಅಂಬೇಡ್ಕರ್‌ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ಸಹಯೋಗದಲ್ಲಿ ‘ಸಂವಿಧಾನ ಅಂಗೀಕಾರದ ಅಮೃತ ಮಹೋತ್ಸವ’ದ ಅಂಗವಾಗಿ ‘ಪ್ರಭುತ್ವ ಮತ್ತು ಸಂವಿಧಾನದ ಆಶಯ’ ವಿಷಯದ ಕುರಿತು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಆಯೋಜಿಸಿದ್ದ ಎರಡು ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘100ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ಪ್ರತಿಯೊಬ್ಬರೂ ಆರ್ಥಿಕವಾಗಿ ಸಬಲಗೊಳ್ಳಬೇಕು. ಸಾಮಾಜಿಕ ಪ್ರಗತಿ ಸಾಧಿಸಬೇಕು. ಇಡೀ ದೇಶದಲ್ಲಿ ಇ–ಆಡಳಿತ ಜಾರಿಗೆ ಬಂದರೆ ವಿಕಸಿತ ಭಾರತ ಸಾಧ್ಯವಾಗಲಿದೆ. ಸಮಾನತೆ ಬರಬೇಕು. ಬಡತನ ಹಾಗೂ ಹಸಿವು ನೀಗಬೇಕು. ಆಗ, ಸಂವಿಧಾನದ ಆಶಯಗಳು ಈಡೇರುತ್ತವೆ’ ಎಂದರು.

ADVERTISEMENT

ಸಂವಿಧಾನ ನೀಡಿದ್ದನ್ನು ನೆನೆಯಬೇಕು: ‘ಸಂವಿಧಾನ ಹಾಗೂ ಅದು ನಮಗೆ ಯಾವ್ಯಾವ ರೀತಿಯಲ್ಲಿ ಆಶ್ರಯ ಕೊಟ್ಟಿದೆ ಎಂಬುದನ್ನೂ ತಿಳಿದುಕೊಳ್ಳಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಹಲವು ಸವಾಲುಗಳಿದ್ದವು. ಆಹಾರ ಭದ್ರತೆ ಇರಲಿಲ್ಲ; ಸಂಪರ್ಕ ಕಷ್ಟವಿತ್ತು. ಸಂವಿಧಾನ ಬಂದ ಮೇಲೆ ಏನೆಲ್ಲಾ ಅನುಕೂಲಗಳು ಆಗಿವೆ ಎಂಬುದನ್ನು ಅರಿಯಬೇಕು. ಈಗ ಆಹಾರ ಭದ್ರತೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ಸಂವಹನ–ಸಂಪರ್ಕ ಸುಗಮವಾಗಿದೆ. ತಂತ್ರಜ್ಞಾನದಲ್ಲಿ ಬಹಳಷ್ಟು ಸುಧಾರಣೆಯಾಗಿದೆ. ಮೊಬೈಲ್ ಫೋನ್‌ನಲ್ಲೇ ಎಲ್ಲವೂ ದೊರೆಯುತ್ತಿದೆ. ಆದರೆ, ಬಡತನ ಇಂದಿಗೂ ನಿವಾರಣೆಯಾಗಿಲ್ಲ’ ಎಂದು ಹೇಳಿದರು.

ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದ ಪತ್ರಕರ್ತ ಮನೋಜ್ ಮಿತ್ತ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿದರು.

ಬೆಂಗಳೂರಿನ ಇಂಡಿಯಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ ಕುಲಪತಿ ಪ್ರೊ.ಸುಧೀರ್‌ ಕೃಷ್ಣಸ್ವಾಮಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ, ಹುಣಸೂರು ಉಪ ವಿಭಾಗಾಧಿಕಾರಿ ಎಚ್‌.ಬಿ. ವಿಜಯ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್‌ ಸಂಶೋಧನಾ ಸಂಸ್ಥೆಯ ಸಲಹೆಗಾರ ಬಸವರಾಜ ದೇವನೂರು, ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಪ್ರೊ.ನರೇಂದ್ರ ಕುಮಾರ್ ಪಾಲ್ಗೊಂಡಿದ್ದರು.

ನಂತರ ಗೋಷ್ಠಿಗಳು ನಡೆದವು.

ಸೆನೆಟ್‌ ಭವನದಲ್ಲಿ ಆಯೋಜನೆ ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ಭಾಗಿ ಎಲ್ಲರೂ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು

ಯುವಜನರು ಅಂಬೇಡ್ಕರ್ ಅವರ ಬಗ್ಗೆ ತಿಳಿದುಕೊಳ್ಳಬೇಕು. ಅವರ ಆಶಯಗಳನ್ನು ಪಾಲಿಸಬೇಕು -ಪ್ರೊ.ಎಸ್.ಆರ್. ನಿರಂಜನ ಉಪಾಧ್ಯಕ್ಷ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.