ADVERTISEMENT

ಎಚ್.ಡಿ.ಕೋಟೆ | ನಾಗರಹೊಳೆ ಉದ್ಯಾನವನದಲ್ಲಿ 210 ಕಿ.ಮೀ ಬೆಂಕಿರೇಖೆ ನಿರ್ಮಾಣ

ಕಾಳ್ಗಿಚ್ಚು ತಡೆಗಟ್ಟಲು ಅರಣ್ಯ ಇಲಾಖೆ ಕ್ರಮ

ಸತೀಶ್‌ ಬಿ
Published 12 ಫೆಬ್ರುವರಿ 2022, 4:51 IST
Last Updated 12 ಫೆಬ್ರುವರಿ 2022, 4:51 IST
ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ವನ್ಯಜೀವಿ ವಲಯದಲ್ಲಿ ಬೆಂಕಿ ರೇಖೆ ನಿರ್ಮಿಸಲಾಯಿತು
ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ವನ್ಯಜೀವಿ ವಲಯದಲ್ಲಿ ಬೆಂಕಿ ರೇಖೆ ನಿರ್ಮಿಸಲಾಯಿತು   

ಎಚ್.ಡಿ.ಕೋಟೆ: ಬೇಸಿಗೆಯಲ್ಲಿ ನಾಗರ ಹೊಳೆ ಉದ್ಯಾನವನದಲ್ಲಿ ಸಂಭವಿಸುವ ಕಾಳ್ಗಿಚ್ಚು ತಡೆಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ಅರಣ್ಯದಲ್ಲಿ ಸುಮಾರು 210 ಕಿ.ಮೀ ಬೆಂಕಿರೇಖೆ ನಿರ್ಮಿಸಿದ್ದಾರೆ. ಸ್ಥಳೀಯ ಹಾಡಿಗಳ 40 ಮಂದಿಯನ್ನು ಬೆಂಕಿ ನಂದಿಸುವ ವೀಕ್ಷಕರನ್ನಾಗಿ ನೇಮಕ ಮಾಡಿದ್ದು, ಅವರಿಗೆ ತರಬೇತಿ ನೀಡಿದ್ದಾರೆ.

ಬೇಸಿಗೆಯ ಉರಿ ಬಿಸಿಲಿಗೆ ಯಾವ ಕ್ಷಣದಲ್ಲಾದರೂ ಬೆಂಕಿ ಬೀಳುವ ಸಾಧ್ಯತೆ ಇರುತ್ತದೆ. ಕೆಲವರು ಕಾಡಿಗೆ ಬೆಂಕಿ ಇಡುವ ಸಾಧ್ಯತೆ ಇದೆ. ಹೀಗಾಗಿ, ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆಯ ಜತೆಗೆ ಅಗ್ನಿಶಾಮಕ ಸಿಬ್ಬಂದಿ ಸನ್ನದ್ಧರಾಗಿದ್ದಾರೆ. ಅಗ್ನಿಶಾಮಕ ವಾಹನವನ್ನೂ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ಅಗ್ನಿಶಾಮಕ ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗಿದೆ.

ADVERTISEMENT

ಡ್ರೋನ್ ಕಣ್ಗಾವಲು: ಅರಣ್ಯ ಇಲಾಖೆ ಅಧಿಕಾರಿಗಳು ಡ್ರೋನ್ ಕ್ಯಾಮೆರಾ ಮೂಲಕ ಅರಣ್ಯದ ಮೇಲೆ ನಿಗಾ ಇಡುತ್ತಿದ್ದಾರೆ. ಅಪಾಯ ಅಥವಾ ಬೆಂಕಿ ಅನಾಹುತಗಳನ್ನು ಗುರುತಿಸುವಂತೆ ವಿಶೇಷವಾಗಿ ವಿನ್ಯಾಸಗೊಳಿಸಿದ ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಸ್ಯಾಟಲೈಟ್‍ನಿಂದಲೂ ಬೆಂಕಿ ಅನಾಹುತದ ಸ್ಥಳದ ಮಾಹಿತಿ ಮತ್ತು ಜಿಪಿಎಸ್ ಬರುವಂತೆ ತಂತ್ರಾಂಶವನ್ನು ಸಿದ್ಧಪಡಿಸಲಾಗಿದೆ’ ಎಂದು ಅಂತರಸಂತೆ ಅರಣ್ಯಾಧಿಕಾರಿ ಸಿದ್ದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂತರಸಂತೆ ವನ್ಯಜೀವಿ ವಿಭಾಗದಲ್ಲಿ ಶೇ 40ರಷ್ಟು ಸಿಬ್ಬಂದಿ ಯನ್ನು ವೀಕ್ಷಣಾ ಗೋಪುರಗಳಲ್ಲಿ ರಾತ್ರಿ ಗಸ್ತಿನಲ್ಲಿರಲು ಸೂಚಿಸಲಾಗಿದೆ. ಎರಡು ಹೆಚ್ಚುವರಿ ವಾಹನಗಳು, 2 ಸಾವಿರ ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕ್ ಹಾಗೂ ಒಂದು ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕ್‍ಗಳು, ಬ್ಯಾಟರಿ ಚಾಲಿತ ಪವರ್ ಸ್ಪ್ರೇಯರ್‌, 50 ಮೀ. ಎತ್ತರಕ್ಕೆ ನೀರನ್ನು ಹಾರಿಸಬಲ್ಲ ಉಪಕರಣಗಳನ್ನು ಸಿದ್ಧಪಡಿಸಲಾಗಿದೆ’ ಎಂದರು.

ಕಳೆದ ಬಾರಿ ನಾಗರಹೊಳೆಯ ಅಂತರಸಂತೆ ವಲಯದಲ್ಲಿ ಕಾಳ್ಗಿಚ್ಚು ಸಂಭವಿಸಿ, ಅರಣ್ಯ ಸಂಪತ್ತು ನಾಶವಾಗಿತ್ತು.

ಸ್ಥಳೀಯರಿಗೆ ಅರಿವು
ಸ್ಥಳೀಯರಿಗೆ ಕಾಳ್ಗಿಚ್ಚಿನ ಬಗ್ಗೆ ಅರಿವು ಮೂಡಿಸಲು ಅರಣ್ಯ ಇಲಾಖೆ ಈಗಾಗಲೇ ಬೀದಿನಾಟಕ, ಪಂದ್ಯಾವಳಿ ಗಳನ್ನು ಆಯೋಜಿಸುತ್ತಿದೆ. ಕರಪತ್ರ, ಭಿತ್ತಿಪತ್ರಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.