ಮೈಸೂರು: ತಾಲ್ಲೂಕಿನ ಮಾರ್ಬಳ್ಳಿ ಗ್ರಾಮದಲ್ಲಿ ವಿಷಾಹಾರ ಸೇವಿಸಿ 39 ಜನರಿಗೆ ಹೊಟ್ಟೆನೋವು, ವಾಂತಿ, ಭೇದಿ ಕಾಣಿಸಿಕೊಂಡಿದೆ.
ಗ್ರಾಮದಲ್ಲಿ ಮೇ 31ರಂದು ಗ್ರಾಮಸ್ಥರೊಬ್ಬರ ಗೃಹ ಪ್ರವೇಶ ನಡೆದಿತ್ತು. ಉಳಿದಿದ್ದ ಆಹಾರ ಪದಾರ್ಥವನ್ನು ಮರುದಿನ ಬೆಳಿಗ್ಗೆ ನೆರೆ ಮನೆಯವರು ಹಾಗೂ ಬಂಧುಗಳಿಗೆ ನೀಡಿದ್ದರು. ಸುರಕ್ಷತೆ ಇಲ್ಲದೆ ಇಡಲಾಗಿದ್ದ ಆಹಾರವನ್ನು ಸಮಯದ ಮಿತಿ ಮೀರಿದ ಬಳಿಕ ಜೂನ್ 2ರಂದು ಕೆಲವರು ಸೇವಿಸಿದ್ದಾರೆ. ಆ ಬಳಿಕ ವಾಂತಿ ಭೇದಿ ಆರಂಭವಾಗಿದೆ ಎನ್ನಲಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮಾಹಿತಿ ನೀಡುತ್ತಿದ್ದಂತೆ ವೈದ್ಯಕೀಯ ತಂಡ ಗ್ರಾಮಕ್ಕೆ ತೆರಳಿ ತಪಾಸಣೆ ಕಾರ್ಯ ನಡೆಸಿದೆ.
‘ಶನಿವಾರ 26 ಜನರಿಗೆ ಹಾಗೂ ಭಾನುವಾರ 13 ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಅವರಲ್ಲಿ 17 ಮಂದಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು, ಚೇತರಿಸಿಕೊಂಡಿದ್ದಾರೆ’ ಎಂದು ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ ಮಾಹಿತಿ ನೀಡಿದರು.
‘ಇಲಾಖೆಯಿಂದ ಗ್ರಾಮ ಪಂಚಾಯಿತಿ ಆವರಣದಲ್ಲಿರುವ ಗ್ರಂಥಾಲಯದಲ್ಲಿ ತಾತ್ಕಾಲಿಕ ಚಿಕಿತ್ಸಾಲಯ ತೆರೆದು 24 ಗಂಟೆಯೂ ಸೇವೆ ನೀಡುತ್ತಿದ್ದೇವೆ. ಮೂರು ವೈದ್ಯರು, ಮೂವರು ಸಮುದಾಯ ವೈದ್ಯಾಧಿಕಾರಿ, ಸುರಕ್ಷತಾ ಅಧಿಕಾರಿಗಳು, ಆರು ಜನ ಹಿರಿಯ ಆರೋಗ್ಯ ನಿರೀಕ್ಷಕರು, ಹತ್ತು ಮಂದಿ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದರು.
ನೀರಿನ ಪರೀಕ್ಷೆ: ಗ್ರಾಮದಲ್ಲಿ ಕುಡಿಯುವ ನೀರಿನ ಮೂಲಗಳ ತಪಾಸಣೆ ಮಾಡಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರು ಪಡೆಯುತ್ತಿರುವ ಕಾರಣ ಸಮಸ್ಯೆಯಿಲ್ಲ ಎಂದು ಪಂಚಾಯಿತಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆಹಾರ ಸೇವನೆಯಿಂದ ನಡೆದಿರುವ ಪ್ರಕರಣವೆಂದು ದೃಢವಾಗುತ್ತಿದ್ದಂತೆ ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಲಾಯಿತು.
ಸಿಇಒ ಭೇಟಿ, ಸಭೆ: ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರು. ಡಿಎಚ್‌ಒ ಕುಮಾರಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಎ.ಎಸ್.ರಂಜಿತ್ ಕುಮಾರ್, ಜಿಲ್ಲಾ ಸರ್ವೆಕ್ಷಣಾ ಅಧಿಕಾರಿ ಡಾ.ಮಹದೇವ ಪ್ರಕಾಶ್, ತಾಲ್ಲೂಕು ಆರೋಗ್ಯಾಧಿಕಾರಿ ಪುಟ್ಟತಾಯಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.