ADVERTISEMENT

ಹುಣಸೂರು | ಸತತ ಮಳೆಗೆ ಜನಜೀವನ ಅಸ್ತವ್ಯಸ್ತ: ಮುಳುಗಿದ ಬಡಾವಣೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 14:43 IST
Last Updated 18 ಜುಲೈ 2024, 14:43 IST
ಹುಣಸೂರು ನಗರದ ಶಬ್ಬೀರ್ ಬಡಾವಣೆಯ ತಗ್ಗು ಪ್ರದೇಶಕ್ಕೆ ಮಳೆ ನೀರು ನುಗ್ಗಿ ಕೆರೆಯಂತಾಗಿರುವುದು
ಹುಣಸೂರು ನಗರದ ಶಬ್ಬೀರ್ ಬಡಾವಣೆಯ ತಗ್ಗು ಪ್ರದೇಶಕ್ಕೆ ಮಳೆ ನೀರು ನುಗ್ಗಿ ಕೆರೆಯಂತಾಗಿರುವುದು   

ಹುಣಸೂರು: ತಾಲ್ಲೂಕಿನಾದ್ಯಂತ ಗುರುವಾರ ಸತತವಾಗಿ 7 ಗಂಟೆಗಳ ಕಾಲ 56 ಮಿ.ಮೀ. ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು.

ಬೆಳಗ್ಗೆ 8ಕ್ಕೆ ಆರಂಭವಾಗಿ ಮಧ್ಯಾಹ್ನ 3 ಗಂಟೆವರೆಗೂ ಭಾರಿ ಮಳೆ ಸುರಿದ ಕಾರಣ ವಾರದ ಸಂತೆ ಸಂಪೂರ್ಣ ಬಂದ್ ಮಾಡಲಾಗಿದ್ದು, ಕೂಲಿ ಕಾರ್ಮಿಕರಿಗೆ ವಾರಕ್ಕೆ ಅಗತ್ಯ ಬೇಕಿರುವ ಪಡಿತರ ಖರೀದಿಸಲು ಸಾಧ್ಯವಾಗಲಿಲ್ಲ. ಹುಣಸೂರು ಪಟ್ಟಣದ ಬಹುತೇಕ ಶಾಲೆಗಳು ಮಧ್ಯಾಹ್ನ ರಜೆ ಘೋಷಿಸಿ ಶಾಲಾ ಬಸ್‌ಗಳಲ್ಲಿ ಮಕ್ಕಳನ್ನು ಮನೆಗೆ ಬಿಡುವತ್ತ ಕ್ರಮವಹಿಸಿದ್ದರು.

ಮಂಜುನಾಥ ಬಡಾವಣೆಯ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದ್ದು, ಬಡಾವಣೆ ನಿವಾಸಿಗರು ನಗರಸಭೆಗೆ ಹಿಡಿಶಾಪಹಾಕಿದರು. ನಗರೋತ್ಥಾನ ಯೋಜನೆಯಲ್ಲಿ ಕಾಮಗಾರಿ ಆರಂಭವಾಗಿ 8 ತಿಂಗಳು ಕಳೆದಿದ್ದರೂ ಪೂರ್ಣಗೊಂಡಿಲ್ಲ. ಮಳೆ ನೀರು ಮನೆಗೆ ನುಗ್ಗುವ ಪರಿಸ್ಥಿತಿ ಈ ಮುಂಗಾರಿಗೂ ಮುಂದುವರೆದಿದೆ. ಕಳೆದ 10 ವರ್ಷದಿಂದ ಈ ಸಮಸ್ಯೆಯಲ್ಲೇ ಬದುಕು ಕಟ್ಟಿಕೊಂಡಿದ್ದು, ಈ ಬಾರಿ ಎಲ್ಲವೂ ಸರಿಹೋಗುವ ವಿಶ್ವಾಸದಲ್ಲಿದ್ದೆವು, ಆದರೆ ಹುಸಿಯಾಗಿದೆ ಎಂದು ನಿವಾಸಿಗರು ಆಕ್ರೋಶ ಹೊರ ಹಾಕಿದರು.

ADVERTISEMENT

ಶಬ್ಬೀರ್ ನಗರ ಬಡಾವಣೆಯ ತಗ್ಗುಪ್ರದೇಶದ ನಿವಾಸಿಗರ ಗೋಳು ಹೇಳತೀರದಾಗಿತ್ತು. ಮಂಜುನಾಥ ಬಡಾವಣೆಯಿಂದ ಹರಿದು ಬರುವ ಮಳೆ ನೀರು ಶಬ್ಬೀರ್ ನಗರದಲ್ಲಿ ಸಂಗ್ರಹವಾಗಿ ಬಡಾವಣೆ ಸಂಪೂರ್ಣ ಜಲಾವೃತವಾಗಿದ್ದು, ಪ್ರಮುಖ ರಸ್ತೆ ಬಂದ್ ಆಗಿತ್ತು.

ಉರುಳಿದ ಮರಗಳು: ಸತತ 7 ಗಂಟೆ ಮಳೆಗೆ ಸಾಲು ಮರಗಳು ನಗರದ ವಿವಿಧ ಬಡಾವಣೆಯಲ್ಲಿ ಧರೆಗುರುಳಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಕಲ್ಕುಣಿಕೆ ಗರಡಿ ಮರದ ಬೀದಿಯಲ್ಲಿ ತೆಂಗಿನ ಮರ ಬಿದ್ದು ಎರಡು ಕಂಬ ಸಂಪೂರ್ಣ ಜಖಂಗೊಂಡಿದೆ. ಇದಲ್ಲದೆ ಬಸ್ ಡಿಪೊ, ದಾವಣಿ ಬೀದಿ ರಸ್ತೆಯಲ್ಲಿ ಮರ ಉರುಳಿದ್ದು ಸೆಸ್ಕ್ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

ಕೊಡಗು ಮತ್ತು ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ಲಕ್ಷ್ಮಣತೀರ್ಥ ನದಿ ಭೋರ್ಗರೆದು ಕಾವೇರಿ ಸೇರುತ್ತಿದೆ. ‘ಹಾರಂಗಿ ನೀರಾವರಿ ಇಲಾಖೆ ದಾಖಲೆ ಪ್ರಕಾರ ಗುರುವಾರ 5,700 ಕ್ಯುಸೆಕ್ ನೀರು ಹೊರ ಹರಿದಿದೆ’ ಎಂದು ಇಲಾಖೆ ಅಧಿಕಾರಿ ವಿಜೇಂದ್ರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಹುಣಸೂರು ನಗರದ ಮಂಜುನಾಥ ಬಡಾವಣೆಯ ತಗ್ಗು ಪ್ರದೇಶಕ್ಕೆ ಮಳೆ ನೀರು ಹರಿದ ಪರಿಣಾಮ ಮನೆಗಳಿಗೆ ನೀರು ನುಗ್ಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.