ಮೈಸೂರು: ಮತಾಂತರ ನಿಷೇಧ ಅಂದರೆ ತಳ ಸಮುದಾಯಗಳ ಸ್ವಾತಂತ್ರ್ಯ ಹರಣ ಎಂದು ಸಾಹಿತಿ ಅರವಿಂದ ಮಾಲಗತ್ತಿ ತಿಳಿಸಿದರು.
ಕರ್ನಾಟಕ ದಲಿತ ವೆಲ್ ಫೇರ್ ಟ್ರಸ್ಟ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣದಿನದ ಅಂಗವಾಗಿ ಇಲ್ಲಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ಮತಾಂತರ ನಿಷೇಧ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಪರಂಪರೆಯಿಂದ ಸಹಜವಾಗಿ ನಡೆದುಕೊಂಡು ಬಂದ ಪ್ರಕ್ರಿಯೆ ಮತಾಂತರ. ಇದರ ನಿಷೇಧವು ಹರಿಯುವ ನೀರಿಗೆ, ಬೀಸುವ ಗಾಳಿಗೆ ಕಾಲುಕಟ್ಟುವ ಪ್ರಕ್ರಿಯೆಯಂತೆ ಕಾಣಿಸುತ್ತಿದೆ. ಪ್ರಾಕೃತಿಕ ಸಹಜತೆಗೆ ಅಡೆತಡೆ ಒಡ್ಡಿದರೆ ಸಂಘರ್ಷಕ್ಕೆ ಅನುವು ಮಾಡಿಕೊಟ್ಟು, ಛಿದ್ರೀಕರಣಕ್ಕೆ ಅವಕಾಶ ಮಾಡಿಕೊಟ್ಡಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮತಾಂತರ ಪಿಡುಗು ಅಲ್ಲ. ಮತಾಂತರ ನಿಷೇಧ ಎನ್ನುವುದೇ ದೊಡ್ಡ ಪಿಡುಗು ಎಂದರು.ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇದೆ. ಆದರೆ, ಸಂವಿಧಾನದಲ್ಲಿ ಮತಾಂತರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ, ನೈತಿಕತೆಯ ಮಿತಿಗಳಿವೆ. ಮುಕ್ತವಾಗಿ ಧರ್ಮವನ್ನು ಬೋಧಿಸುವ ಪಾಲಿಸುವ ಹಕ್ಕನ್ನೂ ನೀಡಲಾಗಿದೆ ಎಂದು ಹೇಳಿದರು.
ಅಸೆ ಆಮಿಷಗಳನ್ನು ಒಡ್ಡಿ ಬಲವಂತವಾಗಿ ಮತಾಂತರ ಮಾಡುವುದನ್ನು ನಿಷೇಧಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಅಂಶ ಈಗಾಗಲೇ ಸಂವಿಧಾನದಲ್ಲೇ ಇರುವುದರಿಂದ ಇದಕ್ಕೆ ಪ್ರತ್ಯೇಕವಾಗಿ ಕಾಯ್ದೆ ಮಾಡುವ ಅಗತ್ಯ ಇಲ್ಲ . ಮುಖ್ಯಮಂತ್ರಿ ಈ ವಿಷಯವನ್ನು ಇನ್ನೊಮ್ಮೆ ಪರಿಶೀಲಿಸಬೇಕು. ಇಲ್ಲದಿದ್ದರೆ ಕೋಮುವಾದ, ದಬ್ಬಾಳಿಕೆ ಹೆಚ್ಚುತ್ತದೆ ಎಂದು ತಿಳಿಸಿದರು.
ಆರ್ ಎಸ್ ಎಸ್ ಸಂಘಟನೆಗೆ ಸದಸ್ಯರಾಗುವವರು ಅಂತರ್ಜಾತಿ ವಿವಾಹ ಮಾಡಿಕೊಳುವುದನ್ನು ಕಡ್ಡಾಯಗೊಳಿಸಿದರೆ ದೇಶದ ಅಖಂಡತೆ ಉಳಿಯುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.