ಮೈಸೂರು: ಹಲಸಿನ ಹಣ್ಣು ಮಾರಾಟ ಮಾಡುತ್ತಿದ್ದ ಕಾಳೇಗೌಡ ಎಂಬವರನ್ನು ದೊಣ್ಣೆಯಿಂದ ಹೊಡೆದು ಕೊಂದಿದ್ದ ಕೆ.ಜಿ.ಕೊಪ್ಪಲಿನ ಟಿ.ನಿತ್ಯಾನಂದಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿದೆ.
2015ರ ಜುಲೈ 2ರಂದು ಸರಸ್ವತಿಪುರಂನ ಕಾಂತರಾಜ ಅರಸು ರಸ್ತೆಯಲ್ಲಿ ಕಾಳೇಗೌಡ ಅವರು ಹಲಸಿನ ಹಣ್ಣನ್ನು ಮಾರಾಟ ಮಾಡುತ್ತಿದ್ದಾಗ ಬಂದ ಟಿ.ನಿತ್ಯಾನಂದ ತಾನು ರೌಡಿ, ಉಚಿತವಾಗಿ ಹಣ್ಣು ನೀಡುವಂತೆ ಬೆದರಿಸಿದ್ದನು. ಇದಕ್ಕೆ ಒಪ್ಪದಿದ್ದ ಕಾಳೇಗೌಡನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯೊಂದ ತಲೆಗೆ ಮಾರಣಾಂತಿಕವಾಗಿ ಹೊಡೆದು ಹಲ್ಲೆ ಮಾಡಿದ್ದನು.
ಕಾಳೇಗೌಡ ಅವರನ್ನು ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ದೂರು ದಾಖಲಿಸಿಕೊಂಡಿದ್ದ ಸರಸ್ವತಿಪುರಂ ಪೊಲೀಸ್ ಠಾಣೆ ಸಿಬ್ಬಂದಿಯು ತನಿಖೆ ನಡೆಸಿ ನಿತ್ಯಾನಂದ ಕೊಲೆ ಮಾಡಿರುವುದಾಗಿ ದೋಷಾರೋಪವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶೆ ವನಮಾಲ ಯಾದವ ಅವರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಜಿತ್ ಕುಮಾರ್ ಡಿ. ಹೆಮಿಗಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.