ADVERTISEMENT

ಅಡುಗೆ ಸ್ಫರ್ಧೆ: ಸೊಪ್ಪು ಸೃಷ್ಟಿಸಿದ ಖಾದ್ಯ ಚಿತ್ತಾರ!

ಸಹಜ ಸಮೃದ್ಧ ಸಂಸ್ಥೆಯಿಂದ ಸೊಪ್ಪಿನ ಅಡುಗೆ ಸ್ಫರ್ಧೆ; ವಿವಿಧ ಬಗೆ ಆಹಾರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 14:38 IST
Last Updated 22 ಸೆಪ್ಟೆಂಬರ್ 2024, 14:38 IST
ಮೈಸೂರಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಸಹಜ ಸಮೃದ್ಧ ಸಂಸ್ಥೆಯಿಂದ ಭಾನುವಾರ ನಡೆದ ಸೊಪ್ಪಿನ ಅಡುಗೆ ಸ್ಪರ್ಧೆಯಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ಸ್ಪರ್ಧಿಗಳು ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ
ಮೈಸೂರಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಸಹಜ ಸಮೃದ್ಧ ಸಂಸ್ಥೆಯಿಂದ ಭಾನುವಾರ ನಡೆದ ಸೊಪ್ಪಿನ ಅಡುಗೆ ಸ್ಪರ್ಧೆಯಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ಸ್ಪರ್ಧಿಗಳು ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ   

ಮೈಸೂರು: ನಂಜನಗೂಡಿನ ರತ್ನಮ್ಮ ತಯಾರಿಸಿದ ಸೀಗೆ ಸೋಪ್ಪಿನ ಉಪ್ಪೆಸರು, ನಾಗಮ್ಮ ಅವರು ತಂದಿದ್ದ ಈರುಳ್ಳಿ ಸೊಪ್ಪಿನ ಪಲ್ಯ, ಭಾಗ್ಯಾಶಂಕರ್ ಪ್ರದರ್ಶಿಸಿದ ಛಾಯಮಾನಸ ಸೊಪ್ಪು, ಮೂಲಂಗಿ ಸೊಪ್ಪು, ಬೆರಕೆ ಸೊಪ್ಪಿನ ಪಲ್ಯಗಳು ಹಾಗೂ ಸ್ಪರ್ಧೆಯಲ್ಲಿದ್ದ ಸೊಪ್ಪಿನ ಹಲ್ವ, ಇಡ್ಲಿ, ದೋಸೆಗಳು, ದೊಡ್ಡ ಪತ್ರೆ ಪಕೋಡ ನೋಡುಗರ ಬಾಯಲ್ಲಿ ನೀರೂರಿಸಿದವು.

ಇಲ್ಲಿನ ನಂಜರಾಜ ಛತ್ರದಲ್ಲಿ ಸಹಜ ಸಮೃದ್ಧ ಸಂಸ್ಥೆಯಿಂದ ಆಯೋಜಿಸಿದ್ದ ಸೊಪ್ಪು ಮೇಳದಲ್ಲಿ ಭಾನುವಾರ ನಡೆದ ಸೊಪ್ಪಿನ ಅಡುಗೆ ಸ್ಪರ್ಧೆಯು ಹಲವು ಬಗೆಯ ಆಹಾರಗಳ ಖಾದ್ಯಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿತು.

ನಗರ ಮಾತ್ರವಲ್ಲದೇ ಜಿಲ್ಲೆಯ ಹಲವು ಭಾಗಗಳಿಂದ ಬಂದಿದ್ದ ಮಹಿಳೆಯರು, ಪುರುಷರು ತಮ್ಮ ಅಡುಗೆಯ ಕೈರುಚಿಯನ್ನು ಪ್ರದರ್ಶಿಸಿದರು. ಪಾಲಾಕ್‌ ಕಲಾಕಂದ್‌, ಸಬ್ಬಕ್ಕಿ ಸೊಪ್ಪು ರೊಟ್ಟಿ, ನುಗ್ಗೆ ಸೊಪ್ಪಿನ ಪಲ್ಯ, ಬಸಳೆ ಬೋಂಡಾ, ಮೆಂತೆ ಸೊಪ್ಪಿನ ಬಾತ್‌, ಮಿಕ್ಸ್‌ ಸೊಪ್ಪಿನ ವಡೆ, ಸಬ್ಬಸ್ಸಿಗೆ ವಡೆ, ಒಂದೆಲಗ ಪೂರಿ, ಕರಿಬೇವು, ನುಗ್ಗೆ ಸೊಪ್ಪಿನ ಚಟ್ನಿ ಗಮನ ಸೆಳೆದವು. ಕೊಡಗಿನ ವಿಶೇಷವಾದ ಆಟಿ ಸೊಪ್ಪಿನ ಖಾದ್ಯಗಳು ಇದ್ದವು.

ADVERTISEMENT

‘ನಮ್ಮ ಮನೆ ತಾರಸಿಯಲ್ಲಿಯೇ ತರಕಾರಿ, ಸೊಪ್ಪಿನ ಕೃಷಿ ಮಾಡುತ್ತಿದ್ದು, ಅಲ್ಲಿ ಬೆಳೆದ ದೊಡ್ಡಪತ್ರೆ, ಬಾಯಿ ಬಸಳೆಯಿಂದ ಪಕೋಡ ತಯಾರಿಸಿ ತಂದಿದ್ದೇನೆ’ ಎಂದು ಅಡುಗೆ ಸ್ಪರ್ಧಿ ಸುಮತಿ ಸುರೇಶ್ ತಿಳಿಸಿದರು.

ಸ್ಪರ್ಧೆಯಲ್ಲಿ 32 ಮಂದಿ ಭಾಗವಹಿಸಿದ್ದರು. ಗುರುರಾಜ್ ಪ್ರಥಮ, ವಿ.ಸುಮನ್ ದ್ವಿತೀಯ ಹಾಗೂ ಸಿ.ಮಹೇಶ್ವರಿ ಪ್ರಸಾದ್ ತೃತೀಯ ಬಹುಮಾನ ಪಡೆದರು. ಸೊಲೋಮೆ ಮಾರ್ಗರೆಟ್, ಮನೋನ್ಮಣಿ, ಎಂ.ಲೀಲಾ, ನಾಗಮಣಿ ವಿರೂಪಾಕ್ಷ, ನವೀನ ಬಾಯಿ ಪ್ರೋತ್ಸಾಹಕರ ಬಹುಮಾನ ಪಡೆದರು. ತೀರ್ಪುಗಾರರಾಗಿ ಜಮುನಾ ಅರಸ್, ಸತೀಶ್ ಪೈ, ಬಿ.ಎಂ.ವೀಣಾ, ನೂರ್ ಫಾತಿಮಾ ಹಾಗೂ ಶ್ರೀವತ್ಸ ಭಾಗವಹಿಸಿದ್ದರು.

ಚಿತ್ರಕಲಾ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ‘ಸೊಪ್ಪಿನ ಮೇಳವು ಆಹಾರದಲ್ಲಿ ಸೊಪ್ಪಿನ ಅಗತ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಫಲವಾಗಿದೆ. ಚಿತ್ರ ಸ್ಪರ್ಧೆಯು ಮಕ್ಕಳಲ್ಲೂ ಈ ಬಗ್ಗೆ ಅರಿವು ಮೂಡಿಸಲು ಉತ್ತಮ ಮಾರ್ಗ’ ಎಂದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಸ್.ಮಂಜುನಾಥ್ ಅಂಗಡಿ, ಸುತ್ತೂರಿನ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಐಸಿಎಆರ್ ಮುಖ್ಯಸ್ಥ ಬಿ.ಎನ್.ಜ್ಞಾನೇಶ್, ಕೃಷಿಕಲಾ ಸಂಸ್ಥಾಪಕಿ ಸೀಮಾ ಜಿ.ಪ್ರಸಾದ್, ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಸಂಪನ್ಮೂಲ ವ್ಯಕ್ತಿ ಎಂ.ಶಿವಕುಮಾರ್, ಕಲಿಸು ಫೌಂಡೇಶನ್ ನರಸಿಂಹಮೂರ್ತಿ, ಸಹಜ ಸಮೃದ್ಧದ ಸ್ಥಾಪಕ ಜಿ.ಕೃಷ್ಣ ಪ್ರಸಾದ್‌ ಪಾಲ್ಗೊಂಡರು.

ಸೊಪ್ಪಿನ ಅಡುಗೆ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡ ಖಾದ್ಯಗಳು –ಪ್ರಜಾವಾಣಿ ಚಿತ್ರ
ರೂಪಾ
ವನಗನೆ ಸೊಪ್ಪಿನ ಪಲ್ಯ ಸಿರಿಧಾನ್ಯದ ರೊಟ್ಟಿ ತಯಾರಿಸಿದ್ದು ಅಡುಗೆ ಸ್ಪರ್ಧೆಯಲ್ಲಿ ಪ್ರಥಮ ಬಾರಿ ಭಾಗವಹಿಸುತ್ತಿರುವುದು ಸಂಭ್ರಮ ತಂದಿದೆ
ರೂಪಾ ಸುಜ್ಜಲೂರು ತಿ.ನರಸೀಪುರ

ಸೊಪ್ಪಿನ ಮಹತ್ವ ಸಾರಲು ಚಿತ್ರಕಲಾ ಸ್ಪರ್ಧೆ

ಸೊಪ್ಪಿನ ಅಗತ್ಯ ಮತ್ತು ಬಳಕೆಯ ಕುರಿತು ಜಾಗೃತಿಗಾಗಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ನಾಲ್ಕನೇ ತರಗತಿ ಒಳಗಿನ ಮಕ್ಕಳ ವಿಭಾಗದಲ್ಲಿ ಬಿ. ಪುನರ್‌ದತ್ತ ಪ್ರಥಮ ಎಂ.ಪ್ರಣತಿ ದ್ವಿತೀಯ ಜಿ.ಎಸ್.ಸೊಹಿನಿ ತೃತೀಯ ಸ್ಥಾನ ಹಾಗೂ ಎಸ್.ಕೆ.ರಿಷಿಕಾ ನಂದಿ ಎಂ.ವಿಶ್ವಾಸ್ ಪ್ರೋತ್ಸಾಹಕರ ಬಹುಮಾನ ಪಡೆದರು. ಐದರಿಂದ ಏಳನೇ ತರಗತಿ ಮಕ್ಕಳ ವಿಭಾಗಗಳಲ್ಲಿ ತನ್ವಿ ರೆಡ್ಡಿ ಪ್ರಥಮ ಸಿರಿಶ ಹುಡುಪದ್ ದ್ವಿತೀಯ ಹಾಗೂ ರಶ್ಮಿ ತೃತೀಯ ಸ್ಥಾನ ಪಡೆದರು. ಚಾರುಮಿತ್ರ ಮತ್ತು ವಿ.ಮನೋಜ್ ಅವರಿಗೆ ಪ್ರೋತ್ಸಾಹಕರ ಬಹುಮಾನ ದೊರೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.