ಮೈಸೂರು: ‘ಮೃಗಾಲಯ ನಿರ್ವಹಣೆ ಸವಾಲಿನಿಂದ ಕೂಡಿದೆ. ವನ್ಯಜೀವಿಗಳ ಪುನರ್‌ವಸತಿ, ಪಾಲನೆ, ಆರೈಕೆಯಲ್ಲಿ ಪಶುವೈದ್ಯರು, ಸಿಬ್ಬಂದಿ ಹಾಗೂ ಅಧಿಕಾರಿಗಳ ನಡುವೆ ಸಮನ್ವಯ ಇರಬೇಕು’ ಎಂದು ಸಿಕ್ಕಿಂನ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಸೆಂಥಿಲ್ ಕುಮಾರ್ ಪ್ರತಿಪಾದಿಸಿದರು.
ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾರತೀಯ ಅರಣ್ಯ ಸೇವೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಾಗಿ ಆಯೋಜಿಸಿದ್ದ ‘ಮೃಗಾಲಯ ವ್ಯವಸ್ಥಾಪಕರಿಗಾಗಿ ವನ್ಯಜೀವಿಗಳು ಹಾಗೂ ಮೃಗಾಲಯ ನಿರ್ವಹಣೆ’ ಕುರಿತ ಐದು ದಿನಗಳ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಮೃಗಾಲಯದಲ್ಲಿ ಅಳಿವಿನಂಚಿನ, ಜಾಗತಿಕವಾಗಿ ಕಡಿಮೆ ಸಂಖ್ಯೆಯಲ್ಲಿರುವ ವನ್ಯಜೀವಿಗಳೂ ಇವೆ. ಮನೆಯಲ್ಲಿ ಮಗುವನ್ನು ಪಾಲನೆ ಮಾಡಿದಂತೆಯೇ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಆಗ ಮಾತ್ರ ಮಾದರಿ ಮೃಗಾಲಯಗಳು ರೂಪುಗೊಳ್ಳಲು ಸಾಧ್ಯ’ ಎಂದರು ಅಭಿಪ್ರಾಯಪಟ್ಟರು.
‘ಮೃಗಾಲಯಗಳ ನಿರ್ವಹಣೆ ಮಾಡಲು ಅನುಭವ ಇರಬೇಕು. ಎಲ್ಲ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವನ್ಯಜೀವಿ ಪಾಲಕರ ಅನುಭವವನ್ನು ಬಳಸಿಕೊಂಡು ಉತ್ತಮ ವಾತಾವರಣವನ್ನು ಮೃಗಾಲಯಗಳಲ್ಲಿ ನಿರ್ಮಿಸಬೇಕು’ ಎಂದು ಸಲಹೆ ಮಾಡಿದರು.
‘ಮೈಸೂರು ಮೃಗಾಲಯ ನಿರ್ವಹಣೆಯೂ ದೇಶದ ಎಲ್ಲ ಮೃಗಾಲಯಗಳಿಗೆ ಮಾದರಿಯಾಗಿದೆ. ಹೀಗಾಗಿಯೇ ಕೇಂದ್ರ ಮೃಗಾಲಯ ಪ್ರಾಧಿಕಾರವು ಇಲ್ಲಿ ಕಾರ್ಯಾಗಾರ ಆಯೋಜಿಸಿದೆ. ತರಬೇತಿಯನ್ನು ಪಡೆದು, ಉತ್ತಮ ವ್ಯವಸ್ಥಾಪಕರಾಗಿ ಹೊರಹೊಮ್ಮಬೇಕು’ ಎಂದು ತಿಳಿಸಿದರು.
ರಾಜ್ಯ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಪನ್ವಾರ್, ‘ಮೈಸೂರು ಮೃಗಾಲಯವು ದೇಶದಲ್ಲಿಯೇ ಮಾದರಿಯಾಗಿದ್ದು, ನಿರ್ವಹಣೆ ಹಾಗೂ ಪ್ರಾಣಿಗಳ ಆರೋಗ್ಯ ಸ್ನೇಹಿ ವಾತಾವರಣದಲ್ಲಿ ಉತ್ತಮವಾಗಿದೆ. ಅರಿವೂ ಮೂಡಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಮೃಗಾಲಯಕ್ಕೆ ವಾರ್ಷಿಕ 40 ಲಕ್ಷ ಜನರು ಭೇಟಿ ನೀಡುತ್ತಿದ್ದು, ಅವರಲ್ಲಿ ಶೇ 10ರಷ್ಟು ಮಂದಿಯಲ್ಲಿ ಕಾಳಜಿ ಮೂಡಿದರೆ ಪ್ರಕೃತಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.
ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶ್ ಕುಮಾರ್ ಹಾಜರಿದ್ದರು.
ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಅನುಭವ ಬಳಸಿಕೊಳ್ಳಬೇಕು ಸಂರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.