ಮೈಸೂರು: ‘ನಗರದಲ್ಲಿ ಆಶ್ರಯ ಯೋಜನೆಯಲ್ಲಿ ಅಕ್ರಮ ನಡೆದಿರುವುದನ್ನು ತನಿಖೆ ನಡೆಸಲಾಗುವುದು’ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.
‘ಅಧಿಕಾರಿಗಳು ಶಾಮೀಲಾಗದೇ ಅಕ್ರಮ ನಡೆಯುವುದಕ್ಕೆ ಸಾಧ್ಯವೇ ಇಲ್ಲ. ಇದೆಲ್ಲವನ್ನೂ ಪರಿಶೀಲಿಸಿ ಗಂಭೀರವಾಗಿ ಪರಿಗಣಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಹೇಳಿದರು.
‘ರಾಜರಾಜೇಶ್ವರಿ ನಗರದಲ್ಲಿ ವಸತಿ ಯೋಜನೆಯಲ್ಲಿ ಮಂಜುಳಾ ಬಸವೇಗೌಡ ಎಂಬುವವರಿಗೆ 1992ರಲ್ಲಿ ಮನೆ ಮಂಜೂರಾಗಿತ್ತು. ಅವರು ಆ ಮನೆಯಲ್ಲಿ ವಾಸವಿರಲಿಲ್ಲ. ಇದನ್ನು ತಿಳಿದು, ಅಂಥಾದ್ದೇ ಹೆಸರಿನ ಮತ್ತೊಬ್ಬ ಮಹಿಳೆ ಮನೆ ನನಗೆ ಸೇರಿದ್ದು ಎಂದು 2004ರಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಮೂಲ ಫಲಾನುಭವಿಗಳನ್ನು ಒಕ್ಕಲೆಬ್ಬಿಸಿ, ಅಕ್ರಮವಾಗಿ ಆಸ್ತಿ ಮಾಡಿಕೊಳ್ಳುವವರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಕೆಲವು ದಾಖಲೆಗಳನ್ನು ಪ್ರದರ್ಶಿಸಿದರು.
‘ಸದ್ಯ ಇಂತಹ 4 ಪ್ರಕರಣಗಳು ಪತ್ತೆಯಾಗಿವೆ. ಏಕಲವ್ಯ ನಗರದಲ್ಲೂ ಇಂಥ ಅಕ್ರಮ ಬೆಳಕಿಗೆ ಬಂದಿತ್ತು. ಗುರೂರು, ರಮಾಬಾಯಿ ನಗರದಲ್ಲೂ ಇಂತಹ ಪ್ರಕರಣಗಳಿವೆ. 20ರಿಂದ 25 ವರ್ಷಗಳಿಂದ ವಾಸವಿರುವ ಕೊಳೆಗೇರಿಗಳ ಜನರಿಗೆ ಹಕ್ಕುಪತ್ರ ಇಲ್ಲದಿರುವುದರಿಂದ ಅವರನ್ನೂ ಒಕ್ಕಲೆಬ್ಬಿಸುವ ಕೆಲಸ ಆಗುತ್ತಿದೆ. ಎಲ್ಲವನ್ನೂ ತನಿಖೆ ಮಾಡಿಸಲಾಗುತ್ತದೆ. ಎಫ್‌ಐಆರ್ ದಾಖಲಿಸುವಂತೆಯೂ ಸೂಚಿಸಿದ್ದೇನೆ’ ಎಂದರು.
‘ಆಶ್ರಯ ಯೋಜನೆಗಳ ಫಲಾನುಭವಿಗಳು, ಆಸೆ–ಆಮಿಷಕ್ಕೆ ಬಲಿಯಾಗಿ ಯಾರಿಗೂ ಲಂಚ ಕೊಡಬಾರದು. ಮಹಾನಗರಪಾಲಿಕೆಗೆ ನೇರವಾಗಿ ಅರ್ಜಿ ಸಲ್ಲಿಸಬೇಕು’ ಎಂದು ತಿಳಿಸಿದರು.
‘ವಸತಿ ಯೋಜನೆಯಲ್ಲಿ ಎಲ್ಲೆಲ್ಲಿ ಅಕ್ರಮ ನಡೆದಿದೆ ಎನ್ನುವುದನ್ನು ತನಿಖೆಗೆ ಒಳಪಡಿಸಲು ತಂಡಗಳನ್ನು ರಚಿಸಲಾಗುವುದು. ಶಾಮೀಲಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಮಹಾನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.