ADVERTISEMENT

ಮೈಸೂರು: ಚಿನ್ನಾಭರಣ ದೋಚಿದ್ದ ದಂಪತಿ ಬಂಧನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 4:21 IST
Last Updated 16 ಜುಲೈ 2024, 4:21 IST
   

ಮೈಸೂರು: ಬಾಡಿಗೆ ಮನೆ ಕೇಳುವ ನೆಪದಲ್ಲಿ ನಿವೃತ್ತ ಶಿಕ್ಷಕಿಯನ್ನು ಕಟ್ಟಿ ಹಾಕಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ದಂಪತಿಯನ್ನು ಹೆಬ್ಬಾಳು ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಾಸನ ನಗರದಲ್ಲಿ ವಾಸವಿರುವ ಚಿತ್ರದುರ್ಗ ಮೂಲದ ಆರ್.ಡಿ.ವನಿತಾ (24) ಹಾಗೂ ಡಿ.ಚೇತನ್ (29) ಬಂಧಿತ ಆರೋಪಿಗಳು.

ಮೈಸೂರಿನ ಹೆಬ್ಬಾಳು ಒಂದನೇ ಹಂತದ ನಿವಾಸಿ ಮಲ್ಲಯ್ಯ ಅವರ ಪತ್ನಿ ನಿವೃತ್ತ ಶಿಕ್ಷಕಿ ಶಾಂತಮ್ಮ ಅವರು ಜು.10 ರಂದು ಮಧ್ಯಾಹ್ನ ಮನೆಯಲ್ಲಿದ್ದಾಗ ಆರೋಪಿ ದಂಪತಿ ಬಾಡಿಗೆಗೆ ಮನೆ ಬೇಕಾಗಿದೆ ಎಂದು ಬಂದಿದ್ದರು. ಮನೆ ಖಾಲಿ ಇದ್ದ ಕಾರಣ ಅವರನ್ನು ಕರೆದು ಮನೆಯೊಳಗೆ ಕೂರಿಸಿದ ಶಾಂತಮ್ಮ, ಅವರ ಬಗ್ಗೆ ವಿಚಾರಿಸಿದ್ದರು.

ADVERTISEMENT

ಮನೆ ನೋಡಿ, ನಮಗೆ ಒಪ್ಪಿಗೆಯಾಗಿದೆ ಎಂದ ದಂಪತಿ ಬೆಂಗಳೂರಿಗೆ ತೆರಳಲು ಸಂಜೆ ರೈಲಿದ್ದು, ಅಲ್ಲಿಯವರೆಗೆ ಮನೆಯಲ್ಲಿಯೇ ಇರುವುದಾಗಿ ಹೇಳಿ ಕೀ ಪಡೆದಿದ್ದರು. ಕೆಲ ಹೊತ್ತಿನ ಬಳಿಕ ಶಾಂತಮ್ಮ ಅವರಲ್ಲಿ ನೀರು ಕೇಳಿ ಒಳ ಬಂದಿದ್ದರು.

ಅವರು ಅಡುಗೆ ಮನೆಯೊಳಗೆ ತೆರಳಿದಾಗ ಹಿಂದಿನಿಂದ ಹೋಗಿ ಅವರನ್ನು ಹಿಡಿದು ಕೈ, ಕಾಲು ಕಟ್ಟಿ ಹಾಕಿ ಕೊರಳಲ್ಲಿದ್ದ 65 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು, ಕಟ್ಟಿಂಗ್ ಪ್ಲೇಯರ್‌ನಿಂದ ಕೈಯಲ್ಲಿದ್ದ 12 ಗ್ರಾಂ ಚಿನ್ನದ ಬಳೆಯನ್ನು ತುಂಡರಿಸಿ ಪರಾರಿಯಾಗಿದ್ದರು.
ಮನೆಯೊಳಗೆ ಶಾಂತಮ್ಮ ನರಳಾಡುತ್ತಿದ್ದನ್ನು ಕೇಳಿಸಿಕೊಂಡು ನೆರೆಮನೆ ನಿವಾಸಿಗಳು ಬಂದು ರಕ್ಷಣೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಶಾಂತಮ್ಮ ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ದಂಪತಿಯನ್ನು ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿ ₹5.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಕಟ್ಟಿಂಗ್ ಪ್ಲೇಯರ್, ಖಾರದ ಪುಡಿ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಜಾಹ್ನವಿ ಮತ್ತು ವಿಜಯನಗರ ವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಹೆಬ್ಬಾಳ ಠಾಣೆ ಇನ್‌ಸ್ಪೆಕ್ಟರ್‌ ಎ.ಮಲ್ಲೇಶ, ಎಸ್‌ಐಗಳಾದ ಕೀರ್ತಿ ಮತ್ತು ಪ್ರವೀಣ್, ಸಿಬ್ಬಂದಿ ಹರೀಶ್, ಮಹೇಶ್ ಹೊಸಮನಿ, ವೆಂಕಟೇಶ್, ಸುಭಾನಲ್ಲಾ ಬಾಲ್ದಾರ್, ಆಶಾ, ಟೆಕ್ನಿಕಲ್ ಸೆಲ್ವ ಕುಮಾರ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.