ADVERTISEMENT

ಸಂಸ್ಕೃತಿ, ಸಂಪ್ರದಾಯ ಉಳಿವಿಗೆ ಜಾತ್ರೆ, ಉತ್ಸವ ಸಹಕಾರಿ: ಈಶ್ವರಖಂಡ್ರೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 7:18 IST
Last Updated 25 ನವೆಂಬರ್ 2024, 7:18 IST
   

ಕೆ.ಆರ್. ನಗರ: ‘ನಮ್ಮ ಪ್ರಾಚೀನ ಸಂಸ್ಕೃತಿ, ಸಂಪ್ರದಾಯಗಳ ಉಳಿವಿಗೆ ಜಾತ್ರೆ, ಉತ್ಸವ, ಧಾರ್ಮಿಕ ಮಹೋತ್ಸವಗಳು ಸಹಕಾರಿಯಾಗಿವೆ’ ಎಂದು ಅರಣ್ಯ, ಜೀವಿವಿಜ್ಞಾನ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಜಿಲ್ಲೆಯ ಕೆ.ಆರ್. ನಗರದ ಸೋಮವಾರ ನಡೆದ ಮಲೆ ಮಹದೇಶ್ವರ ಸ್ವಾಮಿ 54ನೇ ಉತ್ಸವದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

‘ಕಾರ್ತೀಕ ಮಾಸ ಬೆಳಕಿನ ಹಬ್ಬ. ನಮ್ಮೆಲ್ಲರಲ್ಲೂ ಇರುವ ಅಜ್ಞಾನವೆಂಬ ಅಂಧಕಾರವನ್ನು ತೊಡದುಹಾಕಿ, ಸುಜ್ಞಾನವೆಂಬ ಬೆಳಕನ್ನು ಹಚ್ಚುವ ಮಾಸವೇ ಕಾರ್ತೀಕ. ಈ ಮಾಸದಲ್ಲಿ ವಿವಿಧ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಅರ್ಚನೆ, ಲಕ್ಷ ದೀಪೋತ್ಸವ ಮತ್ತು ಉತ್ಸವಗಳು ನಡೆಯುತ್ತವೆ. ಧಾರ್ಮಿಕ ವಿಚಾರಗಳ ವಿನಿಮಯವೂ ಆಗುತ್ತದೆ. ಸಹಬಾಳ್ವೆಯ ಮಹತ್ವ ಸಾರಲಾಗುತ್ತದೆ‌’ ಎಂದು ಹೇಳಿದರು.

ADVERTISEMENT

‘ಮಲೆಮಹದೇಶ್ವರ ಸ್ವಾಮಿಯವರು ಜನಪದರ ದೇವರು. ಅವರು ಹುಲಿಯ ಮೇಲೆ ಸಂಚಾರ ಮಾಡುತ್ತಿದ್ದರು ಎಂದು ಕೇಳಿದ್ದೇವೆ. ಆದರೆ, ಅವರ ಮನಸ್ಸು ಮಲ್ಲಿಗೆಯಷ್ಟೇ ಮೃದುವಾಗಿತ್ತು. ಹೀಗಾಗಿಯೇ ಅವರು ಮಲ್ಲಿಗೆ ಮಾದಪ್ಪನಾಗಿ ಜನರ ಹೃದಯದಲ್ಲಿ ನೆಲೆಸಿದ್ದಾರೆ’ ಎಂದರು.

‘15ನೇ ಶತಮಾನದಲ್ಲಿ ಜನರ ಸಂಕಷ್ಟಗಳನ್ನು ಅಲೌಕಿಕಶಕ್ತಿಯಿಂದ ಪರಿಹರಿಸಲು ಅವತರಿಸಿದ ದೈವಾಂಶ ಸಂಭೂತರಾದ ಮಹದೇಶ್ವರ ಸ್ವಾಮಿಯವರು ಬೆಟ್ಟದ ಸರಣಿಯ ರಮಣೀಯತೆಗೆ ಮನಸೋತು ಮಹದೇಶ್ವರ ಬೆಟ್ಟದಲ್ಲಿಯೇ ನೆಲೆಸಿದರು. ಸುದೀರ್ಘ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದರು. ಇಂದಿಗೂ ತಪಃಶಕ್ತಿಯ ಮೂಲಕ ಜನರ ಕಲ್ಯಾಣ ಮಾಡುತ್ತಿದ್ದಾರೆ. ಸಮಾಜದ ಅದರಲ್ಲೂ ದೀನ ದಲಿತರ, ಶೋಷಿತರನ್ನು ಹರಸುತ್ತಿದ್ದಾರೆ’ ಎಂದು ಹೇಳಿದರು.

ಶಾಸಕ ಡಿ. ರವಿಶಂಕರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.