ಮೈಸೂರು: ಅಪರಾಧ ತಡೆ ಮಾಸಾಚರಣೆ-2020 ಹಾಗೂ ತುರ್ತು ಸಹಾಯವಾಣಿ ಸಂಖ್ಯೆ-112ರ ಬಗ್ಗೆ ಅರಿವು ಮೂಡಿಸಲಿಕ್ಕಾಗಿ ಶನಿವಾರ ಬೆಳಿಗ್ಗೆ ನಗರದಲ್ಲಿ ಸೈಕಲ್ ಜಾಥಾ ನಡೆಯಿತು.
ಪೊಲೀಸ್ ಇಲಾಖೆ, ಮೈಸೂರು ಸೈಕ್ಲಿಸ್ಟ್ ಅಸೋಸಿಯೇಷನ್, ರೆಡ್ ಎಫ್‌ಎಂ, ಕೊಲಂಬಿಯಾ ಏಷಿಯಾ ಆಸ್ಪತ್ರೆ, ಟ್ರಿಣ್ ಟ್ರಿಣ್, ಕ್ರಿಯೆಟ್‌ಮೆಂಟ್ ಇವೆಂಟ್, ಎಚ್‌ಡಿಎಫ್‌ಸಿ ಬ್ಯಾಂಕ್ ಈ ಜಾಥಾ ಆಯೋಜಿಸಿದ್ದವು.
ಮೈ ನಡುಗಿಸುವ ಚಳಿಯಲ್ಲೇ 200ಕ್ಕೂ ಹೆಚ್ಚು ಸವಾರರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಕೋಟೆ ಆಂಜನೇಯಸ್ವಾಮಿ ದೇಗುಲದ ಮುಂಭಾಗ ಶಾಸಕ ಎಲ್.ನಾಗೇಂದ್ರ ಜಾಥಾಗೆ ಹಸಿರು ನಿಶಾನೆ ತೋರುವ ಜೊತೆಗೆ ತಾವು ಸೈಕಲ್ ತುಳಿಸಿದರು. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಉಪ ಪೊಲೀಸ್ ಆಯುಕ್ತರಾದ ಎ.ಎನ್.ಪ್ರಕಾಶ್‌ಗೌಡ, ಗೀತಾ ಪ್ರಸನ್ನ, ಸಂಚಾರ ವಿಭಾಗದ ಎಸಿಪಿ ಸಂದೇಶ್‌ಕುಮಾರ್ ಸಾಥ್ ನೀಡಿದರು.
ಸೈಕಲ್ ಸವಾರರು ಐದು ತಂಡಗಳಾಗಿ ಮೈಸೂರು ನಗರದ ಎಲ್ಲಾ ಪ್ರದೇಶಗಳಲ್ಲೂ ಸಂಚರಿಸಿದರು. ಅಪರಾಧ ತಡೆ ಜಾಗೃತಿ ಮತ್ತು ದೇಶಾದ್ಯಂತ ಒಂದೇ ತುರ್ತು ಕರೆ ಸಂಖ್ಯೆ 112ರ ಬಗ್ಗೆ ಕರಪತ್ರ ಹಂಚುವ ಮೂಲಕ ಜನ ಜಾಗೃತಿ ಮೂಡಿಸಿದರು.
ದೇಶಾದ್ಯಂತ ಒಂದೇ ತುರ್ತು ಕರೆ ಸಂಖ್ಯೆ 112ರ ಜಾಗೃತಿಗೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಕನ್ನಡದಲ್ಲೇ ಸಹಿ ಮಾಡುವ ಮೂಲಕ ಚಾಲನೆ ನೀಡಿದರು. ರೆಡ್ ಎಫ್‌ಎಂನ ಆರ್‌ಜೆ ರಶ್ಮಿ, ಗೌತಮ್ ದಾಸ್, ಡಾ.ಉಪೇಂದ್ರ ಶೆಣೈ, ಸ್ಟೇಷನ್ ಹೆಡ್ ರೆಡ್ ಎಫ್‌ಎಂ ರಾಘವ್, ಇನ್ಸ್‌ಪೆಕ್ಟರ್ ಮುನಿಯಪ್ಪ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಜಾಥಾ ಸಂಚರಿಸಿದ ಮಾರ್ಗ: ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಜಾಥಾ ಆಲ್ಬರ್ಟ್ ವಿಕ್ಟರ್ ರಸ್ತೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ, ಕಲಾ ಮಂದಿರ, ವಾಲ್ಮೀಕಿ ವೃತ್ತ, ಯೋಗನರಸಿಂಹಸ್ವಾಮಿ ವೃತ್ತ, ನೆಲ್ಸನ್ ಮಂಡೇಲಾ ವೃತ್ತ, ಟಿ.ಎನ್.ನರಸಿಂಹಮೂರ್ತಿ ರಸ್ತೆ, ನಾಡಪ್ರಭು ಕೆಂಪೇಗೌಡ ವೃತ್ತ, ಮಲೆ ಮಹದೇಶ್ವರ ರಸ್ತೆ, ರಾಮಸ್ವಾಮಿ ವೃತ್ತ, ಏಕಲವ್ಯ ವೃತ್ತ, ವಿಶ್ವಮಾನ ಜೋಡಿ ರಸ್ತೆ ಜಂಕ್ಷನ್, ಬೋಗಾದಿ ರಿಂಗ್ ರಸ್ತೆ ಜಂಕ್ಷನ್, ರಾಮಕೃಷ್ಣ ಪರಮಹಂಸ ವೃತ್ತ, ಕೆ.ಜಿ.ಕೊಪ್ಪಲು ಮುಂತಾದೆಡೆ ಸಂಚರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.