ADVERTISEMENT

ನದಿ ಜೋಡಣೆಗಾಗಿ ಸೈಕಲ್‌ ಸವಾರಿ: ದೇಶ ಸಂಚಾರ ಹೊರಟ ತಮಿಳುನಾಡಿನ ಸಂಜೀವಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2023, 16:25 IST
Last Updated 18 ಜುಲೈ 2023, 16:25 IST
ಸೈಕಲ್‌ ಯಾತ್ರೆ ಮೂಲಕ ನದಿ ಜೋಡಣೆ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವ ತಮಿಳುನಾಡಿನ ಎಸ್‌.ಸಂಜೀವಿ
ಸೈಕಲ್‌ ಯಾತ್ರೆ ಮೂಲಕ ನದಿ ಜೋಡಣೆ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವ ತಮಿಳುನಾಡಿನ ಎಸ್‌.ಸಂಜೀವಿ   

ಮೈಸೂರು: ‘ರಾಜ್ಯಗಳ ನಡುವಿನ ವೈರತ್ವಕ್ಕೆ ನದಿ ನೀರು ಕಾರಣವಾಗುತ್ತಿದೆ. ಒಂದೆಡೆ ನೀರಿಗೆ ಹಾಹಾಕಾರ, ಮತ್ತೊಂದೆಡೆ ವ್ಯರ್ಥವಾಗಿ ಸಮುದ್ರ ಸೇರುವ ನದಿ ನೀರು. ಈ ಚಿತ್ರಣವೇ ನನ್ನನ್ನು ನದಿ ಜೋಡಣೆಯನ್ನು ಬೆಂಬಲಿಸುವಂತೆ ಮಾಡಿತು’..

ಈ ಮಾತುಗಳನ್ನಾಡಿದ್ದು, ತಮಿಳುನಾಡಿನ ತಿರುವಲ್ಲೂರ್‌ ಜಿಲ್ಲೆಯಿಂದ ಸೈಕಲ್‌ ಯಾತ್ರೆ ಆರಂಭಿಸಿ ದೇಶದಾದ್ಯಾಂತ ಜನರಲ್ಲಿ ‘ನದಿ ಜೋಡಣೆ’ ಬಗ್ಗೆ ಅಭಿಪ್ರಾಯ ಮೂಡಿಸಲು ಹೊರಟ ಎಸ್‌.ಸಂಜೀವಿ ಅವರು.‌

ಮಂಗಳವಾರ ನಗರಕ್ಕೆ ‌ಬಂದ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘2007ರಲ್ಲಿಯೂ ಇದೇ ಉದ್ದೇಶದಿಂದ ಯಾತ್ರೆ ಮಾಡಿದ್ದೆ. ಆದರೆ ಪರಿಸ್ಥಿತಿ ಬದಲಾಗದೇ ಇದ್ದುದರಿಂದ ಜೂನ್‌ 1ರಂದು ನನ್ನ ಊರಾದ ತಿರುವಲ್ಲೂರ್‌ನ ಅಮ್ಮಯಾರ್‌ಕುಪ್ಪಂನಿಂದ ಮತ್ತೊಮ್ಮೆ ಯಾತ್ರೆ ಹೊರಟಿದ್ದೇನೆ. ಪೂರ್ಣಗೊಳ್ಳಲು 6 ತಿಂಗಳಾಗಬಹುದು’ ಎಂದರು.

ADVERTISEMENT

‘ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅಭಿಮಾನಿ ನಾನು. ಅವರಿಗೆ ಭಾರತ ರತ್ನ ನೀಡಲಿ ಎಂಬ ಬಯಕೆಯೂ ನನ್ನ ಯಾತ್ರೆಯ ಉದ್ದೇಶಗಳಲ್ಲೊಂದು. ಡಿಎಂಕೆ ಪಕ್ಷದ ಕಾರ್ಯಕರ್ತನಾಗಿದ್ದು, ಪಕ್ಷದ ಸಹಕಾರವೂ ಇದೆ’ ಎಂದರು.

ಯಾತ್ರೆಯ ಹಿನ್ನೆಲೆ: ‘ನಟ ರಾಜ್‌ಕುಮಾರ್‌ ಅಪಹರಣವು ಸೈಕಲ್‌ ಯಾತ್ರೆ ಕೈಗೊಳ್ಳಲು ಕಾರಣ’ ಎನ್ನುತ್ತಾರೆ ಸಂಜೀವಿ.

‘ಬೆಂಗಳೂರಿನ ಭಾಷ್ಯಂ ನಗರದಲ್ಲಿ ಹೋಟೆಲ್‌ ಕೆಲಸ ಮಾಡಿಕೊಂಡಿದ್ದ ನಾನು, ನಟ ರಾಜ್‌ ಅಪಹರಣದಿಂದ ಕನ್ನಡಿಗರು ಮತ್ತು ತಮಿಳರ ನಡುವೆ ಭುಗಿಲೆದ್ದಿದ್ದ ವೈಷಮ್ಯ ನಿವಾರಿಸಲು ಬೆಂಗಳೂರಿನಿಂದ ಚೆನ್ನೈಗೆ ಮೊದಲ ಬಾರಿ ಸೈಕಲ್‌ ಸವಾರಿ ಕೈಗೊಂಡೆ. ಅವರ ಬಿಡುಗಡೆಗೆ ಸಹಕರಿಸುವಂತೆ ಕರುಣಾನಿಧಿಯವರಿಗೆ ಮನವಿಯನ್ನೂ ಸಲ್ಲಿಸಿದ್ದೆ’ ಎಂದರು.

‘ಅಂದಿನ ಪ್ರಯತ್ನವೂ ಎರಡೂ ರಾಜ್ಯಗಳ ಜನರನ್ನು ಬೆಸೆಯುವಲ್ಲಿ ಅವಕಾಶ ನೀಡಿತು. ಸೈಕಲ್‌ ಯಾತ್ರೆಗೆ ಹೆಚ್ಚು ಹಣ ಖರ್ಚಾಗದಿರುವುದು ಕೂಡ ಸಹಕಾರವಾಯಿತು. ನಂತರ ಹಲವು ಯಾತ್ರೆಗಳನ್ನು ಮಾಡಿದ್ದೇನೆ. ರಾಜಕೀಯ ಪಕ್ಷದ ಸೇವೆಯಾಗಿಯೂ ಮಾಡಿದ್ದಿವೆ’ ಎಂದರು.

‘ಯಾತ್ರೆ 42 ಪ್ರಮುಖ ನಗರಗಳನ್ನು ಹಾದು ಚೆನ್ನೈನಲ್ಲಿ ಮುಗಿಯುತ್ತದೆ. ಭೇ‌ಟಿ ನೀಡುವ ಪ್ರತಿ ರಾಜ್ಯದ ಸರ್ಕಾರಕ್ಕೆ ‘ನದಿ ಜೋಡಣೆ’ ಕುರಿತು ಮನವಿ ಪತ್ರ ನೀಡುತ್ತೇನೆ. ನದಿ ನೀರು ವ್ಯರ್ಥವಾಗದೆ ಸಮಗ್ರ ಬಳಕೆಯಾಗಲಿ ಎಂಬುದೇ ನನ್ನ ಉದ್ದೇಶ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.