ಮೈಸೂರು: ‘ಮಿಸ್ಟರ್ ಕುಮಾರಸ್ವಾಮಿ ನಿನ್ನಿಂದ ಕಾಂಗ್ರೆಸ್ ಅಲುಗಾಡಿಸಲಾಗದು’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುಡುಗಿದರು.
ಇಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಮಿಸ್ಟರ್ ಅಶೋಕ, ಮಿಸ್ಟರ್ ವಿಜಯೇಂದ್ರ ನೀವು ಆಪರೇಷನ್ ಕಮಲದ ಮೂಲಕ ಈ ಹಿಂದೆ ಅನೇಕ ಸರ್ಕಾರ ತೆಗೆದಿದ್ದೀರಿ. ಮಿಸ್ಟರ್ ಕುಮಾರಸ್ವಾಮಿ, ನಿನ್ನ ಮುಖಂಡತ್ವದಲ್ಲಿ ಕೇವಲ 19 ಸೀಟುಗಳನ್ನು ಮಾತ್ರ ಗೆದ್ದಿದ್ದೀರಿ. ಈ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ 135 ಸೀಟು ಗೆದ್ದಿದೆ. ಬ್ರಿಟಿಷರು 200 ವರ್ಷ ಆಳಿದರೂ ಈ ಕಾಂಗ್ರೆಸ್ ಅಳಿಸಲು ಆಗಲಿಲ್ಲ. ಬಡವರ ಶಕ್ತಿಯಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷವನ್ನು ನೀನು ಎರಡು ಜನ್ಮ ಎತ್ತಿ ಬಂದರೂ ಅಳಿಸಲು ಸಾಧ್ಯವಿಲ್ಲ. ಏನೇ ಕುತಂತ್ರ ಮಾಡಿದರೂ ಸಫಲವಾಗುವುದಿಲ್ಲ’ ಎಂದರು.
‘ಚಲುವರಾಯಸ್ವಾಮಿ, ಬಿ.ಎಲ್. ಶಂಕರ್ ಸೇರಿದಂತೆ ಅನೇಕರು ಜೆಡಿಎಸ್ ಪಕ್ಷದಲ್ಲಿದ್ದವರು. ಈಗ ಆ ಪಕ್ಷ ತೊರೆದಿದ್ದಾರೆ. ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ 2ನೇ ಬಾರಿಗೆ ಮುಖ್ಯಮಂತ್ರಿ ಆಗಿರುವುದನ್ನು ಸಹಿಸಲಾಗದೇ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅವರ ವಿರುದ್ಧ ಸಂಚು ರೂಪಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮಿಂದ ಏನೂ ಮಾಡಲಾಗದು: ‘ವಿಜಯೇಂದ್ರ, ಅಶೋಕ, ಕುಮಾರಸ್ವಾಮಿ ನಿಮಗೆ ಸಿದ್ದರಾಮಯ್ಯನವರ ರಾಜೀನಾಮೆ ಬೇಕಾ? ಈ ಬಂಡೆ ಸಿದ್ದರಾಮಯ್ಯನ ಜತೆಗಿದೆ. ನನ್ನೊಂದಿಗೆ 135 ಶಾಸಕರೂ ಇದ್ದಾರೆ. ಕೋಟ್ಯಂತರ ಜನ ಸಿದ್ದರಾಮಯ್ಯನವರ ಜತೆಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಳ್ಳಿ. ಹೀಗಾಗಿ ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ’ ಎಂದರು.
‘2023ರಲ್ಲಿ ರಾಜ್ಯದ ಜನರು ನಮಗೆ ಶೇ 43ರಷ್ಟು ಮತ ನೀಡಿದ್ದಾರೆ. ಲೋಕಸಭೆಯಲ್ಲಿ ಶೇ 45ರಷ್ಟು ಮತ ಕೊಟ್ಟಿದ್ದಾರೆ. ಒಂದು ಸೀಟು ಹೊಂದಿದ್ದ ನಾವು 9 ಸೀಟು ಗೆದ್ದಿದ್ದೇವೆ. ಜನರ ತೀರ್ಪನ್ನು ನಾವು ಒಪ್ಪುತ್ತೇವೆ. ಈ ಸರ್ಕಾರವನ್ನು ಮುಂದಿನ 10 ತಿಂಗಳಲ್ಲಿ ಅಲ್ಲಾಡಿಸಬಹುದು ಎಂಬುದು ನಿಮ್ಮ ಭ್ರಮೆ. ಯಾವುದೇ ಕಾರಣಕ್ಕೂ ಇದು ಸಾಧ್ಯವಿಲ್ಲ. ಮುಂದಿನ 10 ತಿಂಗಳಲ್ಲ, ಮುಂದಿನ 10 ವರ್ಷ ಈ ಸರ್ಕಾರವನ್ನು ಮುಟ್ಟಲು ಸಾಧ್ಯವಿಲ್ಲ. ಮುಡಾ ಹಗರಣ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಸಿಎಂ ರಾಜೀನಾಮೆ ಕೇಳುತ್ತಿರುವುದು ಅನೈತಿಕವಾದುದು’ ಎಂದು ವಾಗ್ದಾಳಿ ನಡೆಸಿದರು.
‘ಮುಡಾ ಅಕ್ರಮದಲ್ಲಿ ಪಾರ್ವತಿ ಹಾಗೂ ಸಿದ್ದರಾಮಯ್ಯ ಅವರ ತಪ್ಪೇನಿದೆ? ಸಿದ್ದರಾಮಯ್ಯ ಅವರು ಪತ್ನಿಗೆ ನಿವೇಶನ ನೀಡಿ ಎಂದು ಒತ್ತಡ ಹಾಕಿದ್ದಾರಾ, ಆದೇಶ ಮಾಡಿದ್ದಾರಾ? ಅಧಿಕಾರ ದುರುಪಯೋಗ ಮಾಡಿದ್ದಾರಾ? ಇಲ್ಲ. ಆದರೂ ಇದನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಏಕೆ ಅಕ್ರಮ ಎಂದು ಕರೆಯುತ್ತಿದ್ದಾರೆ’ ಎಂದು ಕೇಳಿದರು.
‘ಬಿಜೆಪಿ ನಾಯಕರ ತಟ್ಟೆಯಲ್ಲಿ ಹೆಗ್ಗಣಗಳಿವೆ. ಅದನ್ನು ನೋಡಿಕೊಳ್ಳಲಿ’ ಎಂದರು.
‘ನಾವೆಲ್ಲರೂ ಸಿದ್ದರಾಮಯ್ಯ ಬೆನ್ನಿಗಿದ್ದೇವೆ’
‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಾವೆಲ್ಲರೂ ನಿಲ್ಲುತ್ತೇವೆ’ ಎಂದು ಶಿವಕುಮಾರ್ ಹೇಳಿದರು. ‘ಮುಖ್ಯಮಂತ್ರಿ ಪತ್ನಿ ದೇವಾಲಯಕ್ಕೆ ಹೋದರೂ ಸರದಿ ಸಾಲಿನಲ್ಲಿ ನಿಂತವರು. ನಮ್ಮ ಕುಟುಂಬದವರು ನಮ್ಮ ಜತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ಪತ್ನಿ ಎಂದಿಗೂ ಸಾರ್ವಜನಿಕವಾಗಿ ಕಾಣಿಸಿಕೊಂಡವರಲ್ಲ. ಆದರೂ ಆರೋಪ ಮಾಡುತ್ತಿರುವ ವಿರೋಧ ಪಕ್ಷದವರನ್ನು ಹಾಗೂ ಅವರ ಪಾಪವನ್ನು ಚಾಮುಂಡೇಶ್ವರಿ ಕ್ಷಮಿಸುವುದಿಲ್ಲ’ ಎಂದರು. ‘ಬಿಜೆಪಿ ಹಾಗೂ ಜೆಡಿಎಸ್ ಮಾಡುತ್ತಿರುವುದು ಪಾದಯಾತ್ರೆಯಲ್ಲ ಪಾಪ ವಿಮೋಚನಾ ಯಾತ್ರೆ. ನಮ್ಮದು ಅಧರ್ಮಿಗಳ ವಿರುದ್ಧದ ಧರ್ಮ ಯುದ್ಧ. ಅನ್ಯಾಯದ ವಿರುದ್ಧ ನ್ಯಾಯದ ಯುದ್ಧ. ಅಸತ್ಯದ ವಿರುದ್ಧ ಸತ್ಯದ ಯುದ್ಧ’ ಎಂದು ಹೇಳಿದರು. ‘ನಾವು ಈ ನಾಡಿನ ರೈತರು ನೀರಿನ ರಕ್ಷಣೆಗೆ ಹೋರಾಟ ಮಾಡಿ ಹೆಜ್ಜೆ ಹಾಕಿದ್ದೇವೆ. ಆದರೆ ನಿಮ್ಮ ಯಾತ್ರೆ ಯಾವ ಕಾರಣಕ್ಕೆ?’ ಎಂದು ಕೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.