ಮೈಸೂರು: ದಸರಾ ಉತ್ಸವಕ್ಕೆ ತೆರೆಬಿದ್ದು 25 ದಿನಗಳು ಕಳೆದಿವೆ. ಆದರೆ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಮಳಿಗೆಗಳ ನಿರ್ಮಾಣ ಕೆಲಸ ಇನ್ನೂ ನಡೆಯುತ್ತಲೇ ಇದೆ!
ಸರ್ಕಾರದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು ಮತ್ತು ಆರು ಜಿಲ್ಲಾ ಪಂಚಾಯಿತಿಗಳು ಸೇರಿ ಈ ಬಾರಿ ಒಟ್ಟು 44 ಮಳಿಗೆಗಳು ನಿರ್ಮಾಣವಾಗಬೇಕು. ಇದುವರೆಗೆ ಸುಮಾರು ಶೇ 80 ರಷ್ಟು ಮಳಿಗೆಗಳು ಮಾತ್ರ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿವೆ.
ದಸರಾ ಉತ್ಸವಕ್ಕೆ ಸೆ.29 ರಂದು ಚಾಲನೆ ಲಭಿಸಿತ್ತು. ಅದೇ ದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದಸರಾ ವಸ್ತುಪ್ರದರ್ಶನ ಉದ್ಘಾಟಿಸಿದ್ದರು. ದಸರಾ ಉತ್ಸವದ ಆರಂಭದ ದಿನವನ್ನು ಲೆಕ್ಕಹಾಕಿದರೆ ಇದೀಗ ಒಂದು ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಸಾವಿರಾರು ಪ್ರವಾಸಿಗರು ವಸ್ತುಪ್ರದರ್ಶನ ತಾಣಕ್ಕೆ ಭೇಟಿ ಕೊಟ್ಟಿದ್ದಾರೆ. ಅವರಿಗೆ ಕೆಲವು ಮಳಿಗೆಗಳನ್ನು ಮಾತ್ರ ವೀಕ್ಷಿಸುವ ಅವಕಾಶ ದೊರೆತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಪ್ರಸಾರ ಖಾತೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಮಳಿಗೆಗಳು ಮಾತ್ರ ದಸರಾ ಉತ್ಸವದ ಅವಧಿಯಲ್ಲಿ ಪೂರ್ಣಗೊಂಡಿದ್ದವು. ಆ ಬಳಿಕ ಹಂತಹಂತವಾಗಿ ಕೆಲವು ಮಳಿಗೆಗಳು ಸಿದ್ಧಗೊಂಡಿವೆ.
ನಗರಾಭಿವೃದ್ಧಿ ಇಲಾಖೆ, ಜಲಸಂಪನ್ಮೂಲ ಇಲಾಖೆಯ ಮಳಿಗೆಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ನಾಲ್ಕೈದು ಮಳಿಗೆಗಳ ನಿರ್ಮಾಣ ಕೆಲಸ ಶೇ 50 ರಷ್ಟು ಮಾತ್ರ ಆಗಿದ್ದು, ಪೂರ್ಣಗೊಳ್ಳಲು ಇನ್ನೂ ಕೆಲವು ದಿನಗಳು ಬೇಕು.
ಪ್ರತಿ ದಸರಾ ಅವಧಿಯಲ್ಲೂ ಸರ್ಕಾರಿ ಇಲಾಖೆಗಳು ಮತ್ತು ನಿಗಮ ಮಂಡಳಿಗಳ ಮಳಿಗೆಗಳ ನಿರ್ಮಾಣ ಆಮೆಗತಿಯಲ್ಲಿ ನಡೆಯುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇನ್ನಷ್ಟು ಮಂದಗತಿಯಲ್ಲಿ ನಡೆದಿದೆ.
ದಸರಾ ಆರಂಭಕ್ಕೆ ಕೆಲವು ದಿನಗಳು ಇದ್ದಾಗ ‘ಇ–ಪ್ರಕ್ಯೂರ್‌ಮೆಂಟ್’ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರಿಂದ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲು ತಡವಾಯಿತು. ಮಳಿಗೆಗಳ ನಿರ್ಮಾಣ ಕೆಲಸ ತಡವಾಗಿ ಆರಂಭವಾದವು ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ಗಿರೀಶ್ ತಿಳಿಸಿದರು.
‘ನಿಗದಿತ ಅವಧಿಯೊಳಗೆ ಮಳಿಗೆಗಳನ್ನು ಸಿದ್ಧಗೊಳಿಸುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿ. ಟೆಂಡರ್ ಪ್ರಕ್ರಿಯೆ ತಡವಾದ ಕಾರಣ ಎಲ್ಲವೂ ತಡವಾದವು ಎಂಬ ಕಾರಣ ನೀಡುತ್ತಿದ್ದಾರೆ. ನಿರ್ಮಾಣ ಕೆಲಸ ಬೇಗ ಪೂರ್ಣಗೊಳಿಸುವಂತೆ ಪ್ರತಿದಿನ ಎಚ್ಚರಿಸುತ್ತಿದ್ದೇವೆ’ ಎಂದರು.
ದಸರಾ ವಸ್ತು ಪ್ರದರ್ಶನ 90 ದಿನಗಳು ಇರಲಿದ್ದು, ಡಿ.27ಕ್ಕೆ ಕೊನೆಗೊಳ್ಳಲಿದೆ. ವಸ್ತು ಪ್ರದರ್ಶನ ಆರಂಭವಾಗಿ ಈಗಾಗಲೇ 34 ದಿನಗಳು ಕಳೆದಿವೆ. ಅಂದರೆ ಕೆಲವು ಮಳಿಗೆಗಳು ಕೇವಲ 50–55 ದಿನಗಳು ಮಾತ್ರ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿವೆ.
‘ವಸ್ತು ಪ್ರದರ್ಶನದಲ್ಲಿ ಮಳಿಗೆ ಹಾಕುವಂತೆ ಸರ್ಕಾರದ ವಿವಿಧ ಇಲಾಖೆಗಳನ್ನು ಆಹ್ವಾನಿಸಿದ್ದೇವೆ. ನಾವೇ ಕರೆದ ಬಳಿಕ ಅವರಿಗೆ ಗಡುವು ವಿಧಿಸುವುದು ಸರಿಯೆನಿಸುವುದಿಲ್ಲ. ಮಳಿಗೆಗಳ ಒಳಾಂಗಣ ನಿರ್ಮಾಣ, ಕೆತ್ತನೆ, ಕುಸುರಿ ಕೆಲಸಗಳಿಗೆ ಹೆಚ್ಚಿನ ಸಮಯ ಹಿಡಿಯುತ್ತದೆ. ಬೇಗ ಪೂರ್ಣಗೊಳಿಸುವಂತೆ ಒತ್ತಡ ಹೇರುವ ಸ್ಥಿತಿಯಲ್ಲಿಲ್ಲ’ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.