ಮೈಸೂರು: ರೇಷ್ಮೆಗೂಡು ಉತ್ಪಾದನೆ ಕುಸಿತದ ಕಾರಣಗಳ ಅಧ್ಯಯನಕ್ಕೆ ಕೇಂದ್ರ ರೇಷ್ಮೆ ಮಂಡಳಿ ರಚಿಸಿರುವ ಉನ್ನತ ಮಟ್ಟದ ಸಮಿತಿಯು ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗೆ (ಸಿಎಸ್‌ಆರ್‌ಟಿಐ) ಮಂಗಳವಾರ ಭೇಟಿ ನೀಡಿ ಸಭೆ ನಡೆಸಿತು.
ಸಮಿತಿ ಅಧ್ಯಕ್ಷ, ವಿಶ್ರಾಂತ ಕುಲಪತಿ ಡಾ.ಎಸ್.ಬಿ.ದಂಡಿನ್ ಅವರು, ರೇಷ್ಮೆ ಕೃಷಿಯಲ್ಲಿ ಹುಳು ಗೂಡು ಕಟ್ಟದಿರುವ ಹಾಗೂ ರೇಷ್ಮೆ ಕೃಷಿ ಅಧ್ಯಯನಕ್ಕೆ ಸಂಬಂಧಿಸಿದಂತೆ ಸಂಸ್ಥೆಯು ನಡೆಸಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ನಂತರ ಮಾತನಾಡಿದ ಅವರು, ‘ರಾಜ್ಯದ ಬೇರೆ ಬೇರೆ ವಲಯಗಳ ರೈತರ ಹಿಪ್ಪುನೇರಳೆ ತೋಟಗಳಿಂದ ಮಣ್ಣು ತಂದು ಪರೀಕ್ಷೆ ಮಾಡಬೇಕು. ಎಲ್ಲ ಚಾಕಿ ಕೇಂದ್ರಗಳನ್ನು ಪರಿಶೀಲಿಸಬೇಕು. ಮತ್ತಷ್ಟು ಸಂಶೋಧನೆ ನಡೆಸಿ ಪ್ರಾಯೋಗಿಕ ವರದಿಯನ್ನು ಸಮಿತಿಗೆ ಸಲ್ಲಿಸಬೇಕು’ ಎಂದು ಸೂಚಿಸಿದರು.
ಸಂಸ್ಥೆಯ ನಿರ್ದೇಶಕ ಎಸ್.ಗಾಂಧಿದಾಸ್ ಮಾತನಾಡಿ, ‘ರೇಷ್ಮೆ ಗೂಡು ಉತ್ಪಾದನೆಯ ಕುಸಿತಕ್ಕೆ ಹಿಪ್ಪುನೇರಳೆ ಕೃಷಿಗೆ ತಜ್ಞರು ಶಿಫಾರಸು ಮಾಡದ ಕೀಟನಾಶಕಗಳ ಬಳಕೆಯೇ ಕಾರಣವಾಗಿದೆ’ ಎಂದರು.
‘ರಾಜ್ಯದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಹಾಸನ, ಕೋಲಾರ, ಚಿತ್ರದುರ್ಗ ಸೇರಿದಂತೆ ರೇಷ್ಮೆ ಬೆಳೆಯುವ ಜಿಲ್ಲೆಗಳು ಹಾಗೂ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ರೇಷ್ಮೆಗೂಡು ಕಟ್ಟದಿರುವ ಬಗ್ಗೆ ಸಂಸ್ಥೆಯು ಅಧ್ಯಯನ ನಡೆಸಿದೆ’ ಎಂದು ಮಾಹಿತಿ ನೀಡಿದರು.
ಸದಸ್ಯರಾದ ನಿರ್ಮಲ್ ಕುಮಾರ್, ಮುನಿರಾಜು, ಎನ್.ವೈ.ಚಿಗರಿ, ಎಚ್.ಕೆ.ಬಸವರಾಜು, ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕರಾದ ಡಾ.ಎಸ್.ಮಂಥಿರ ಮೂರ್ತಿ, ವಿಜ್ಞಾನಿಗಳಾದ ಡಾ.ಕೆ.ಬಿ.ಚಂದ್ರಶೇಖರ್, ಡಾ.ಎಸ್.ಬಾಲಸರಸ್ವತಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.