ADVERTISEMENT

ಮೈಸೂರು | ವಿವಿಧೆಡೆ ತಲೆಎತ್ತಿದ ಮಾರಾಟ ಮಳಿಗೆಗಳು: ಪಟಾಕಿ ಮಾರಾಟದ ಮೇಲೆ ಕಣ್ಣು

ಆರ್.ಜಿತೇಂದ್ರ
Published 10 ನವೆಂಬರ್ 2023, 7:15 IST
Last Updated 10 ನವೆಂಬರ್ 2023, 7:15 IST
ನಗರದ ಜೆ.ಕೆ. ಮೈದಾನದಲ್ಲಿ ಗುರುವಾರ  ದೀಪಾವಳಿ ಪ್ರಯುಕ್ತ ಮಳಿಗೆಯಲ್ಲಿ ಪಟಾಕಿ ಜೋಡಿಸುವಲ್ಲಿ ನಿರತರಾದ ವರ್ತಕರು
ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ನಗರದ ಜೆ.ಕೆ. ಮೈದಾನದಲ್ಲಿ ಗುರುವಾರ  ದೀಪಾವಳಿ ಪ್ರಯುಕ್ತ ಮಳಿಗೆಯಲ್ಲಿ ಪಟಾಕಿ ಜೋಡಿಸುವಲ್ಲಿ ನಿರತರಾದ ವರ್ತಕರು ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.   

ಮೈಸೂರು: ದೀಪಾವಳಿ ಹಬ್ಬ ಆಚರಣೆಗೆ ದಿನಗಣನೆ ಆರಂಭಗೊಂಡಿದ್ದು, ನಗರದ ವಿವಿಧೆಡೆ ಪಟಾಕಿ ಮಾರಾಟ ಮಳಿಗೆಗಳು ತಲೆ ಎತ್ತಿವೆ. ಈ ಬಾರಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ಇರಲಿದೆ.

ನಗರದ ವಿವಿಧೆಡೆ ಪಟಾಕಿ ಮಾರಾಟ ಕೋರಿ 104ಕ್ಕೂ ಹೆಚ್ಚು ಮಳಿಗೆಗಳ ವರ್ತಕರು ಮನವಿ ಸಲ್ಲಿಸಿದ್ದು, ಪೊಲೀಸರಿಂದ ಅನುಮತಿ ಪಡೆದು ಮಳಿಗೆ ನಿರ್ಮಿಸಿದ್ದಾರೆ. ಜೆ.ಕೆ. ಮೈದಾನದಲ್ಲಿ ಈಗಾಗಲೇ ಹತ್ತಾರು ಮಳಿಗೆಗಳನ್ನು ಹಾಕಲಾಗಿದ್ದು, ಪಟಾಕಿಗಳನ್ನು ಮಾರಾಟಕ್ಕೆ ಇಡಲಾಗಿದೆ. ಜೊತೆಗೆ ಅಶೋಕ ವೃತ್ತ (ಬಲ್ಲಾಳ್‌), ವಿದ್ಯಾರಣ್ಯಪುರಂ, ಲಲಿತಮಹಲ್‌ ರಸ್ತೆ ಮೊದಲಾದ ಕಡೆಗಳಲ್ಲಿ ಮಳಿಗೆಗಳು ತಲೆ ಎತ್ತಿವೆ.

ಈ ಬಾರಿ ಅ.10ರಿಂದ 14ರವರೆಗೆ ಐದು ದಿನಗಳ ಕಾಲ ಪಟಾಕಿ ಮಾರಾಟಕ್ಕೆ ಅವಕಾಶ ಇರಲಿದೆ. ಮಳಿಗೆದಾರರು ಅಗ್ನಿಶಾಮಕ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಸೆಸ್ಕ್‌ನಿಂದ ನಿರಾಪೇಕ್ಷಣಾ ಪತ್ರಗಳನ್ನು ಪಡೆಯುವುದು ಕಡ್ಡಯವಾಗಿದೆ.

ADVERTISEMENT

ಹಲವು ನಿಬಂಧನೆ: ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿತ ಹಾಗೂ ನಗರಪಾಲಿಕೆಯು ಹಲವು ನಿಬಂಧನೆಗಳನ್ನು ಹೇರಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ಇದೆ. ಪಟಾಕಿ ಬಾಕ್ಸ್‌ಗಳ ಮೇಲೆ ಹಸಿರು ಚಿಹ್ನೆ ಮತ್ತು ಕ್ಯುಆರ್ ಕೋಡ್‌ ಕಡ್ಡಾಯವಾಗಿದೆ. ಹಸಿರು ಪಟಾಕಿ ಹೊರತುಪಡಿಸಿ ಉಳಿದ ದರ್ಜೆಯ ಪಟಾಕಿಗಳ ಮಾರಾಟಕ್ಕೆ ಮುಂದಾದಲ್ಲಿ ಅಂತಹ ಉತ್ಪನ್ನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ನೀಡಿದೆ.

10X10 ಅಡಿ ವಿಸ್ತೀರ್ಣದ, ಜಂಕ್‌ ಶೀಟ್‌ಗಳಿಂದ ನಿರ್ಮಿಸಿದ ಮಳಿಗೆಗಳಿಗೆ ಮಾತ್ರ ಅವಕಾಶ ಇದ್ದು, ಐದಕ್ಕೂ ಹೆಚ್ಚು ಮಳಿಗೆಗಳು ಇರುವ ಕಡೆಗಳಲ್ಲಿ ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

‘ಪಟಾಕಿ ಮಾರಾಟ ಸಂಬಂಧ ವಲಯವಾರು ಸಭೆಗಳನ್ನು ನಡೆಸಲಾಗಿದೆ. ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರು ಅನುಮತಿಗೆ ಮುನ್ನ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡಗಳು ಸಂಭವಿಸದಂತೆ ಕೈಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪಟಾಕಿ ವರ್ತಕರಿಗೆ ತಿಳಿವಳಿಕೆ ನೀಡಿದ್ದೇವೆ. ಜೊತೆಗೆ ಧ್ವನಿವರ್ಧಕಗಳ ಮೂಲಕವೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ ನಗರಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್.

ನಗರದ ಜೆ.ಕೆ. ಮೈದಾನದಲ್ಲಿ ಗುರುವಾರ  ದೀಪಾವಳಿ ಪ್ರಯುಕ್ತ ಮಳಿಗೆಯಲ್ಲಿ ಪಟಾಕಿ ಜೋಡಿಸುವಲ್ಲಿ ನಿರತರಾದ ವರ್ತಕರು ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಅಸಾದ್ ಉರ್ ರೆಹಮಾನ್ ಶರೀಫ್
ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಬೇಕು. ಹೆಚ್ಚು ಶ‌ಬ್ಧದ ಸ್ಫೋಟಕ ಬಳಸಿ ಜನರಿಗೆ ತೊಂದರೆ ಕೊಡುವಂತಿಲ್ಲ
ಡಾ. ಕೆ.ವಿ. ರಾಜೇಂದ್ರ ಜಿಲ್ಲಾಧಿಕಾರಿ
ಪಟಾಕಿ ಮಾರಾಟ ಮಳಿಗೆಗಳಲ್ಲಿ ಸುರಕ್ಷತಾ ಕ್ರಮಗಳ ಕುರಿತು ನಿಗಾ ವಹಿಸಿದ್ದು ಅನುಮತಿಗೆ ಮುನ್ನ ಅಲ್ಲಿನ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದ್ದೇವೆ. ಹಸಿರು ಪಟಾಕಿ ಬಳಕೆ ಬಗ್ಗೆ ಜಾಗೃತಿ ಮೂಡಿಸಿದ್ದೇವೆ
ಆಶಾದ್ ಉರ್ ರೆಹಮಾನ್ ಷರೀಫ್ ನಗರಪಾಲಿಕೆ ಆಯುಕ್ತ
ಪಟಾಕಿ ಹೊಡೆಯಲೂ ಸಮಯ
ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದಕ್ಕೆ ಜಿಲ್ಲಾಡಳಿತ ಸಮಯ ನಿಗದಿಪಡಿಸಿದೆ. ಅದರಂತೆ ರಾತ್ರಿ 8ರಿಂದ 10ರವರೆಗೆ ಮಾತ್ರ ಅವಕಾಶ ಇದೆ. ಉಳಿದ ಸಮಯದಲ್ಲಿ ಪಟಾಕಿಗಳ ಸ್ಫೋಟ ಮಾಡುವಂತಿಲ್ಲ. 125–145 ಡೆಸಿಬಲ್‌ಗಿಂತ ಹೆಚ್ಚು ಶಬ್ದದ ಪಟಾಕಿಗಳನ್ನು ಸಿಡಿಸುವಂತೆ ಇಲ್ಲ. ನಿಶಬ್ಧ ವಲಯಗಳಾದ ಆಸ್ಪತ್ರೆ ಶಾಲೆ ಪ್ರಾರ್ಥನಾ ಮಂದಿರಗಳ ಸುತ್ತ ಪಟಾಕಿ ಹೊಡೆಯುವಂತಿಲ್ಲ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.