ಹುಣಸೂರು: ನಗರದ ನಿವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಉದ್ದೇಶದಲ್ಲಿ ನಗರಸಭೆ ₹30 ಕೋಟಿ ಅನುದಾನದಲ್ಲಿ ಆರಂಭಿಸಿದ ಕಾಮಗಾರಿ ಕುಟುಂತ್ತಾ ಸಾಗಿದೆ.
ಟೆಂಡರ್ ಪ್ರಕ್ರಿಯೆ ನಡೆದ ನಂತರದಲ್ಲಿ ಗುತ್ತಿಗೆ ಪಡೆದ ಕಂಪನಿ ಕಾಮಗಾರಿ ನಡೆಸದೆ, ಅರ್ಧಕ್ಕೆ ಸ್ಥಗಿತವಾಗಿದೆ. ರಸ್ತೆಗಳು ಮಳೆಗೆ ಕೆಸರು ಗದ್ದೆಯಾಗಿದ್ದು, ನಾಗರಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ನಗರೋತ್ಥಾನ ಯೋಜನೆಯಲ್ಲಿ 2021–22ರಲ್ಲಿ ಮಂಜೂರಾದ ಅನುದಾನದಲ್ಲಿ 31 ವಾರ್ಡ್‌ಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ರಾಜಕಾಲುವೆ ನಿರ್ಮಾಣ, ರಸ್ತೆ ಚರಂಡಿ ನಿರ್ಮಾಣಕ್ಕೆ ₹26.5 ಕೋಟಿ ಹಣ ಮೀಸಲಿಡಲಾಗಿತ್ತು.
‘ನಗರದ ವಾರ್ಡ್‌ಗಳಲ್ಲಿ ₹12.41 ಕೋಟಿ ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ಕಾಮಗಾರಿಗೆ ವರ್ಷದ ಹಿಂದೆ ಟೆಂಡರ್ ಪಡೆದ ಕೆ.ಟಿ.ಆರ್ ಕಂಪನಿ ಮಾಲೀಕ ಆರಂಭದಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಕಳೆದ 5 ತಿಂಗಳಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ನಗರಸಭೆ ಮತ್ತು ಕಂಪನಿ ಜೊತೆಗಿನ ಒಡಂಬಡಿಕೆ ಪ್ರಕಾರ ಈ ತಿಂಗಳ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರಿಸಬೇಕಿತ್ತು’ ಎನ್ನುವರು ನಗರಸಭೆ ಸದಸ್ಯ ಗಣೇಶ್ ಕುಮಾರಸ್ವಾಮಿ.
ಸಾರ್ವಜನಿಕರಿಂದ ನಿಂದನೆ: ‘ಕಾಮಗಾರಿ ನಡೆಸುವುದಾಗಿ ಜಿಲ್ಲಾ ಕೇಂದ್ರದಲ್ಲಿ ಟೆಂಡರ್ ಪಡೆದು ಸಕಾಲಕ್ಕೆ ಆರಂಭಿಸದ ಗುತ್ತಿಗೆದಾರರ ವಿರುದ್ಧ ಹಲವು ಬಾರಿ ನಗರಸಭೆ ಆಯುಕ್ತರು ಒಳಗೊಂಡಂತೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಹೀಗಾದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವುದಾಗಿ ಭರವಸೆ ನೀಡಿದರಷ್ಟೆ, ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಸಾರ್ವಜನಿಕರ ನಿಂದನೆಗೆ ಬಲಿಯಾಗಿದ್ದೇವೆ’ ಎಂದು ನಗರಸಭೆ ಸದಸ್ಯೆ ರಾಧಾ ಹೇಳುವರು.
‘ನಗರೋತ್ಥಾನ ಯೋಜನೆಯಲ್ಲಿ ಬಂದ ಅನುದಾನದಲ್ಲಿ 31 ವಾರ್ಡ್‌ಗಳಿಗೆ ತಲಾ ₹ 30 ಲಕ್ಷದಂತೆ ಕಾಮಗಾರಿ ನೀಡಿದ್ದೇವೆ. ಈ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತವಾಗಿರುವುದು ಗಮನದಲ್ಲಿದೆ. ಸಂಬಂಧಿಸಿದ ಗುತ್ತಿಗೆದಾರನಿಗೆ 5 ಬಾರಿ ನೋಟಿಸ್ ಜಾರಿ ಮಾಡಿದ್ದೇನೆ. ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ಗುತ್ತಿಗೆದಾರ ನೀಡಿಲ್ಲ’ ಎನ್ನುವರು ನಗರಸಭೆ ಆಯುಕ್ತೆ ಮಾನಸ.
ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಮಾಲಿಕರಿಗೆ ನೋಟಿಸ್ ಜಾರಿಗೊಳಿಸಿದ್ದೇವೆ. ನಗರಸಭೆ ಎಲ್ಲಾ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳಲು ಸಿದ್ಧವಿದ್ದು ತ್ವರಿತಗತಿಯಲ್ಲಿ ಕಾಮಗಾರಿ ಪೂರೈಸಲಾಗುವುದು. –ಮಾನಸ ನಗರಸಭೆ ಆಯುಕ್ತೆ
‘ಕೆಸರು ರಸ್ತೆಯಿಂದ ವ್ಯಾಪಾರ ಕುಸಿತ’
‘ನಗರೋತ್ಥಾನ ಯೋಜನೆಯಲ್ಲಿ ಆರಂಭವಾದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯದೆ ಆಮೆ ವೇಗದಲ್ಲಿ ಸಾಗುತ್ತಿದೆ. ಹಳೆ ಹೌಸಿಂಗ್ ಬೋರ್ಡ್ ಕಾಲೊನಿ ಕೇಂಬ್ರಿಡ್ಜ್ ರಸ್ತೆ ಕಾಮಗಾರಿ ನಡೆಯದೆ ಕೆಸರು ಗದ್ದೆಯಾಗಿದೆ. ಅಂಗಡಿಗೆ ಬರುವ ಗ್ರಾಹಕರು ಹರಸಾಹಸದಲ್ಲಿ ಬರುವಂತಾಗಿ ವ್ಯಾಪಾರ ಕುಸಿದಿದೆ’ ಎಂದು ಪಟ್ಟಣದ ಕಿರಾಣಿ ಅಂಗಡಿ ವ್ಯಾಪಾರಿ ಮಹದೇವಮ್ಮ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.