ಹುಣಸೂರು: ಹುಣಸೂರು ನಗರಸಭೆ ವ್ಯಾಪ್ತಿಯಲ್ಲಿರುವ 17 ಕೊಳೆಗೇರಿಗಳಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಇಲ್ಲಿ ವಾಸವಿರುವ ಜನರು ಸಾಮಾಜಿಕ ಸಮಸ್ಯೆಗಳಲ್ಲಿ ಸಿಲುಕಿದ್ದು, ಮೂಲ ಸೌಕರ್ಯಗಳ ನಿರೀಕ್ಷೆಯಲ್ಲಿದ್ದಾರೆ.
ನಗರದ 17 ಕೊಳಗೇರಿಗಳ ಪೈಕಿ ಲಕ್ಷ್ಮಿನರಸಿಂಹಸ್ವಾಮಿ ತಿಟ್ಟು ಕೊಳೆಗೇರಿ (ಎನ್.ಎಸ್.ತಿಟ್ಟು) ದೊಡ್ಡಾದಾಗಿದ್ದು, ಅಂದಾಜು 18 ಎಕರೆಯಲ್ಲಿ ಹರಡಿಕೊಂಡಿದೆ. ವರ್ಷದಿಂದ ವರ್ಷಕ್ಕೆ ಹಿಗ್ಗುತ್ತಿರುವ ಈ ಕೊಳಗೇರಿಯಲ್ಲಿ ರಸ್ತೆ, ಚರಂಡಿಗಳ ಮೇಲೆಯೇ ಮನೆ ನಿರ್ಮಿಸಿಕೊಂಡ ಹಲವರು ಶೌಚಾಲಯಕ್ಕೆ ಬಯಲನ್ನೇ ಆಶ್ರಯಿಸಿದ್ದಾರೆ.
ಇಲ್ಲಿ ಹುಬ್ಬಳ್ಳಿ, ವಿಜಯಪುರ ಸೇರಿದಂತೆ ವಿವಿಧ ಭಾಗದಿಂದ 20 ವರ್ಷಗಳ ಹಿಂದೆ ವಲಸೆ ಬಂದವರಿದ್ದು, ಅವರ ಕುಟುಂಬಗಳಲ್ಲಿ ಹಲವರು ಇಲ್ಲೇ ಹುಟ್ಟಿ ಬೆಳೆದು ವಿವಾಹವಾಗಿ ಸಂಸಾರ ನಡೆಸುತ್ತಿದ್ದಾರೆ. ಒಂದೇ ಮನೆಯಲ್ಲಿ ಎರಡು ಮೂರು ಕುಟುಂಬಗಳು ವಾಸವಿವೆ. ತುಂಡು ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡು ಜೀವನ ಸಾಗಿಸಲು ಹೆಣಗುತ್ತಿದ್ದಾರೆ.
‘400ಕ್ಕೂ ಹೆಚ್ಚು ಕುಟುಂಬಗಳು ಆಶ್ರಯ ಪಡೆದಿರುವ ಈ ಪ್ರದೇಶಕ್ಕೆ ಕೊಳೆಗೇರಿ ಅಭಿವೃದ್ಧಿ ಮಂಡಳಿಯೂ ಯಾವುದೇ ಸೌಲಭ್ಯ ಕಲ್ಪಿಸದೇ 2023ರಲ್ಲಿ 161 ಕುಟುಂಬಗಳಿಗೆ ವಾಸವಿರುವ ವ್ಯಾಪ್ತಿಯ ನಿವೇಶನ ಮಂಜೂರು ಮಾಡಿ ಹಕ್ಕುಪತ್ರ ವಿತರಿಸಿದೆ. ಸಂಬಂಧಿಸಿದ ಆಡಳಿತ ಸಂಸ್ಥೆಗಳು ಪ್ರದೇಶವನ್ನು ಅಭಿವೃದ್ಧಿಪಡಿಸದೇ ಕೈ ಕಟ್ಟಿಕುಳಿತಿರುವುದು ಭವಿಷ್ಯದಲ್ಲಿ ಅನೇಕ ಸಮಸ್ಯೆಗಳ ಸುರುಳಿಯಲ್ಲಿ ಎಲ್ಲರನ್ನೂ ದೂಡಲಿದೆ. ‘ತಾಲ್ಲೂಕಿನಲ್ಲಿ ಈಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಕೊಳಗೇರಿ ಅಭಿವೃದ್ಧಿಗೆ ಕ್ರಮವಹಿಸುವ ಪ್ರಸ್ತಾಪವಾಗಿದ್ದರೂ ಇಂದಿಗೂ ಅಧಿಕಾರಿಗಳು ಇತ್ತ ಸುಳಿದಿಲ್ಲ’ ಎಂದು ನಿವಾಸಿಗರು ದೂರುತ್ತಿದ್ದಾರೆ.
ಕೊಳೆಗೇರಿಯ ನಿವಾಸಿ ಪದ್ಮ ಮಾತನಾಡಿ, ‘ಕಳೆದ 20 ವರ್ಷದಿಂದ ವಾಸಿಸುತ್ತಿದ್ದೇನೆ. 10X15 ಅಳತೆ ಜಾಗದಲ್ಲಿ ನನ್ನ ಸಂಪಾದನೆಯಲ್ಲಿ ಮನೆ ನಿರ್ಮಿಸಿಕೊಂಡಿದ್ದು, ಸರ್ಕಾರದಿಂದ ಈ ವರೆಗೂ ಯಾವುದೇ ಸವಲತ್ತುಗಳು ಸಿಕ್ಕಿಲ್ಲ. ಸ್ನಾನದ ಮನೆ ಇಲ್ಲದೆ ಬಟ್ಟೆ ತಡಿಕೆ ನಿರ್ಮಿಸಿ ಕತ್ತಲಿನಲ್ಲೇ ಸ್ನಾನ ಮಾಡಬೇಕಾದ ಪರಿಸ್ಥಿತಿ ಇದೆ’ ಎನ್ನುವರು.
‘ಕೊಳೆಗೇರಿಯಲ್ಲಿ ರಸ್ತೆ, ಚರಂಡಿ, ಕುಡಿಯಲು ಶುದ್ಧ ನೀರು ಇದಾವುದೂ ಇಲ್ಲ. ಹಂದಿ ಸಾಕಾಣಿಕೆ ನಡೆಸುವವರ ಸಂಖ್ಯೆ ಹೆಚ್ಚಿದೆ. ಡೆಂಗಿ ಸೇರಿದಂತೆ ಸೋಕು ರೋಗ ನಿವಾಸಿಗರನ್ನು ಕಾಡುತ್ತಿದೆ. ಚರಂಡಿ ಮೇಲೆ ಶೌಚಾಲಯ ನಿರ್ಮಿಸಿಕೊಂಡು ದುರ್ವಾಸನೆ ಕಾಡಿದೆ’ ಎಂದು ನಿವಾಸಿ ಲಕ್ಷ್ಮಿ ಬೇಸರ ವ್ಯಕ್ತಪಡಿಸಿದರು.
‘ಅಭಿವೃದ್ಧಿ ಮಂಡಳಿ ಸಮರ್ಪಕವಾಗಿ ಯೋಜನೆ ಅನುಷ್ಟಾನಗೊಳಿಸಿದ್ದರೆ ಎನ್.ಎಸ್.ತಿಟ್ಟುವನ್ನು ಮಾದರಿ ಕೊಳೆಗೇರಿಯನ್ನಾಗಿ ಅಭಿವೃದ್ಧಿಪಡಿಸಬಹುದಿತ್ತು. 18 ಎಕರೆ ಪ್ರದೇಶದಲ್ಲಿ ಕೇವಲ 4 ಎಕರೆ ಪ್ರದೇಶದಲ್ಲಿ ಜನವಸತಿ ಇದ್ದು ಉಳಿದಂತೆ ಪ್ರದೇಶ ಖಾಲಿ ಇದ್ದು, ಕ್ರಮವಹಿಸಬೇಕು’ ಎಂದು ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ‘ಪ್ರಜಾವಣಿ’ಗೆ ತಿಳಿಸಿದರು.
‘ನಗರ ವ್ಯಾಪ್ತಿಯ 17 ಕೊಳೆಗೇರಿಗಳು 92 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು ಈ ಕೊಳಗೇರಿಯಲ್ಲಿ ಒಟ್ಟು 3667 ಕುಟುಂಬಗಳಿದ್ದು 10331 ಜನರು ಆಶ್ರಯಪಡೆದುಕೊಂಡಿವೆ. ಈ ಕೊಳಗೇರಿಗಳನ್ನು ಅಭಿವೃದ್ಧಿಪಡಿಸಲು ಸ್ಲಂ ಬೋರ್ಡ್ ಗೆ ಸೂಚಿಸಲಾಗಿದೆ’ ಎಂದು ನಗರಸಭೆ ಆಯುಕ್ತೆ ಮಾನಸ ತಿಳಿಸಿದರು.
ಮಾಸ್ಟರ್ ಪ್ಲಾನ್ : ‘ಇಲಾಖೆ ವತಿಯಿಂದ ಎನ್.ಎಸ್.ತಿಟ್ಟು ಕೊಳೆಗೇರಿ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ದಪಡಿಸಿ 18 ಎಕರೆ ಪ್ರದೇಶದಲ್ಲಿ ವ್ಯವಸ್ಥಿತವಾಗಿ ರಸ್ತೆ ಚರಂಡಿ ಮತ್ತು ಒಳಚರಂಡಿ ಅಭಿವೃದ್ಧಿಗೆ ಕ್ರಮವಹಿಸಲಾಗುತ್ತಿದೆ’ ಎಂದು ಸ್ಲಂ ಬೋರ್ಡ್ ಎಂಜಿನಿಯರ್ ಲಕ್ಷ್ಮೀಶ ಗೌಡ ಸಹಾಯಕ ತಿಳಿಸಿದರು.
ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಯಾವುದೇ ಅಭಿವೃದ್ಧಿಯಾಗಿಲ್ಲ ನಗರಸಭೆ ನಮ್ಮನ್ನು ಹತ್ತಿರಕ್ಕೆ ಸೇರಿಸುತ್ತಿಲ್ಲ. ಅತಂತ್ರ ಸ್ಥಿತಿಯಲ್ಲಿದ್ದೇವೆ.-ಲಕ್ಷ್ಮಿ, ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.