ADVERTISEMENT

ಮೈಸೂರು: ಯತೀಂದ್ರ ಸಿದ್ದರಾಮಯ್ಯ ವಜಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 13:42 IST
Last Updated 16 ನವೆಂಬರ್ 2024, 13:42 IST
ಯತೀಂದ್ರ ಸಿದ್ದರಾಮಯ್ಯ
ಯತೀಂದ್ರ ಸಿದ್ದರಾಮಯ್ಯ   

ಮೈಸೂರು: ‘ದೇಶದ ನ್ಯಾಯಾಂಗ ಮತ್ತು ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಪರಿಷತ್ ಸದಸ್ಯತ್ವದಿಂದ ವಜಾಗೊಳಿಸಬೇಕು’ ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ನಗರ ಸಂಚಾಲಕ ಶಿವಕುಮಾರ್ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕ ಯತೀಂದ್ರ ಅವರು ಎಚ್‌.ಡಿ.ಕೋಟೆ ಮತ್ತು ತಿ.ನರಸೀಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಐಟಿ, ಇಡಿ, ಸಿಬಿಐ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆಯಾಗಿವೆ. ಸುಳ್ಳನ್ನು ಸಾಬೀತು ಮಾಡಲು ಮುಂದಾಗಿವೆ. ಎಷ್ಟೋ ಸಂದರ್ಭದಲ್ಲಿ ಕೋರ್ಟ್‌ಗಳು ಕೂಡ ಅವರ ಮಾತಿನಂತೆಯೇ ಕೆಲಸ ಮಾಡುತ್ತವೆ ಎಂದು ಹೇಳಿದ್ದು, ಇದು ಸಂವಿಧಾನ ವಿರೋಧಿ ಹಾಗೂ ನ್ಯಾಯಾಂಗ ನಿಂದನೆಯ ಹೇಳಿಕೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಯತೀಂದ್ರ ಅವರ ಮಾತು ನಿಜವಾಗಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಆರಾಮಾಗಿ ಓಡಾಡಿಕೊಂಡಿರಲು ಸಾಧ್ಯವಾಗುತ್ತಿತ್ತೇ? ಉನ್ನತ ಇತಿಹಾಸ ಹೊಂದಿರುವ ವಿಧಾನ ಪರಿಷತ್ತಿನ ಸದಸ್ಯರಾಗಿ ಈ ರೀತಿ ಸುಳ್ಳು ಹೇಳಿಕೆ ನೀಡುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕಾನೂನು ಪ್ರಕೋಷ್ಠದ ಗ್ರಾಮಾಂತರ ಘಟಕದ ಸಂಚಾಲಕ ಜಿ. ನಂಜುಂಡಸ್ವಾಮಿ, ಸಹ ಸಂಚಾಲಕಿ ಎಚ್.ಕೆ.ಭಾಗ್ಯಾ, ವಕೀಲರಾದ ಶರತ್, ಬಿ.ಎನ್.ಗಂಗಾಧರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.