ADVERTISEMENT

ಮೈಸೂರು | ಟನ್‌ ಕಬ್ಬಿಗೆ ₹4 ಸಾವಿರ ನಿಗದಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 8:26 IST
Last Updated 11 ಜುಲೈ 2024, 8:26 IST
   

ಮೈಸೂರು: ‘ಟನ್‌ ಕಬ್ಬಿಗೆ ₹4 ಸಾವಿರ ನಿಗದಿಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 16ರಿಂದ ನಗರದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 11ಕ್ಕೆ ನಜರಬಾದ್‌ ಮುಖ್ಯ ರಸ್ತೆಯಲ್ಲಿರುವ ಮಲೆ ಮಹದೇಶ್ವರ ದೇವಸ್ಥಾನದಿಂದ ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು’ ಎಂದು ಹೇಳಿದರು.

‘ಸರ್ಕಾರದ ಆದೇಶದಂತೆ ಟನ್‌ ಕಬ್ಬಿಗೆ ಘೋಷಿಸಿದ್ದ ₹ 150 ಬಾಕಿಯನ್ನು ಸಕ್ಕರೆ ಕಾರ್ಖಾನೆಗಳಿಂದ ಕೊಡಿಸಬೇಕು. ಪ್ರತಿ ಸಕ್ಕರೆ ಕಾರ್ಖಾನೆಯ ಮುಂದೆ ಎ.ಪಿ.ಎಂ.ಸಿ. ಮುಖಾಂತರ ತೂಕದ ಯಂತ್ರದ ವ್ಯವಸ್ಥೆ ಮಾಡಬೇಕು. ಅಂತರ ಜಿಲ್ಲಾ ಕಬ್ಬು ಸಾಗಣೆಗೆ ನಿರ್ಬಂಧ ಹೇರಬಾರದು’ ಎಂದು ಒತ್ತಾಯಿಸಿದರು.

ADVERTISEMENT

‘ಕೇಂದ್ರ ಸರ್ಕಾರವು ಎಫ್‌ಆರ್‌ಪಿ (ನ್ಯಾಯಸಮ್ಮತ ಹಾಗೂ ಮೌಲ್ಯಾಧಾರಿತ ದರ)ಯನ್ನು ₹ 3,400 ನಿಗದಿಪಡಿಸಿರುವುದು ರೈತರಿಗೆ ಮಾಡಿದ ದ್ರೋಹವಾಗಿದೆ. ಇದನ್ನು ಕೂಡಲೇ ಮರುಪರಿಶೀಲಿಸಬೇಕು’ ಎಂದು ಆಗ್ರಹಿಸಿದರು.

‘ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ, ಕೆರೆ–ಕಟ್ಟೆಗಳಿಗೆ ಈ ಸಾಲಿನಲ್ಲಿ ಯಾವುದೇ ನಿರ್ಬಂಧ ಅಥವಾ ಷರತ್ತು ವಿಧಿಸದೇ ನೀರನ್ನು ಹರಿಸಿ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡಬೇಕು. ಹೊಸ ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ-ಸಕ್ರಮ ಯೋಜನೆಯನ್ನು ಮರು ಜಾರಿಗೊಳಿಸಬೇಕು’ ಎಂದು ಕೋರಿದರು.

‘ಕೆ.ಆರ್.ನಗರದ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ತಕ್ಷಣ ಪುನರಾರಂಭಿಸಬೇಕು. ನಂಜನಗೂಡು ತಾಲ್ಲೂಕಿನ ಹಂಬಳೆ, ಹಲರೆ, ನವಿಲೂರು, ಮುದ್ದಳ್ಳಿ, ಹೊಸಪುರ, ಸಿದ್ದಯ್ಯನಹುಂಡಿ, ಎಲಚಗೆರೆ, ದೇಪೇಗೌಡನಪುರ ವ್ಯಾಪ್ತಿಗೆ ಬರುವ ಹುರ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಸಂಘದ ಪದಾಧಿಕಾರಿಗಳ ಜೊತೆ ತಕ್ಷಣ ಸಭೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಸೆಳೆದು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಘಟಕದ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ, ನಗರ ಘಟಕದ ಅಧ್ಯಕ್ಷ ದೇವೇಂದ್ರಕುಮಾರ್, ಸರಗೂರು ತಾಲ್ಲೂಕು ಘಟಕದ ಅಧ್ಯಕ್ಷ ಬಿದರಹಳ್ಳಿ ಮಾದಪ್ಪ, ಜಿಲ್ಲಾ ಘಟಕದ ಕಾರ್ಯದರ್ಶಿ ಬನ್ನಳ್ಳಿಹುಂಡಿ ರಾಜೇಂದ್ರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.