ADVERTISEMENT

ದಿನೇಶ್‌, ನಟೇಶ್‌ ಬಂಧನಕ್ಕೆ ಒತ್ತಾಯ

ಲೋಕಾಯುಕ್ತಕ್ಕೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 18:31 IST
Last Updated 28 ಅಕ್ಟೋಬರ್ 2024, 18:31 IST
ಸ್ನೇಹಮಯಿ ಕೃಷ್ಣ
ಸ್ನೇಹಮಯಿ ಕೃಷ್ಣ   

ಮೈಸೂರು: ‘ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದಿಂದ 50:50 ಅನುಪಾತದಲ್ಲಿ 928 ನಿವೇಶನಗಳ ಅಕ್ರಮ ಹಂಚಿಕೆಯಾಗಲು ಕಾರಣರಾದ, ಪ್ರಾಧಿಕಾರದ ಹಿಂದಿನ ಆಯುಕ್ತರಾದ ಡಿ.ಬಿ.ನಟೇಶ್‌ ಹಾಗೂ ಜಿ.ಟಿ.ದಿನೇಶ್‌ ಕುಮಾರ್ ಅವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಬ್ಬರೂ 50:50 ನಿಯಮದಡಿ ಬಿಲ್ಡರ್‌ ಮಂಜುನಾಥ್, ನವೀನ್ ಬೋಸ್‌ ಹಾಗೂ ರಾಕೇಶ್‌ ಪಾಪಣ್ಣ ಸೇರಿದಂತೆ ಹಲವರಿಗೆ ನಿಯಮಬಾಹಿರವಾಗಿ ನಿವೇಶನಗಳನ್ನು ವಿತರಿಸಿದ್ದಾರೆ’ ಎಂದು ಆರೋಪಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ್ದೆಂದು ಹೇಳಲಾಗುವ ಕೆಸರೆ ಸರ್ವೆ ಸಂಖ್ಯೆ 464ರ ಭೂಮಿಯನ್ನು ಭೂಸ್ವಾಧೀನದಿಂದ ಕೈಬಿಡಲಾಗಿದೆ ಎಂಬ ದಾಖಲಾತಿಗಳಲ್ಲಿರುವ ಅಧಿಕಾರಿಗಳ ಸಹಿ ಅನುಮಾನಾಸ್ಪದವಾಗಿದೆ. ಅವುಗಳ ಬಗ್ಗೆ ವೈಜ್ಞಾನಿಕ ವರದಿ ಪಡೆದು ಕ್ರಮ ವಹಿಸಬೇಕೆಂದು ಮತ್ತೊಂದು ಮನವಿಯನ್ನು ಲೋಕಾಯುಕ್ತಕ್ಕೆ ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಮುಖ್ಯಮಂತ್ರಿ ಪತ್ನಿಗೆ ನೀಡಿದ್ದ ನಿವೇಶನಗಳನ್ನು ನಿದರ್ಶನವಾಗಿಟ್ಟುಕೊಂಡು, ಮುಡಾದ ಎಲ್ಲ ಪ್ರಕರಣಗಳ ಮೇಲೂ ಕ್ರಮ ವಹಿಸಬೇಕು. ನಕಲಿ ದಾಖಲೆ ಆಧರಿಸಿ ನಿವೇಶನ ಹಂಚಿಕೆ ಮಾಡಿದವರನ್ನೂ ಬಂಧಿಸಬೇಕು’ ಎಂದು ಒತ್ತಾಯಿಸಿದರು. 

ಬಿಲ್ಡರ್ ಮಂಜುನಾಥ್ ವಿರುದ್ಧ ದೂರು: ‘ಬಿಲ್ಡರ್ ಮಂಜುನಾಥ್‌ ಅವರ ವಿರುದ್ಧ ವಿಡಿಯೊ ಸಹಿತ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದೇನೆ’ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.

‘ಶಿವಣ್ಣ ಎಂಬುವರಿಂದ ಮಂಜುನಾಥ್ ಅವರ ಸಹಾಯಕ ₹ 25 ಲಕ್ಷ ಪಡೆಯುತ್ತಿರುವ ವಿಡಿಯೊ ಅದು. ಅದನ್ನು ಆಧರಿಸಿ ಇ.ಡಿಗೆ ಮನವಿ ಪತ್ರವನ್ನು ಮೊದಲೇ ನೀಡಿದ್ದೆ. ಅದಲ್ಲದೆ, 30 ವರ್ಷದ ಹಿಂದೆ ಬಡಾವಣೆ ನಿರ್ಮಾಣ ವೇಳೆ ಸುಳ್ಳು ಕ್ರಯಪತ್ರಗಳನ್ನು ಕೊಟ್ಟು 50:50 ಅನುಪಾತದಲ್ಲಿ ನಿವೇಶನ ಕೊಡಬೇಕೆಂದು ಮುಡಾಕ್ಕೆ ಮನವಿ ಮಾಡಿ ಅಕ್ರಮವಾಗಿ ಹಲವರು ನಿವೇಶನ ಪಡೆದಿದ್ದಾರೆ. ಅದೆಲ್ಲದರ ದಾಖಲೆಗಳನ್ನು ಇ.ಡಿಗೆ ನೀಡಿದ್ದೇನೆ. ಅದನ್ನು ಆಧರಿಸಿಯೇ ಶೋಧ ನಡೆಸಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.