ಮೈಸೂರು: ಕರ್ತವ್ಯ ಲೋಪ ಎಸಗಿದ ಎಚ್.ಡಿ.ಕೋಟೆ ಪುರಸಭೆಯ ಕಿರಿಯ ಎಂಜಿನಿಯರ್ ಸುರೇಶ್ ಕೆ. ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆ–4ರ ಅಡಿಯಲ್ಲಿ ನಿರ್ವಹಿಸಲಾದ ಕಾಮಗಾರಿಯಲ್ಲಿ ಗುಣಮಟ್ಟ ಇಲ್ಲದಿರುವುದನ್ನು ಗುರುತಿಸಿ ಶಿಸ್ತುಕ್ರಮ ಜರುಗಿಸಲಾಗಿದೆ. ಎಚ್.ಡಿ.ಕೋಟೆ ಪುರಸಭಾ ವ್ಯಾಪ್ತಿಯ ವಾರ್ಡ್ ನಂ. 4ರ ಸಿದ್ದಪ್ಪಾಜಿ ರಸ್ತೆಯ ರಾಮಮಂದಿರದಿಂದ ಅರಳಿಕಟ್ಟೆವರೆಗೆ, ವಾರ್ಡ್ ನಂ. 14ರ ಪ್ರಕಾಶ್ ಸೇಟು ಮನೆಯಿಂದ ಎನ್.ಎನ್.ಉಮಾಶಂಕರ್ ಮನೆಯವರೆಗೆ, ವಾರ್ಡ್ ನಂ.23ರ ಮೇಟಿಕುಪ್ಪೆ ಮುಖ್ಯರಸ್ತೆಯಿಂದ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಯ ಪರಿಶೀಲನೆಗೆ ತೆರಳಿದ್ದ ಸುರೇಶ್ ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿದ್ದರು.
55 ಎಂಎಂ ಡಾಂಬರು ರಸ್ತೆ ಹಾಗೂ 100 ಎಂಎಂ ದಪ್ಪದ ಕಾಂಕ್ರೀಟ್ ರಸ್ತೆಯನ್ನು ಕ್ರಮವಾಗಿ 75 ಎಂಎಂ ಹಾಗೂ 150 ಎಂಎಂ ಎಂದು ನಮೂದಿಸಿ ವರದಿ ನೀಡಿ, ಬಿಲ್ಲು ಪಾವತಿಸಲು ಕಡತ ಸಲ್ಲಿಸಿದ್ದರು. ಕರ್ತವ್ಯ ಲೋಪ ಎಸಗಿ ಅನುದಾನ ದುರುಪಯೋಗಕ್ಕೆ ಕಾರಣರಾದ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.