ಮೈಸೂರು: ನಗರ ಸಂಚಾರ ಪೊಲೀಸರು ನಾಲ್ಕು ದಿನಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ವಶಪಡಿಸಿಕೊಂಡಿದ್ದ ದ್ವಿಚಕ್ರ ವಾಹನಗಳ ದೋಷಪೂರಿತ ಸೈಲೆನ್ಸರ್ ಮೇಲೆ ಬುಧವಾರ ರೋಡ್ ರೋಲರ್ ಹತ್ತಿಸಿ ಕಾನೂನು ಪ್ರಕಾರ ವಿಲೇವಾರಿ ಮಾಡಲಾಯಿತು.
ನಗರದ ಲಲಿತ ಮಹಲ್ ರಸ್ತೆಯಲ್ಲಿರುವ ಸಿದ್ಧಾರ್ಥನಗರ ಸಂಚಾರ ಪೊಲೀಸ್ ಠಾಣೆ ಮುಂಭಾಗದ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಂದ ಬೇರ್ಪಡಿಸಿದ್ದ 217 ದೋಷಪೂರಿತ ಸೈಲೆನ್ಸರ್ ಮೇಲೆ ರೋಡ್ ರೋಲರ್ ಹತ್ತಿಸಲಾಯಿತು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ‘ಆ.31 ರಿಂದ ಸೆ.3 ರವರೆಗೆ 4 ದಿನ ನಗರದಲ್ಲಿ ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರ ವಿರುದ್ಧ ವಿಶೇಷ ತಪಾಸಣೆ ಕೈಗೊಳ್ಳಲಾಗಿತ್ತು. ಒಟ್ಟು 94 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು, ದೋಷಪೂರಿತ ಸೈಲೆನ್ಸರ್ ವಶಪಡಿಸಿಕೊಂಡಿದ್ದು, ಸವಾರರ ವಿರುದ್ಧ ಐಎಂವಿ (ಇಂಡಿಯನ್ ಮೋಟಾರ್ ವೆಹಿಕಲ್ ಆ್ಯಕ್ಟ್) ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಈ ರೀತಿಯ ಸೈಲೆನ್ಸರ್ ಅಳವಡಿಸುವ ಅಂಗಡಿಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.
‘2024ನೇ ಸಾಲಿನಲ್ಲಿ ಒಟ್ಟು 217 ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಸಂಚರಿಸುತ್ತಿದ್ದ ದ್ವಿಚಕ್ರವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಯೂ ಈ ವಿಶೇಷ ತಪಾಸಣೆ ಮುಂದುವರೆಯಲಿದ್ದು, ಸಂಚಾರ ನಿಯಮ ಉಲ್ಲಂಘಿಸುವವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿದರೆ ವಾಹನ ವಶಪಡಿಸಿಕೊಂಡು, ಸವಾರರ ಡಿಎಲ್ ರದ್ದುಗೊಳಿಸಲು ಕ್ರಮ ವಹಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಡಿಸಿಪಿಗಳಾದ ಎಂ.ಮುತ್ತುರಾಜು, ಎಸ್.ಜಾಹ್ನವಿ, ಸಂಚಾರ ಉಪ ವಿಭಾಗದ ಎಸಿಪಿ ಎಚ್.ಪರಶುರಾಮಪ್ಪ, ವಿವಿಧ ಸಂಚಾರ ಠಾಣೆಗಳ ಇನ್‌ಸ್ಪೆಕ್ಟರ್‌ಗಳಾದ ಲವ, ಮಮತಾ, ರೇಖಾ ಬಾಯಿ, ಶ್ರೀಧರ್, ಶರತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.