ADVERTISEMENT

ವಚನ ಭ್ರಷ್ಟರಿಂದ ರಾಮನ ಹೆಸರು ಹಾಳು: ದೇವನೂರ ಮಹಾದೇವ ವಿಷಾದ

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
 ದೇವನೂರ ಮಹಾದೇವ
 ದೇವನೂರ ಮಹಾದೇವ   

ಮೈಸೂರು: ‘ವಚನ ಪಾಲನೆಗೆ ಶ್ರೀರಾಮ ಪ್ರತೀಕ. ಆದರೆ ಕೊಟ್ಟ ವಚನವನ್ನೇ ಪಾಲನೆ ಮಾಡದವರು ಇಂದು ಶ್ರೀರಾಮನ ಘೋಷಣೆ ಕೂಗುತ್ತಿದ್ದು, ಆತನ ಹೆಸರನ್ನೇ ಕೊಲ್ಲುತ್ತಿದ್ದಾರೆ’ ಎಂದು ಚಿಂತಕ ದೇವನೂರ ಮಹಾದೇವ ವಿಷಾದಿಸಿದರು.

ಸೌಹಾರ್ದ ಕರ್ನಾಟಕ ಸಂಘಟನೆಯು ಹುತಾತ್ಮ ದಿನದ ಅಂಗವಾಗಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಇವತ್ತು ಸೌಹಾರ್ದತೆ ಇರಬೇಕೆಂದು ನಾವು ಕೇಳುತ್ತಿರುವುದು ದಯನೀಯ ಸ್ಥಿತಿ. ಅಂದರೆ ಇದನ್ನು ಈಗಾಗಲೇ ಯಾರೋ ಹಾಳು ಮಾಡಿದ್ದಾರೆ ಎಂದರ್ಥ. ನಾಡಿನ ಸಹಬಾಳ್ವೆ, ಸಮಾಜಕ್ಕೆ ಯಾರೋ ವಿಷ ಹಾಕಿದ್ದಾರೆ. ನ್ಯಾಯದ ತಕ್ಕಡಿ ಅಲುಗಾಡುತ್ತಿದೆ. ಸಮಸ್ಯೆಗಳ ಜೊತೆ ಮುಖಾಮುಖಿಯಾಗಲು ಸಾಮರ್ಥ್ಯ ಇಲ್ಲದಿರುವವರಿಂದ ಈ ಸಮಸ್ಯೆ ಉಂಟಾಗಿದೆ’ ಎಂದು ವಿವರಿಸಿದರು.

‘ಜಗತ್ತಿನ ಪೈಲ್ವಾನರು ಎಂದು ಹೇಳಿಕೊಳ್ಳುವವರು ಒಳಗೆ ಪೊಳ್ಳು. ಇವರು ದೇಶದ ನಿರುದ್ಯೋಗ, ಬಡತನ ಕಡಿಮೆ ಮಾಡಲಿಲ್ಲ. ಕೊರೊನಾ ಸಂದರ್ಭದಲ್ಲಿ ಅದಾನಿ ಸಂಪತ್ತು ದ್ವಿಗುಣವಾಯಿತು. ಬಡವರು ಬಡವರಾಗೇ ಉಳಿದರು. ಬಡವರ ತೆರಿಗೆ ಹಣ ಅದಾನಿಯಂತಹವರ ಖಾತೆಗೆ ಹೋಗುತ್ತಿದೆ’ ಎಂದರು.

ADVERTISEMENT

‘ಹಿಂದೆಲ್ಲ ಸರ್ಕಾರ ತೆರಿಗೆ ಮೂಲಕ ಬಡವರ ರಕ್ತ ಹೀರುತ್ತಿದೆ ಎನ್ನುತ್ತಿದ್ದೆವು. ಈಗ ಇರುವವರು ರಕ್ತದ ಜೊತೆ ನರವನ್ನೂ ಹೀರುತ್ತಿದ್ದಾರೆ. ಈ ಆಳ್ವಿಕೆ ಹೋಗದೇ ಈ ಸಮಸ್ಯೆ ಬಗೆಹರಿಯದು. ಇದಕ್ಕಾಗಿ ಈ ಕ್ಷಣದಿಂದಲೇ ಜಾಗೃತಿ ಪ್ರಯತ್ನ ಆಗಬೇಕು. ಸಾಮಾಜಿಕ ಜಾಗೃತಿ ಮೂಡಬೇಕು. ಇಲ್ಲವಾದರೆ ಸಂವಿಧಾನ, ಪ್ರಜಾಪ್ರಭುತ್ವ ಉಳಿಯದು. ಇಡೀ ದೇಶ ಅಪಾಯದಲ್ಲಿ ಇದ್ದು, ಪ್ರತಿಯೊಬ್ಬರೂ ಧ್ವನಿ ಎತ್ತಬೇಕು’ ಎಂದರು.

ಏನೂ ಸಾಧನೆ ಮಾಡಲಾಗದವರು ಕೆರಗೋಡಿನಲ್ಲಿ ಬಾವುಟದ ಗದ್ದಲ ಎಬ್ಬಿಸುತ್ತಿದ್ದಾರೆ.
–ದೇವನೂರ ಮಹಾದೇವ ಚಿಂತಕ
ಸೌಹಾರ್ದ ಕರ್ನಾಟಕ ಸಂಘಟನೆಯು ಮಂಗಳವಾರ ಮೈಸೂರಿನ ಪುರಭವನದ ಅಂಬೇಡ್ಕರ್‌ ಪ್ರತಿಮೆ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ದೇವನೂರ ಮಹಾದೇವ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.