ಮೈಸೂರು: ‘ಅಯೋಧ್ಯೆ ರಾಮ ಮಂದಿರವು ಸದ್ಯ ರಾಜಕೀಯ ಜೂಜಾಟದ ಕೇಂದ್ರವಾಗಿದೆ’ ಎಂದು ಸಾಹಿತಿ ದೇವನೂರ ಮಹಾದೇವ ಟೀಕಿಸಿದರು.
ಇಲ್ಲಿನ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಶ್ರಮಣ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಬಯಲು ಬಳಗದಿಂದ ಭಾನುವಾರ ಆಯೋಜಿಸಿದ್ದ ‘90ರ ನಂತರದ ಕರ್ನಾಟಕ’ ಕುರಿತ ಕಮ್ಮಟದಲ್ಲಿ ಅವರು ಮಾತನಾಡಿದರು.
‘ನಮ್ಮಲ್ಲಿ ಸಾಕಷ್ಟು ಹಳ್ಳಿಗಳಲ್ಲಿ ರಾಮ ಮಂದಿರಗಳು ಇದ್ದು, ಅಲ್ಲಿ ಜೂಜಾಟವೇ ಹೆಚ್ಚಾಗಿದೆ. ಅಯೋಧ್ಯೆ ವಿಚಾರವೂ ಅದೇ ರೀತಿ ಆಗಿದೆ’ ಎಂದು ಲೇವಡಿ ಮಾಡಿದರು.
‘ಶ್ರೀರಾಮ ತನ್ನ ಅರಮನೆ ಮುಂದೆ ನ್ಯಾಯದ ಘಂಟೆ ಕಟ್ಟಿಸಿದ್ದ. ಜನಸಾಮಾನ್ಯರಿಗೆ ನ್ಯಾಯದಾನಕ್ಕೆ ಆದ್ಯತೆ ನೀಡಿದ್ದ. ಈಗ ನಿರ್ಮಾಣ ಆಗಿರುವ ರಾಮ ಮಂದಿರದ ನಾಲ್ಕು ದಿಕ್ಕಿನಲ್ಲೂ ಘಂಟೆ ಕಟ್ಟಿಸಿ ಜನರ ಸಮಸ್ಯೆ ಆಲಿಸಬೇಕು. ಕೊಟ್ಟ ಮಾತನ್ನು ಕಾಲ ಕಸ ಮಾಡಬಾರದು’ ಎಂದರು.
ಮೌಲ್ಯಮಾಪನ ನಡೆಯಲಿ:
‘ನಮ್ಮ ಆದಿವಾಸಿಗಳು ದೇವರನ್ನೇ ಮೌಲ್ಯಮಾಪನ ಮಾಡಿ, ಕಿತ್ತು ಬಿಸಾಡುವಷ್ಟು ಶಕ್ತಿ ಉಳ್ಳವರು. ಆದರೆ, ನಾವು ರಾಜಕಾರಣದಲ್ಲಿ ಕೊಟ್ಟ ಮಾತು ತಪ್ಪಿದ, ಕಷ್ಟಕ್ಕೆ ಆಗದ ದೈವವನ್ನೇ ಇನ್ನೂ ಆರಾಧಿಸುತ್ತಿದ್ದೇವೆ. ಇಡೀ ಜನಸ್ತೋಮ ಭಾವುಕ ಬಲೆಗೆ ಬಿದ್ದಿದ್ದು, ಬಿಡಿಸಲಾರದೇ ಒದ್ದಾಡುತ್ತಿದ್ದೇವೆ’ ಎಂದರು.
‘ಕಳೆದ ಚುನಾವಣೆಯಲ್ಲಿ ನಮ್ಮಿಂದ ಆಯ್ಕೆಯಾದ ಸಂಸದರು ಜನರ ಆಶೋತ್ತರಗಳನ್ನು ಎಷ್ಟು ಪೂರೈಸಿದರು, ಏನನ್ನು ಪೂರೈಸಲಿಲ್ಲ ಎನ್ನುವುದರ ಮೌಲ್ಯಮಾಪನ ತುರ್ತಾಗಿ ಆಗಬೇಕಿದೆ. ಹಾಗೆ ನಡೆದರೆ, ಇಂದಿನ ಶೇ 98ರಷ್ಟು ಸಂಸದರನ್ನು ಸಂಸತ್ತಿನಿಂದ ಆಚೆ ಬಿಸಾಡಬೇಕಾಗುತ್ತದೆ’ ಎಂದು ಹೇಳಿದರು.
‘ಪುರಾಣ, ಮಹಾಕಾವ್ಯಗಳಲ್ಲಿ ಗರ್ವಭಂಗ ಎಂಬ ಮಾತಿದೆ. ಭೀಮನಿಗೆ ಗರ್ವ ಬಂದಾಗ, ಆಂಜನೇಯನನ್ನು ಅಲುಗಾಡಿಸಲು ಆಗಲಿಲ್ಲ. ಅರ್ಜುನನಿಗೆ ಗರ್ವ ಹೆಚ್ಚಾದಾಗ ಮಗನನ್ನೇ ಕಳೆದುಕೊಂಡ. ಯಾವುದೇ ಆದರೂ ಅತಿಯಾದಾಗ ಅದು ತನ್‌ತಾನೇ ಕೊನೆಯಾಗುತ್ತದೆ. ನಾನತ್ವ ಎನ್ನುವುದು ಒಳ್ಳೆಯದಲ್ಲ. ಹಿಂದು ಎನ್ನುವುದು ಸಹಜ ಧರ್ಮ. ಹಿಂದುತ್ವ ಎನ್ನುವುದು ನಾನತ್ವ. ಈ ನಾನತ್ವ ಇರುವವರಿಗೆ ಮತದಾರರು ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡಬಾರದು’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.