ADVERTISEMENT

ಆದಿವಾಸಿಗಳಿಗೆ ಅಭಿವೃದ್ಧಿ ನಿಗಮ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 0:04 IST
Last Updated 13 ನವೆಂಬರ್ 2024, 0:04 IST
   

ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ): ‘ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಲು ಕ್ರಮ ವಹಿಸಲಾಗುವುದು’ ಎಂದು‌ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ತಾಲ್ಲೂಕಿನ ಕೆರೆಹಾಡಿಯಲ್ಲಿ ಮಂಗಳವಾರ ಸಂಜೆ ನಡೆದ ಸಂವಾದದಲ್ಲಿ, ‘ಪರಿಶಿಷ್ಟ ಪಂಗಡದ ಮೀಸಲಿನಲ್ಲಿ ಆದಿವಾಸಿಗಳಿಗೆ ಒಳಮೀಸಲಾತಿ ಕೊಡಲು ಅವಕಾಶವಿಲ್ಲ. ಮುಂದಿನ ದಿನಗಳಲ್ಲಿ‌ ಸಮಿತಿ ರಚಿಸಲಾಗುವುದು. ವರದಿ ಆಧರಿಸಿ ಒಳ ಮೀಸಲಾತಿಗೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು’ ಎಂದರು.

‘ವನ್ಯಜೀವಿ ಕಾನೂನಿನಡಿ ಆದಿವಾಸಿ ಗಳಿಗೆ ಯಾವ ಸೌಲಭ್ಯ ಕೊಡಿಸಬಹುದೆಂಬುದರ ಬಗ್ಗೆ ವರದಿ ನೀಡಲು ಉನ್ನತ ಅಧಿಕಾರಿಯನ್ನು ನೇಮಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಅಧಿಕಾರಿಗಳದ್ದೇ ಭಯ:

‘ಹಾಡಿಯಲ್ಲಿ ಕುಡಿಯುವ ನೀರಿಲ್ಲ. ಮನೆ ಕಟ್ಟಲು ಅರಣ್ಯಾಧಿಕಾರಿಗಳು ಅವಕಾಶ ಕೊಡುತ್ತಿಲ್ಲ. ವನ್ಯಪ್ರಾಣಿಗಳ ಭಯವಿಲ್ಲ. ಆದರೆ, ಅರಣ್ಯ ಅಧಿಕಾರಿಗಳದ್ದೇ ಭಯ’ ಎಂದು ಕೆರೆಹಾಡಿ ನಿವಾಸಿ ರವಿ ಅಳಲು ತೋಡಿಕೊಂಡರೆ, ‘ನಾಲ್ಕು ಎಕರೆಯಲ್ಲಿ ಬೇಸಾಯ ಮಾಡುತ್ತಿದ್ದರೂ ಒಂದೆರಡು ಗುಂಟೆ ಜಾಗ ನೀಡಿದ್ದಾರೆ’ ಎಂದು ಮಾಳದ ಹಾಡಿ ನಿವಾಸಿ ಸೋಮೇಶ್‌ ಗಮನ ಸೆಳೆದರು.

ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಮನೆ ನಿರ್ಮಾಣಕ್ಕೆ ತೊಂದರೆ ನೀಡಬಾರದು. ಕಾನೂನಿಗೆ ಅನುಗುಣವಾಗಿ ಅರಣ್ಯಾಧಿ ಕಾರಿಗಳು ಸೌಲಭ್ಯ ಕಲ್ಪಿಸಬೇಕು. ಭೂಮಿ ನೀಡುವ ಬಗ್ಗೆ ವನ್ಯಜೀವಿ ಮಂಡಳಿಯ ಸಭೆ ನಡೆಸಿ ತೀರ್ಮಾನಿಸಲಾಗುವುದು’ ಎಂದರು.

ಆದಿವಾಸಿ ಮುಖಂಡ ಕಾಳ ಕಲ್ಕರ್, ‘ಪ್ರೊ.ಮುಜಾಫರ್ ಅಸ್ಸಾದಿ ವರದಿಯಂತೆ 34 ಶಿಫಾರಸುಗಳನ್ನು ಸಚಿವ ಸಂಪುಟ ಅನುಷ್ಠಾನಗೊಳಿಸಬೇಕು. ಸಾಗುವಳಿ ಭೂಮಿಗೆ ಪಕ್ಕಾ ಪೋಡು ಮಾಡಿಸಬೇಕು. ಬಜೆಟ್ ಅನುದಾನದ ಜೊತೆಗೆ ಮುಖ್ಯಮಂತ್ರಿ ನಿಧಿಯಿಂದ ಆದಿವಾಸಿ ಹಾಡಿಗಳನ್ನು ಮಾದರಿ ಹಾಡಿಯಾಗಿ ಮಾಡಬೇಕು’ ಎಂದು ಕೋರಿದರು.

ಅಭಿವೃದ್ಧಿ ಕೆಲಸಗಳಿಗೆ ಹಣವಿದೆ:

‘ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಬಳಿ ಹಣವಿಲ್ಲವೆಂದು ವಿರೋಧ ಪಕ್ಷಗಳ ಟೀಕೆಯಲ್ಲಿ ಸತ್ಯಾಂಶವಿಲ್ಲ. ಸುಳ್ಳೇ ಅವರ ಮನೆ ದೇವರು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲವೆಂದು ಬಿಜೆಪಿಯವರು ಹೇಳುತ್ತಿದ್ದಾರೆ. ಎಲ್ಲರಿಗೂ‌ ಸಂಬಳ ಆಗುತ್ತಿಲ್ಲವೆ? ಎಚ್.ಡಿ.ಕೋಟೆಯಲ್ಲಿ ₹ 443.64 ಕೋಟಿ, ತಿ.ನರಸೀಪುರದಲ್ಲಿ ₹ 500 ಕೋಟಿ ವೆಚ್ಚದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಈಗ ಹೇಳಿ ಸರ್ಕಾರದ ಬಳಿ ಹಣವಿಲ್ಲವೇ' ಎಂದು ಜನರನ್ನು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.