ಸಾಲಿಗ್ರಾಮ: ಸಮೀಪದ ಹಾಸನ– ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ಚಿಕ್ಕವಡ್ಡರಗುಡಿ ಗ್ರಾಮದ ಬಸವೇಶ್ವರ ದೇವಾಲಯವನ್ನು ₹75 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿದ್ದು, ಫೆ.4ರಂದು ಲೋಕಾರ್ಪಣೆಗೊಳ್ಳಲಿದೆ.
ಗ್ರಾಮದ ರಂಗಸ್ಥಳದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣ ಗೊಂಡಿದ್ದ ಬಸವೇಶ್ವರ ದೇವಾಲಯ ಶಿಥಿಲಗೊಂಡಿತ್ತು. ಇದನ್ನು ಜೀರ್ಣೋದ್ಧಾರಗೊಳಿಸಲು ಗ್ರಾಮದ ಯುವಕರು ಪಣತೊಟ್ಟರು. ಇದಕ್ಕೆ ಜಾತಿಭೇದವಿಲ್ಲದೆ ಎಲ್ಲರೂ ದೇಣಿಗೆ ನೀಡಲು ಮುಂದಾದರು. ಯುವಕರು ದೇವಾಲಯ ಸಮಿತಿಯನ್ನು ರಚಿಸಿ ಜೀರ್ಣೋದ್ಧಾರ ಕಾಮಗಾರಿ ಕೈಗೊಂಡರು.
‘ಗ್ರಾಮದಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿ ಉಮಾಶಂಕರ್ ₹5 ಲಕ್ಷ ದೇಣಿಗೆ ನೀಡಿದ್ದರು. ದೇವಾಲಯ ಲೋಕಾರ್ಪಣೆಗೊಳ್ಳುವ ದಿನದ ಪೂಜಾ ಕಾರ್ಯದ ಖರ್ಚು ವೆಚ್ಚವನ್ನೂ ಭರಿಸುವುದಾಗಿ ತಿಳಿಸಿದ್ದರು. ಜತೆಗೆ ತಮ್ಮ ಸ್ನೇಹಿತರಿಂದ ₹12 ಲಕ್ಷ ದೇಣಿಗೆಯನ್ನು ಸಂಗ್ರಹಿಸಿ ಕೊಟ್ಟಿದ್ದಾರೆ’ ಎಂದು ಸಮಿತಿ ಅಧ್ಯಕ್ಷ ಶಂಭು ‘ಪ್ರಜಾವಾಣಿ’ಗೆ ತಿಳಿಸಿದರು.
‘ಶಾಸಕ ಸಾ.ರಾ.ಮಹೇಶ್ ಅವರು ಶಾಸಕರ ನಿಧಿಯಿಂದ ₹10 ಲಕ್ಷ ಹಾಗೂ ವೈಯಕ್ತಿಕವಾಗಿ ₹2 ಲಕ್ಷ ದೇಣಿಗೆ ನೀಡಿದ್ದಾರೆ. ದಾನಿಗಳಿಂದ ಸುಮಾರು ₹35 ಲಕ್ಷ ಸಂಗ್ರಹಗೊಂಡಿದೆ. ಗ್ರಾಮದ 160 ಕುಟುಂಬಗಳು, ಅಕ್ಕಪಕ್ಕದ ಗ್ರಾಮಗಳ ಭಕ್ತರು ನೀಡಿದ ದೇಣಿಗೆ ₹40 ಲಕ್ಷ ಸಂಗ್ರಹಗೊಂಡಿದೆ. ಮದುವೆಯಾಗಿ ಬೇರೆ ಊರಿಗೆ ಹೋಗಿರುವ ಹೆಣ್ಣು ಮಕ್ಕಳು ಸಹ ದೇಣಿಗೆ ನೀಡಿದ್ದಾರೆ’ ಎಂದು ಹೇಳಿದರು.
‘ಬೈಲಾಪುರದಲ್ಲಿದ್ದ ದೇವರ ವಿಗ್ರಹ’
‘ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೈಲಾಪುರದ ದೇವಾಲಯದಲ್ಲಿದ್ದ ಬಸವೇಶ್ವರ ವಿಗ್ರಹವನ್ನು ಭಕ್ತರು ಪೂಜಿಸುತ್ತಿದ್ದರು. 76 ವರ್ಷಗಳ ಹಿಂದೆ ಚಿಕ್ಕವಡ್ಡರಗುಡಿಯ ಭಕ್ತರೊಬ್ಬರು ಈ ವಿಗ್ರಹವನ್ನು ಕರಿಕಂಬಳಿಯಲ್ಲಿ ಸುತ್ತಿಕೊಂಡು ತಂದು ಗ್ರಾಮದ ರಂಗಸ್ಥಳದ ಮುಂಭಾಗ ಇರುವ ಗುಡಿಯಲ್ಲಿ ಇಟ್ಟು ಪೂಜೆ ಸಲ್ಲಿಸಲು ಶುರು ಮಾಡಿದ್ದರು’ ಎಂದು ಗ್ರಾಮದ ಮುಖಂಡ ಧರ್ಮಪಾಲ್ ತಿಳಿಸಿದರು.
***
ಎಲ್ಲ ಜನಾಂಗದ ಜನರು ಹಾಗೂ ದಾನಿಗಳು ನೀಡಿದ ನೆರವಿನಿಂದ ಬಸವೇಶ್ವರ ದೇಗುಲ ಜೀರ್ಣೋದ್ಧಾರ ಗೊಂಡು ಲೋಕಾರ್ಪಣೆಗೆ ಸಿದ್ಧವಾಗಿದೆ.
-ಶಂಭು, ದೇವಾಲಯ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.