ADVERTISEMENT

ಧ್ರುವನಾರಾಯಣ ಹಠಾತ್ ನಿಧನ: ಕಾಂಗ್ರೆಸ್‌ಗೆ ಆಘಾತ

ರಾಜ್ಯ ರಾಜಕಾರಣಕ್ಕೆ ಮರಳುವ ಮನಸ್ಸಿತ್ತು, ನಂಜನಗೂಡು ಟಿಕೆಟ್ ಬಯಸಿದ್ದರು

ಎಂ.ಮಹೇಶ
Published 11 ಮಾರ್ಚ್ 2023, 11:35 IST
Last Updated 11 ಮಾರ್ಚ್ 2023, 11:35 IST
ಆರ್‌.ಧ್ರುವನಾರಾಯಣ
ಆರ್‌.ಧ್ರುವನಾರಾಯಣ   

ಮೈಸೂರು: ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅನುಭವ ಗಳಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅಕಾಲಿಕ ನಿಧನ ಈ ಭಾಗದಲ್ಲಿ ಕಾಂಗ್ರೆಸ್‌ಗೆ ಭಾರಿ ಆಘಾತ ನೀಡಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹೊಸ್ತಿಲಲ್ಲಿ ಈ ನಾಯಕನ ಅಗಲಿಕೆಯು ಕಾರ್ಯಕರ್ತರನ್ನು ದುಃಖದ ಕಡಲಿಗೆ ದೂಡಿದೆ.

ಧ್ರುವನಾರಾಯಣ ಅವಿಭಜಿತ ಮೈಸೂರು ಜಿಲ್ಲೆಯ ಪ್ರಮುಖ ರಾಜಕಾರಣಗಳಲ್ಲಿ ಒಬ್ಬರಾಗಿದ್ದರು. ಚಾಮರಾಜನಗರ ಜಿಲ್ಲೆಯವರಾದರೂ ಮೈಸೂರು ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಮನೆಯನ್ನೂ ಇಲ್ಲೇ (ವಿಜಯನಗರ 3ನೇ ಹಂತ) ಹೊಂದಿದ್ದರು. ಮೈಸೂರು ಕಾಂಗ್ರೆಸ್‌ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು; ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದರು.

ಹಳೆಯ ಮೈಸೂರು ಭಾಗದಲ್ಲಿನ ರಾಜಕಾರಣದ ಪಟ್ಟುಗಳನ್ನು ಬಲ್ಲವರಾಗಿದ್ದರು. ಇಲ್ಲಿ ಪಕ್ಷ ಸಂಘಟನೆಗೆ ಜೊತೆಗೆ ಅಭಿವೃದ್ಧಿಗೂ ಅಪಾರವಾದ ಕೊಡುಗೆಯನ್ನು ನೀಡಿದ್ದ ನಾಯಕ. ಸರಳತೆ, ಸಜ್ಜನಿಕೆ ಹಾಗೂ ಸಮಚಿತ್ತದ ಗುಣದಿಂದಾಗಿ ಎಲ್ಲ ಪಕ್ಷದವರೊಂದಿಗೂ ಉತ್ತಮ ಒಡನಾಟ ಹಾಗೂ ಸಂಪರ್ಕವನ್ನು ಹೊಂದಿದ್ದರು. ಇದರಿಂದಾಗಿಯೇ ಅಜಾತಶತ್ರು ಎನಿಸಿದ್ದರು.

ADVERTISEMENT

ಎಲ್ಲ ವರ್ಗದಿಂದಲೂ ಕಂಬನಿ:

ಬೇರೆ ಪಕ್ಷದವರನ್ನು ಟೀಕಿಸಿದರೂ ಅವು ಪ್ರಜಾಸತ್ತಾತ್ಮಕ ಹಾಗೂ ಸಂವಿಧಾನದ ಚೌಕಟ್ಟಿನಲ್ಲೇ ಇರುತ್ತಿದ್ದವು. ಹೀಗಾಗಿ, ಎಲ್ಲ ‍ಪಕ್ಷಗಳ ರಾಜಕಾರಣಿಗಳು ಸೇರಿದಂತೆ ಎಲ್ಲ ವರ್ಗದ ಜನರೂ ಅವರಿಗೆ ಕಂಬನಿ ಮಿಡಿಯುತ್ತಿದ್ದಾರೆ.

ಬಿ.ರಾಚಯ್ಯ, ವಿ.ಶ್ರೀನಿವಾಸ್ ಪ್ರಸಾದ್ ಬಳಿಕ ದಲಿತ ನಾಯಕರಾಗಿ ಹೊರಹೊಮ್ಮಿದ್ದ ಧ್ರುವ, ರಾಜಕಾರಣದಲ್ಲಿ ಮಾದರಿ ಎನಿಸುವ ಹಾದಿಯಲ್ಲಿ ಸಾಗಿದವರು. ಚಾಮರಾಜನಗರ ಸಂಸದರಾಗಿದ್ದಾಗ ಸಂಸದರ ನಿಧಿಯನ್ನು ಸದ್ಬಳಕೆ ಮಾಡಿಕೊಂಡವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಸಂಸದರಾಗಿದ್ದ ಅವಧಿಯಲ್ಲಿ ನಂಜನಗೂಡು ಹಾಗೂ ತಿ.ನರಸೀಪುರ ಭಾಗದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ಮೈಸೂರು–ನಂಜನಗೂಡು ಹೆದ್ದಾರಿ ನಿರ್ಮಾಣದಲ್ಲಿ ಅವರ ಕೊಡುಗೆ ಸಾಕಷ್ಟಿದೆ. ಇದನ್ನು ಜನರಿ ನೆನಯುತ್ತಿದ್ದಾರೆ.

ಹೋದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಅವರು, ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿದ್ದರು. ಇತ್ತೀಚೆಗೆ, ರಾಜ್ಯ ರಾಜಕಾರಣಕ್ಕೆ ಬರುವ ಮನಸ್ಸು ಮಾಡಿದ್ದ ಅವರು ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದರು. ಪಕ್ಷದ ಟಿಕೆಟ್‌ ಕೋರಿ ಅರ್ಜಿಯನ್ನೂ ಸಲ್ಲಿಸಿದ್ದರು. ಟಿಕೆಟ್‌ ಸಿಗುವ ವಿಶ್ವಾಸದಲ್ಲಿ ಪ್ರಚಾರದಲ್ಲೂ ತೊಡಗಿದ್ದರು. ಸಂಘಟನೆಯಲ್ಲಿ ಚತುರನಾಗಿದ್ದ ಹಾಗೂ ಗೆಲುವಿನ ಕುದುರೆಯನ್ನು ಹಠಾತ್‌ ಕಳೆದುಕೊಂಡ ನೋವು ಕಾಂಗ್ರೆಸ್‌ ಪಾಳಯದಲ್ಲಿ ಮನೆ ಮಾಡಿದೆ.

ಎಲ್ಲರೊಂದಿಗೂ ಉತ್ತಮ ಒಡನಾಟ:

ಅಧಿಕಾರದಲ್ಲಿದ್ದಾಗ ಆಗಲಿ, ಇಲ್ಲದಿದ್ದಾಗ ಆಗಲಿ ಕುಟುಂಬದವರು ರಾಜಕೀಯ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳದಂತೆ ಅವರು ನೋಡಿಕೊಂಡಿದ್ದರು. ರಾಜಕೀಯ ಒತ್ತಡಗಳು, ವೈಯಕ್ತಿಕ ನೋವುಗಳು ಏನೇ ಇದ್ದರೂ ಅದನ್ನು ಸಾರ್ವಜನಿಕವಾಗಿ ತೋರಿಸಿಕೊಂಡವರಲ್ಲ.

ಪಕ್ಷದ ನಾಯಕ, ಮೈಸೂರಿನವರೇ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೂ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒಡನಾಟದಲ್ಲೂ ಇದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವರಿಷ್ಠರೊಂದಿಗೂ ಉತ್ತಮ ಸಂಪರ್ಕವನ್ನು ಇಟ್ಟುಕೊಂಡಿದ್ದರು. ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ರಾಜ್ಯ ಪ್ರವೇಶಿಸಿದಾಗ ಕಾರ್ಯಕ್ರಮಕ್ಕೆ ಬೇಕಾದ ಸಿದ್ಧತೆಗಳ ಮೇಲ್ವಿಚಾರಣೆಯನ್ನು ಧ್ರುವ ಯಶಸ್ವಿಯಾಗಿ ನಿರ್ವಹಿಸಿದ್ದರು.

ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಮೈಸೂರು, ಚಾಮರಾಜನಗರ ಜಿಲ್ಲೆಗಳ ರಾಜಕೀಯದ ಮಿಡಿತವನ್ನು ಬಲ್ಲವರಾಗಿದ್ದರು. ಅವರ ಅಕಾಲಿಕ ನಿಧನವು, ಪಕ್ಷದ ಸಂಘಟನೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುತ್ತದೆ ರಾಜಕೀಯ ವಲಯ.

ದೊಡ್ಡ ಶಕ್ತಿಯಾಗಿದ್ದರು

ತಂದೆ ಸ್ಥಾನದಲ್ಲಿ ನಿಂತು ನನಗೆ ರಾಜಕೀಯವಾಗಿ ಮಾರ್ಗದರ್ಶನ ನೀಡುತ್ತಿದ್ದರು. ಅವರನ್ನು ಕಳೆದುಕೊಂಡು ನಾನು ಅನಾಥವಾಗಿದ್ದೇನೆ. ನನಗೆ ದೊಡ್ಡ ಶಕ್ತಿಯಾಗಿದ್ದರು.

–ಅನಿಲ್ ಚಿಕ್ಕಮಾದು, ಶಾಸಕ, ಎಚ್‌.ಡಿ.ಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.