ADVERTISEMENT

ಹುಣಸೂರು ನಗರದಲ್ಲಿ ಡಿಜಿಟಲ್ ಗ್ರಂಥಾಲಯ ಆರಂಭ: ತಂತ್ರಜ್ಞಾನ ಪುಸ್ತಕಗಳದ್ದೇ ಕೊರತೆ

ಎಚ್.ಎಸ್.ಸಚ್ಚಿತ್
Published 12 ಡಿಸೆಂಬರ್ 2021, 17:59 IST
Last Updated 12 ಡಿಸೆಂಬರ್ 2021, 17:59 IST
ಹುಣಸೂರು ನಗರದ ಕೇಂದ್ರ ಗ್ರಂಥಾಲಯದಲ್ಲಿ ಅಧ್ಯಯನದಲ್ಲಿ ನಿರತರಾಗಿರುವ ಓದುಗರು
ಹುಣಸೂರು ನಗರದ ಕೇಂದ್ರ ಗ್ರಂಥಾಲಯದಲ್ಲಿ ಅಧ್ಯಯನದಲ್ಲಿ ನಿರತರಾಗಿರುವ ಓದುಗರು   

ಹುಣಸೂರು: ನಗರದ ಕೇಂದ್ರ ಗ್ರಂಥಾಲಯವು ಡಿಜಿಟಲ್ ಗ್ರಂಥಾಲಯ ವಾಗಿ ಪರಿವರ್ತನೆಯಾಗಿದ್ದರೂ ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳ ಕೊರತೆ ಎದ್ದು ಕಾಣುತ್ತಿದೆ.

ಅತ್ಯಾಧುನಿಕ ಯುಗದಲ್ಲಿ ಯುವಜನರು ತಂತ್ರಜ್ಞಾನದತ್ತ ಒಲವು ತೋರುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗ್ರಂಥಾಲಯಗಳೇ ಆಸರೆಯಾಗಿವೆ. ಆದರೆ, ಹುಣಸೂರು ಗ್ರಂಥಾಲಯದಲ್ಲಿ ಕಥೆ, ಕಾದಂಬರಿ, ಐತಿಹಾಸಿಕ ಪುಸ್ತಕಗಳು ಇವೆ. ತಂತ್ರಜ್ಞಾನ ವಿಷಯಕ್ಕೆ ಸಂಬಂಧಪಟ್ಟ ಪುಸ್ತಕಗಳು ಬೇಕೆಂದರೆ ಹೊರಗೆ ಖರೀದಿಸಿಯೇ ಓದಬೇಕಾಗಿದೆ.

ಹುಣಸೂರಿನಲ್ಲಿ 55 ಸಾವಿರ ಜನಸಂಖ್ಯೆ ಇದ್ದು, ನಗರದಲ್ಲಿ ಸುಸಜ್ಜಿತ ಕೇಂದ್ರ ಗ್ರಂಥಾಲಯ ಇದೆ. ಇಲ್ಲಿ 45 ಸಾವಿರ ಪುಸ್ತಕಗಳಿವೆ. 80ರ ದಶಕದಲ್ಲಿ ಅಸ್ತಿತ್ವಕ್ಕೆ ಬಂದ ಕೇಂದ್ರ ಗ್ರಂಥಾಲಯದಲ್ಲಿ ಈವರೆಗೆ 3,359 ಓದುಗರು ಕಾಯಂ ಸದಸ್ಯತ್ವ ಹೊಂದಿದ್ದಾರೆ. ಕೇಂದ್ರದಲ್ಲಿ ಪುಟ್ಟ ಮಕ್ಕಳಿಂದ ಸ್ಪರ್ಧಾತ್ಮಕ ಪರೀಕ್ಷೆ ತೆಗೆದು ಕೊಳ್ಳುವ ವಿದ್ಯಾರ್ಥಿಗಳಿಗೂ ಅನುಕೂಲ ಕಲ್ಪಿಸುವ ಪುಸ್ತಕ ಭಂಡಾರವಿದೆ.

ADVERTISEMENT

ಕೇಂದ್ರದಲ್ಲಿ ಕಳೆದ ಎರಡು ತಿಂಗಳಿಂದ ಡಿಜಿಟಲ್ ಗ್ರಂಥಾಲಯ ಆರಂಭವಾಗಿದ್ದು, ಎರಡು ಕಂಪ್ಯೂಟರ್ ಮತ್ತು 4 ಟ್ಯಾಬ್ ಹೊಂದಿವೆ. ನಿತ್ಯ 20 ರಿಂದ 30 ಓದುಗರು ಗ್ರಂಥಾಲಯದ ಲಾಭ ಪಡೆದಿದ್ದಾರೆ. 100 ಕಾಯಂ ಸದಸ್ಯತ್ವ ಹೊಂದಿರುವ ಓದುಗರು ಪುಸ್ತಕ ಪಡೆದು ಮನೆಗೆ ತೆಗೆದುಕೊಂಡು ಹೋಗಿ ಓದುತ್ತಿದ್ದಾರೆ ಎನ್ನುತ್ತಾರೆ ಗ್ರಂಥಾಲಯದ ಪ್ರಭಾರ ಅಧಿಕಾರಿ ರೇವತಿ.

ಸೆಸ್: ಹುಣಸೂರು ನಗರಸಭೆ ಕಳೆದ ಮೂರು ವರ್ಷಗಳಿಂದ ಗ್ರಂಥಾಲಯ ಸೆಸ್ ಪಾವತಿಸುತ್ತಿದ್ದು, ಈ ಹಿಂದೆ ಪುರಸಭೆ ಆಡಳಿತದಲ್ಲಿ ಸೆಸ್ ಹಣದಲ್ಲಿ 25 ಸಾವಿರ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆ ನೀಡಲಾಗಿತ್ತು.

ನಗರಸಭೆ ಪೌರಾಯುಕ್ತ ರಮೇಶ್ ಮಾತನಾಡಿ, ‘ಹುಣಸೂರು ನಗರಸಭೆ ಯಲ್ಲಿ ಸಂಗ್ರಹವಾದ ಕಂದಾಯದಲ್ಲಿ ಶೇ 6ರಷ್ಟು ಗ್ರಂಥಾಲಯದ ಸೆಸ್ ಪಾವತಿಸುತ್ತಿದ್ದು, ಯಾವುದೇ ಬಾಕಿ ಉಳಿಸಿಕೊಂಡಿಲ್ಲ’ ಎಂದು ಹೇಳಿದರು.

***

ಕೇಂದ್ರ ಗ್ರಂಥಾಲಯದಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳ ಕೊರತೆ ಇದ್ದು, ಈ ಕೊರತೆ ನೀಗಿಸುವ ದಿಕ್ಕಿನಲ್ಲಿ ಕ್ರಮವಹಿಸಬೇಕು.
–ಆಕಾಶ್, ಬಿಇ ವಿದ್ಯಾರ್ಥಿ

***

ಸ್ಪರ್ಧಾತ್ಮಕ ಪರೀಕ್ಷೆಗೆ ಬರೆಯಲು ಎರಡು ವರ್ಷದಿಂದ ಗ್ರಂಥಾಲಯ ಬಳಸಿಕೊಳ್ಳುತ್ತಿದ್ದು, ಪುಸ್ತಕ ಉತ್ತಮವಾಗಿದ್ದು, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು.
–ರಮ್ಯಾ, ಬಿಕಾಂ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.