ಮೈಸೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಗಸ್ಟ್ ತಿಂಗಳು ಪೂರ್ತಿ ಶೇ 50ರ ದರದಲ್ಲಿ ಪುಸ್ತಕಗಳ ಮಾರಾಟ ಮಾಡುವುದಾಗಿ ಘೋಷಿಸಿರುವ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಜಿಲ್ಲೆಗಳಿಗೆ ಪುಸ್ತಕಗಳನ್ನೇ ಪೂರೈಸಿಲ್ಲ!
ಪ್ರಾಧಿಕಾರವು ವೆಬ್‌ಸೈಟ್ ನಲ್ಲೂ (http://kannada pustakapradhikara.com/books/) ಆನ್‌ಲೈನ್ ಖರೀದಿಗೆ ಅವಕಾಶ ನೀಡಿದೆ. ಆದರೆ, ಜಿಲ್ಲೆಯ ಮಳಿಗೆಗಳಿಗೆ ಮಾತ್ರ ಪುಸ್ತಕಗಳನ್ನು ಪೂರೈಕೆ ಮಾಡದೇ ಪುಸ್ತಕ ಪ್ರೇಮಿಗಳಿಗೆ ನಿರಾಸೆಯುಂಟು ಮಾಡಿದೆ.
ಇಲ್ಲಿನ ಕರ್ನಾಟಕ ಕಲಾಮಂದಿರ ದಲ್ಲಿರುವ ಪುಸ್ತಕ ಮಾರಾಟ ಮಳಿಗೆಗೆ ಸೋಮವಾರ ‘ಪ್ರಜಾವಾಣಿ’ ಭೇಟಿ ನೀಡಿದಾಗ ಪುಸ್ತಕಗಳ ಪೂರೈಕೆಯಾಗದೇ ಇರುವುದು ದೃಢಪಟ್ಟಿತು. ಪುಸ್ತಕಗಳ ಹಲವು ಬಂಡಲ್‌ಗಳನ್ನು ಹಾಗೇ ಇಡಲಾಗಿತ್ತು.
ಜನಸಾಮಾನ್ಯರಿಗೆ ಸುಲಭ ಬೆಲೆಯಲ್ಲಿ ಪುಸ್ತಕಗಳನ್ನು ತಲು
ಪಿಸ ಬೇಕೆಂಬ ಉದ್ದೇಶವುಳ್ಳ ಪ್ರಾಧಿಕಾರವು ಒಂದು ವರ್ಷದಿಂದ ಹೊಸ ಪ್ರಕಟಣೆಯ ಪುಸ್ತಕಗಳನ್ನು ಜಿಲ್ಲೆಗಳಿಗೆ ಪೂರೈಸಿಲ್ಲ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ತನ್ನ ಪ್ರಕಟಣೆಗಳನ್ನು ರಿಯಾಯಿತಿ ದರದಲ್ಲಿ ಮಾರುವ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಕಟಣೆ ಕಳುಹಿಸಿದೆ. ಆದರೆ, ಓದುಗರಿಗೆ ಮಾತ್ರ ಪುಸ್ತಕಗಳು ಲಭ್ಯವಿಲ್ಲ.
‘ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಪ್ರಕಾರದ ಕೃತಿಗಳೂ ಇವೆ. ಆದರೆ ಒಂದು ವರ್ಷದಿಂದ ಹೊಸ ಪ್ರಕಟಣೆಯ ಪುಸ್ತಕಗಳು ಪೂರೈಕೆಯಾಗಿಲ್ಲ. ನವೆಂಬರ್ ಹಾಗೂ ಆಗಸ್ಟ್ ವೇಳೆಯಲ್ಲಿ ರಿಯಾಯಿತಿ ಮಾರಾಟ ಮಾಡಲಾಗುತ್ತದೆ. ಪೂರೈಕೆ ಇಲ್ಲದಿರುವುದರಿಂದ ಓದುಗರಿಗೆ ಉತ್ತರಿ
ಸುವುದು ಹೇಗೆಂದು ತಿಳಿಯುತ್ತಿಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.
‘ನಮ್ಮಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರಹ ಮತ್ತು ಭಾಷಣಗಳ 16 ಸಂಪುಟ ಹಾಗೂ ಡಾ. ಎಂ.ಎಂ. ಕಲಬುರ್ಗಿ ಪ್ರಧಾನ ಸಂಪಾದಕತ್ವದ ವಚನ ಮಹಾಸಂಪುಟಕ್ಕೆ ಹೆಚ್ಚಿನ ಬೇಡಿಕೆಯಿದೆ’ ಎಂದು ತಿಳಿಸಿದರು.
‘ಭಾಷಾ ಭಾರತಿ ಪ್ರಕಟಣೆಯ ಪುಸ್ತಕಗಳು ನಮಗೆ ಬಂದಿಲ್ಲ. 2019 ರವರೆಗಿನ ಪ್ರಾಧಿಕಾರದ ಪ್ರಕಟಣೆಯ ಪುಸ್ತಕಗಳಿವೆ. ಅವುಗಳಿಗೆ ಶೇ 50 ರಿಯಾಯಿತಿ ನೀಡುತ್ತಿದ್ದೇವೆ. ಬೇರೆ ಪ್ರಕಟಣೆಗಳ ಕೃತಿಗಳೂ ಇದ್ದು, ಅವುಗಳಿಗೆ ಶೇ 10ರಿಂದ 15 ರಷ್ಟು ರಿಯಾಯಿತಿ ಕೊಡುತ್ತಿದ್ದೇವೆ’ ಎಂದು ರಾಮಕೃಷ್ಣನಗರದ ಕನ್ನಡ ಪುಸ್ತಕ ಪ್ರಾಧಿಕಾರದ ಮಳಿಗೆ ವ್ಯವಸ್ಥಾಪಕ ನಿಂಗರಾಜು ಚಿತ್ತಣ್ಣನವರ್ ಹೇಳುತ್ತಾರೆ.
‘ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಆಗಸ್ಟ್ ರಿಯಾಯಿತಿ ಪ್ರಕಟಣೆ ನೋಡಿಕೊಂಡು ಪುಸ್ತಕ ಖರೀದಿಸಲು ಹೋದೆ. ಆದರೆ ಇಲಾಖೆಯ ಮಳಿಗೆಯ ಬಾಗಿಲನ್ನೇ ತೆರೆದಿರಲಿಲ್ಲ’ ಎಂದು ಕುವೆಂಪು ನಗರದ ಸ್ವರೂಪ್ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.