ಮೈಸೂರು: ‘ಕೇಂದ್ರ ಬಜೆಟ್ – 2020’ ಕುರಿತು ಮಂಗಳವಾರ ಇಲ್ಲಿ ನಡೆದ ಸಂವಾದ ಹಲವು ಹೊಸ ವಿಚಾರಗಳನ್ನು ತೆರೆದಿಟ್ಟಿತು. ಇದು ಅರ್ಥಪೂರ್ಣ ಚರ್ಚೆಗೂ ನಾಂದಿ ಹಾಡಿತು.
‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಂಸಿಸಿಐ) ಹಾಗೂ ಪೂಜಾ ಭಾಗವತ್ ಮೆಮೋರಿಯಲ್ ಮಹಾಜನ ಎಜುಕೇಷನ್ ಸೆಂಟರ್ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಜೆಟ್‌ನಲ್ಲಿ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಉತ್ತಮ ಅಂಶಗಳಿವೆ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟರೆ, ‘ಜಿಎಸ್‌ಟಿ’ ಕುರಿತ ಗೊಂದಲಗಳನ್ನು ಬಜೆಟ್‌ನಲ್ಲಿ ಬಗೆಹರಿಸಿ ಮತ್ತಷ್ಟು ಸುಧಾರಿಸಲಾಗಿದೆ ಎಂದು ಕೆಲವರು ತಿಳಿಸಿದರು. ಆದರೆ, ದೇಶದ ಸಮಗ್ರ ಅರ್ಥ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಅಂಶಗಳು ಇಲ್ಲ ಎಂದು ಆರ್ಥಿಕ ತಜ್ಞರು ವ್ಯಾಖ್ಯಾನಿಸಿದರು.
‘ಯಾವುದೇ ಬಜೆಟ್ ನೂರಕ್ಕೆ ನೂರರಷ್ಟು ಎಲ್ಲ ವಲಯದವರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ’ ಎನ್ನುತ್ತಲೇ ತಮ್ಮ ಮಾತನ್ನು ಆರಂಭಿಸಿದ ಎಫ್‌ಕೆಸಿಸಿಐನ ನಿಕಟಪೂರ್ವ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ, ಬಜೆಟ್‌ನ ಆಳ ಅಗಲಗಳನ್ನು ತೆರೆದಿಟ್ಟರು.
ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಭಾರತದ ಆರ್ಥಿಕತೆಯನ್ನು ₹ 3 ಟ್ರಿಲಿಯನ್ ಡಾಲರ್‌ಗೆ ಹೆಚ್ಚಿಸುವ ಮಹೋನ್ನತ ಗುರಿಯನ್ನು ಬಜೆಟ್ ಹೊಂದಿರುವುದು, ಇದರ ದೂರದರ್ಶಿತ್ವಕ್ಕೆ ಸಾಕ್ಷಿಯಾಗಿದೆ. ಅನೇಕ ಒಳ್ಳೆಯ ಯೋಜನೆಗಳನ್ನು ಪ್ರಕಟಿಸಲಾಗಿದೆ. ಇವು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಗೆ ಬರುತ್ತದೆ ಎಂಬುದರ ಮೇಲೆ ಬಜೆಟ್‌ನ ಯಶಸ್ಸು ನಿಂತಿದೆ ಎಂದು ವಿಶ್ಲೇಷಿಸಿದರು.
ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ತೆರಿಗೆ ವ್ಯವಸ್ಥೆಗೆ ಆಧುನೀಕರಣದ ಸ್ಪರ್ಶ ನೀಡಲಾಗಿದೆ ಎಂದರು.
ಎಫ್‌ಕೆಸಿಸಿಐನ ಮಹಿಳಾ ಉದ್ಯಮಿಗಳ ಸಮಿತಿ ಸಹ ಅಧ್ಯಕ್ಷೆ ಅನ್ನಪೂರ್ಣ ಶ್ರೀಕಾಂತ್, ‘ಜಿಎಸ್‌ಟಿ’ ದೃಷ್ಟಿಕೋನದಿಂದ ಬಜೆಟ್‌ನಲ್ಲಿರುವ ಪ್ರಸ್ತಾವಗಳನ್ನು ಸ್ವಾಗತಿಸಿದರು.
ಖರೀದಿ ಪ್ರಕ್ರಿಯೆಯಲ್ಲಿ ‘ಯುಪಿಐ’ ಮೂಲಕ ಪಾವತಿಸಿ, ‘ಇನ್‌ವೈಸ್’ ತೆಗೆದುಕೊಂಡಲ್ಲಿ ನಗದು ಪಾಯಿಂಟ್ಸ್ ನೀಡುವ ನೂತನ ಯೋಜನೆ, ‘ಸುಗಮ್’, ‘ಸಹಜ್’ ಎಂಬ ಯೋಜನೆಗಳು ನಿರೀಕ್ಷೆ ಮೂಡಿಸಿವೆ. ‘ಜಿಎಸ್‌ಟಿ’ಯಲ್ಲಿನ ಗೊಂದಲಗಳನ್ನು ಪರಿಹರಿಸಲು ಬಜೆಟ್‌ನಲ್ಲಿ ಗಂಭೀರ ಯತ್ನ ನಡೆದಿದೆ ಎಂದು ಶ್ಲಾಘಿಸಿದರು.
‘ಪ್ರಜಾವಾಣಿ’ ಮತ್ತು ‘ಡೆಕನ್ ಹೆರಾಲ್ಡ್’ನ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಆಲಿವರ್ ಲೆಸ್ಲಿ ಮಾತನಾಡಿ, ‘ಪ್ರತಿ ಸಂಸ್ಥೆಯಲ್ಲೂ ಬಜೆಟ್ ಇರುತ್ತದೆ. ಮನೆಗಳಲ್ಲಿ ಮತ್ತು ವಿದ್ಯಾರ್ಥಿಗಳು ವೈಯಕ್ತಿಕವಾಗಿ ತಮ್ಮದೇ ಬಜೆಟ್ ಹೊಂದಬೇಕು. ಆಗ ಹಣಕಾಸಿನ ನಿರ್ವಹಣೆಯಲ್ಲಿ ಪಕ್ವತೆ ಮೂಡುತ್ತದೆ’ ಎಂದರು.
ಐಸಿಎಸ್‌ಐನ ಮುಖ್ಯಸ್ಥೆ ಪಾರ್ವತಿ, ಕಾಲೇಜಿನ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಎಚ್.ಎನ್.ಸತೀಶ್, ವಿಜಯಲಕ್ಷ್ಮಿ ಭಾಗವತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.