ADVERTISEMENT

Diwali 2024: ದೀಪ ಬೆಳಗಲಿ, ಪಟಾಕಿ ದೂರವಿರಲಿ..

ಉಮಾಶಂಕರ ಕಾರ್ಯ
Published 28 ಅಕ್ಟೋಬರ್ 2024, 6:35 IST
Last Updated 28 ಅಕ್ಟೋಬರ್ 2024, 6:35 IST
ಪಟಾಕಿಯಿಂದ ಬೆಂಕಿ ಬಿದ್ದಲ್ಲಿ ತುರ್ತು ವಾಹನಗಳು, ಬುಲೆಟ್ ಅಗ್ನಿ ಸಿದ್ಧ
ಪಟಾಕಿಯಿಂದ ಬೆಂಕಿ ಬಿದ್ದಲ್ಲಿ ತುರ್ತು ವಾಹನಗಳು, ಬುಲೆಟ್ ಅಗ್ನಿ ಸಿದ್ಧ   

ಮೈಸೂರು: ‘ದೀಪಾವಳಿ ಅಂದ್ರೆ ಬೆಳಕಿನ ಹಬ್ಬ, ಹಾಗಂತ ಪಟಾಕಿಯನ್ನೇ ಸಿಡಿಸಬೇಕು ಅಂತೇನಿಲ್ಲ. ಮಕ್ಕಳಿಗೆ ಬಣ್ಣ ಕೊಟ್ಟು ಆಟವಾಡಲು ಹೇಳ್ತೀನಿ, ಮಣ್ಣಿನ ದೀಪ ಹಚ್ಚಿಸಲು ಹೇಳಿದ್ದೀನಿ. ಚಿತ್ರ ಬಿಡಿಸೋದನ್ನ ಕಲಿಸಿದ್ದೀನಿ. ಅವರಂತೂ ಈಗ ಹಟ ಮಾಡೋದಿಲ್ಲ...’ ಹೀಗೆಂದವರು ಇಲ್ಲಿನ ನಜರ್‌ಬಾದ್ ನಿವಾಸಿ ಚಂದಾ.

ದೀಪಾವಳಿ ಬಂತೆಂದರೆ, ಎಲ್ಲೆಲ್ಲೂ ಸಡಗರ ಸಂಭ್ರಮ, ಬೇರೆ ಹಬ್ಬಗಳಂತೆ ಈ ಹಬ್ಬದಲ್ಲಿ ಬಟ್ಟೆ, ಊಟದಲ್ಲಿ ಸಂಭ್ರಮವಿದ್ದರೂ ದೀಪ ಹಚ್ಚುವ ನೆಪದಲ್ಲಿ ಪಟಾಕಿ ಸಿಡಿಸುವುದು ನಡೆದು ಬಂದ ಸಂಪ್ರದಾಯ. ಆದರೆ, ಅದರಿಂದ ಪರಿಸರಕ್ಕೆ ಆಗುವ ತೊಂದರೆಗಳು, ದೇಹಕ್ಕೆ ಆಗುವ ಊನಗಳಿಂದ ವಯಸ್ಕರಿಗಿಂತ ಮಕ್ಕಳು ಜೀವನವಿಡೀ ಅನುಭವಿಸಬೇಕಾಗುತ್ತದೆ.

‘ಪ್ರಜಾವಾಣಿ’ ಈ ಕುರಿತು ಮಾತನಾಡಿಸಿದಾಗ ಎಲ್ಲರೂ ಪಟಾಕಿಯಿಂದಾಗುವ ಅನಾಹುತಗಳ ಅರಿವಿರುವುದು ಕಂಡುಬಂತು.

ADVERTISEMENT

‘ಮಕ್ಕಳು ತುಂಬಾ ಹಟ ಮಾಡಿದ್ರೆ ನಾನು ಪಟಾಕಿಯಿಂದ ಆದ ಅನಾಹುತದ ವಿಡಿಯೊ ತೋರಿಸಿ ಗಮನ ಬೇರೆಡೆ ಸೆಳೆಯುವಂತೆ ಮಾಡುವೆ. ಪಟಾಕಿಗೆ ಹಣ ಹಾಳು ಮಾಡೋದಕ್ಕಿಂತ ತಿಂಡಿ ತಿನಿಸು ತಿಂದು ಸಂತೋಷ ಪಡಲಿ’ ಎಂದು ಚಂದಾ ಹೇಳಿದರು.

ಪಟಾಕಿಯಿಂದ ಆಗುವ ಅನಾಹುತಗಳ ಬಗ್ಗೆ ಅರಿವಿಲ್ಲದೆ ಇರುವವರಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. 

839 ಸುಟ್ಟಗಾಯ ಪ್ರಕರಣ: ಕಳೆದ ಬಾರಿ ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೂ 839 ಸುಟ್ಟಗಾಯ ಪ್ರಕರಣಗಳು ದಾಖಲಾಗಿವೆ. ಇವರಲ್ಲಿ ಒಬ್ಬ ಬಾಲಕ ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದಾನೆ.

‘ಕೆಲವರಲ್ಲಿ ಹಬ್ಬ ಎಂದರೆ, ಪಟಾಕಿ ಎಂದೇ ತಪ್ಪು ತಿಳಿದುಕೊಂಡಿದ್ದಾರೆ. ಆದರೆ, ಪಟಾಕಿ ಇಲ್ಲದೇ ಮಣ್ಣಿನ ದೀಪ ಹಚ್ಚಿಯೂ ಹಬ್ಬ ಆಚರಿಸಬಹುದು. ಪಟಾಕಿ ಹಚ್ಚಲೇಬೇಕು ಎಂಬ ಆಸೆ ಇದ್ದಲ್ಲಿ ನೀವು ಸುರ್ ಸುರ್ ಬತ್ತಿ ಹಚ್ಚಿ. ಶಬ್ದ ಮಾಡುವ ಪಟಾಕಿ ಬೇಡವೇ ಬೇಡ. ಸುರ್ ಸುರ್ ಬತ್ತಿ ಹಚ್ಚುವ ಸಂದರ್ಭದಲ್ಲೂ ಮಕ್ಕಳ ಜೊತೆ ಪೋಷಕರು ಕಡ್ಡಾಯವಾಗಿ ಇರಲೇಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಹೇಳುತ್ತಾರೆ.

ಕೆಲವರಂತು ಶ್ರೀಮಂತಿಕೆ ಪ್ರದರ್ಶಿಸಲೆಂದೇ ಲಕ್ಷಗಟ್ಟಲೆ ಹಣವನ್ನು ಪಟಾಕಿಗಾಗಿ ಖರ್ಚು ಮಾಡುತ್ತಾರೆ. ಸಿಡಿಸುವ ಸಂದರ್ಭ ನಿರ್ಲಕ್ಷ್ಯ ವಹಿಸಿದಲ್ಲಿ ಅಕ್ಕಪಕ್ಕ ಇರುವ ಮಕ್ಕಳ ಭವಿಷ್ಯವನ್ನೇ ಕತ್ತಲಲ್ಲಿ ದೂಡಿದಂತಾಗುತ್ತದೆ. ಪ್ರಮುಖವಾಗಿ ಗಂಧಕಕ್ಕೆ ಬೆಂಕಿ ಇಟ್ಟಾಗ ಸಿಡಿದು ನೇರ ಕಣ್ಣಿಗೆ ಬಡಿಯುತ್ತದೆ. ಇಲ್ಲವೇ ಚರ್ಮಕ್ಕೆ ತಗುಲಿ ಬಣ್ಣವೇ ಬದಲಾಗುವ ಅಪಾಯ ಉಂಟಾಗುತ್ತದೆ.

80 ಡೆಸಿಬಲ್‌ನಿಂದ 125 ಡೆಸಿಬಲ್‌‌‌ವರೆಗಿನ ಶಬ್ದ ಕೇಳಿಸಿಕೊಳ್ಳಬಹುದು. ಅದಕ್ಕಿಂತ ಹೆಚ್ಚಿನ ಶಬ್ದ ಮಾಡಿದಲ್ಲಿ ಅದು ಆರೋಗ್ಯಕ್ಕೆ ಹಾನಿ. ಪಟಾಕಿ ಶಬ್ದದಿಂದ ಅಧಿಕ ರಕ್ತದ ಒತ್ತಡ, ಹೃದಯ ಸಂಬಂಧಿ ಕಾಯಿಲೆ, ಮಾನಸಿಕ ರೋಗಗಳು, ಗರ್ಭಿಣಿಯರು ಇರುವ ಮನೆಗಳ ಸುತ್ತಮುತ್ತ ಪಟಾಕಿ ಹಚ್ಚಲೇಬಾರದು ಎನ್ನುವುದು ಅಧಿಕಾರಿಗಳ ಮನವಿಯಾಗಿದೆ.

ಲಕ್ಷ್ಮಿ ಪಟಾಕಿ, ರಾಕೆಟ್ ಬಿಡುವುದು ಅಪಾಯಕಾರಿ. ರಾಕೆಟ್ ಹಚ್ಚಿದ ನಂತರ ಅದು ಮೇಲೆ ಹೋಗಿ ಸಿಡಿದು ಬೇರೆ ಮನೆಯ ಮೇಲೆ ಬಿದ್ದಾಗ ಅನಾಹುತ ಸಂಭವಿಸುತ್ತದೆ. ಇವುಗಳನ್ನು ಸಿಡಿಸುವವರು ಮೈದಾನ ಪ್ರದೇಶಗಳಿಗೆ ಹೋಗಿ ಸಿಡಿಸಬಹುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಗಾಯಗೊಂಡವರಿಗೆ ಹಾಸಿಗೆ ಮೀಸಲು: ಮುಂಜಾಗ್ರತಾ ಕ್ರಮವಾಗಿ ಮೈಸೂರು ನಗರ, ಜಿಲ್ಲೆಯ ನಂಜನಗೂಡು, ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ತಿ.ನರಸೀಪುರ ತಾಲ್ಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿ 5 ಹಾಸಿಗೆಗಳನ್ನು ಹಬ್ಬದ ದಿನ ಕಾಯ್ದಿರಿಸಲು ತೀರ್ಮಾನಿಸಲಾಗಿದೆ. ಇದಲ್ಲದೆ, ಹೋಬಳಿ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 2 ಹಾಸಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ.

ತಜ್ಞ ವೈದ್ಯರ ಪಡೆ: ದೀಪಾವಳಿ ಹಬ್ಬದ ಎರಡು ದಿನಗಳನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ತೀವ್ರ ನಿಗಾ ವಹಿಸಲು ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಜ್ಞ ವೈದ್ಯರ ಪಡೆ ರಚಿಸಲಿದೆ. ಈ ಪಡೆಯಲ್ಲಿ ಮೈಸೂರು ಮೆಡಿಕಲ್ ಕಾಲೇಜಿನ ಒಬ್ಬರು ವೈದ್ಯರು, ಒಬ್ಬರು ನೇತ್ರ ತಜ್ಞರು, ಚರ್ಮ ರೋಗ ತಜ್ಞರು, ಒಬ್ಬರು ನರ್ಸ್ ಇರಲಿದ್ದು, ಎಲ್ಲಾ ಕಡೆ ಸಂಚರಿಸಲಿದೆ. ಇದಲ್ಲದೆ, ಕೆ.ಆರ್.ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗಕ್ಕೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಲು ನಿರ್ಧರಿಸಲಾಗಿದೆ.

ಮಂಗಳವಾರದಿಂದ (ಅ.29) ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಗ್ರಾಮೀಣ ಆರೋಗ್ಯ ನೈರ್ಮಲ್ಯ ಸಮಿತಿಗಳಿಂದ ಪಟಾಕಿಯಿಂದಾಗುವ ಅನಾಹುತಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಕಳೆದ ವರ್ಷ ಗಾಯಗೊಂಡ ಗಾಯಾಳುಗಳನ್ನು ಸಂಪರ್ಕಿಸಿ ಅವರು ಎದುರಿಸಿದ ಸಮಸ್ಯೆಗಳನ್ನು ಜನರ ಮುಂದಿಟ್ಟು ಜಾಗೃತಿ ಮೂಡಿಸಲು ಜಿಲ್ಲಾ ಆರೋಗ್ಯ ಇಲಾಖೆ ನಿರ್ಧರಿಸಿದೆ.

’ ಮಕ್ಕಳಿಗೆ ನಾವು ಈಗ ಹಟ ಮಾಡುವುದನ್ನು ಕಲಿಸಿದ್ರೆ ಮುಂದೆ ಅವರ ಭವಿಷ್ಯಕ್ಕೆ ನಾವೇ ಕಲ್ಲು ಹಾಕಿದಂತೆ. ಒಂದು ಸಣ್ಣ ಪಟಾಕಿಯಿಂದ ಇಡೀ ಜೀವನವೇ ನಾಶವಾಗುತ್ತೆ. ಈಗಾಗಲೇ ವಾಹನಗಳಿಂದ ವಾಯುಮಾಲಿನ್ಯ ಹೆಚ್ಚಿದೆ. ಪಟಾಕಿ ಸಿಡಿಸುವುದೇ ಇಲ್ಲ.
ಚಂದಾ ಮೈಸೂರು
ನನ್ನ ಮಕ್ಕಳಿಗಂತು ಪಟಾಕಿ ತೆಗೆದುಕೊಡುವುದಿಲ್ಲ. ಹಾವಿನ ಗುಳಿಗೆ ಸುರ್ ಸುರ್ ಬತ್ತಿ ಕೊಡಿಸುತ್ತೇನೆ. ಪಟಾಕಿ ತಯಾರಿಸುವಾಗ ರಂಜಕ ಮಣ್ಣು ಕಲ್ಲು ಎಲ್ಲವನ್ನೂ ಪುಡಿ ಮಾಡಿ ಹಾಕಿರ್ತಾರೆ ಅದು ಮಕ್ಕಳಿಗೆ ಗೊತ್ತಾಗೋದಿಲ್ಲ. ಅದಕ್ಕಾಗಿ ನನ್ನ ಮಕ್ಕಳಿಗೆ ಪಟಾಕಿ ಕೊಡಿಸದೇ ಇರಲು ನಿರ್ಧರಿಸಿರುವೆ.
ಗುಜ್ಜನಾಯಕ ಜಯಪುರ
ಹಬ್ಬ ಸರಳವಾಗಿಬೇಕು. ಶಬ್ದ ಮಾಡುವ ಪಟಾಕಿಯನ್ನು ನನ್ನ ಮೊಮ್ಮಕ್ಕಳಿಗೆ ತೆಗೆದುಕೊಡುವುದಿಲ್ಲ. ಅನಾಹುತಗಳ ಬಗ್ಗೆ ತಿಳಿದು ಪಟಾಕಿ ಸಿಡಿಸುವುದನ್ನೇ ನಿಲ್ಲಿಸಿರುವೆ.
ಮೂರ್ತಿ ವೀರನಗೆರೆ ಮೈಸೂರು
ಮಕ್ಕಳು ಎಷ್ಟು ಹೇಳಿದರೂ ಕೇಳುವುದಿಲ್ಲ. ಪಟಾಕಿ ಹೊಗೆ ಕರಳು ಸೇರುವುದು ಅಪಾಯ. ನಾವು ಮಕ್ಕಳಾಗಿದ್ದಾಗ ಹಟ ಮಾಡ್ತಾ ಇದ್ದೆವು. ಆದರೆ ಕಣ್ಣಿಗೆ ಬಿದ್ದರೆ ಅಪಾಯ ಗ್ಯಾರಂಟಿ. ಏನೋ ಅವರು ಕೇಳಿದ್ರೆ ಸುರ್ ಸುರ್ ಬತ್ತಿ ವಿಷ್ಣು ಚಕ್ರ ತೆಗೆದುಕೊಡುವೆ.
ಕೆಂಡಗಣ್ಣಸ್ವಾಮಿ ಧನಗಳ್ಳಿ ಮೈಸೂರು
ನಾನು ಪಟಾಕಿ ಹಾರಿಸಿದ್ರೆ ಹೊರಗಡೆ ಹೋಗುವುದೇ ಇಲ್ಲ. ಅದು ಡೇಂಜರ್. ತಾತ ಹೇಳಿದಂಗೆ ಕಣ್ಣಿಗೆ ತೊಂದರೆ ಆಗುತ್ತೆ. ಅದಕ್ಕೆ ಪಟಾಕಿ ಬೇಡ. ಸುರ್ ಸುರ್ ಬತ್ತಿ ಸಾಕು
ಕೆಂಡಗಣ್ಣಪ್ಪ 8ನೇ ತರಗತಿ ವಿದ್ಯಾರ್ಥಿ ಧನಗಳ್ಳಿ

ಧಾರ್ಮಿಕ ಹಿನ್ನೆಲೆ

ದೀಪಾವಳಿ ಎಂದರೆ ನರಕಾಸುರನನ್ನು ವಧೆ ಮಾಡಿದ ಕೃಷ್ಣನನ್ನು ಸ್ಮರಿಸಲು ಜನರು ದೀಪಾವಳಿ ಆಚರಿಸುತ್ತಾರೆ. ದೀಪಾವಳಿ ಮುನ್ನಾದಿನ ನರಕ ಚತುರ್ದಶಿಯಂದು ನರಕಾಸುರನ ಬೃಹತ್ ಪ್ರತಿಕೃತಿ ದಹಿಸಲಾಗುತ್ತದೆ. ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ತೆಂಗಿನ ಎಣ್ಣೆಯನ್ನು ಜನರು ದೇಹಕ್ಕೆ ಲೇಪಿಸಿಕೊಳ್ಳುವ ವಾಡಿಕೆಯಿದೆ. ಹಲವು ಹಿಂದೂ ಸಮುದಾಯಗಳು ಹಲವು ವಿಧದಲ್ಲಿ ದೀಪಾವಳಿ ಆಚರಿಸುತ್ತವೆ. ದುಷ್ಟಶಕ್ತಿಗಳ ವಿರುದ್ಧದ ಸಂಘರ್ಷದಲ್ಲಿ ಗೆಲುವಿನ ಬೆಳಕನ್ನು ಹೊತ್ತಿಸುವ ಮೂಲತತ್ವ ಇದರಲ್ಲಿ ಅಡಗಿರುತ್ತದೆ.

‘ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಮಾರಾಟ ಸಿಡಿಸುವುದು ನಿಷೇಧ’

‘ಹಬ್ಬದ ಸಂದರ್ಭದಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಪಟಾಕಿ ಸಿಡಿಸುವುದು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ನಿಶ್ಯಬ್ದ ವಲಯಗಳೆಂದು ಘೋಷಿಸಿರುವ ಆಸ್ಪತ್ರೆ ಶಾಲೆ ಪ್ರಾರ್ಥನಾ ಮಂದಿರಗಳ ಸುತ್ತಮುತ್ತ ಸಿಡಿಸಬಾರದು. ಹಸಿರು ಪಟಾಕಿ ಪ್ಯಾಕೆಟ್ ಮೇಲೆ ಚಿಹ್ನೆ ಕ್ಯೂಆರ್ ಕೋಡ್ ಇರುತ್ತದೆ. ಚಿಹ್ನೆ ಇಲ್ಲದಿದ್ದರೆ ಹಸಿರು ಪಟಾಕಿ ಎನಿಸುವುದಿಲ್ಲ. ಅಂತಹ ಪಟಾಕಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಪಟಾಕಿಯಿಂದ ಬೇರೆಯವರ ಮನೆಗಳಿಗೆ ಹಾನಿಯಾದರೆ ಕ್ರಮ ಖಂಡಿತ. ಮಾರಾಟಗಾರರು ಈಗಾಗಲೆ ಅರ್ಜಿಗಳನ್ನು ಸಲ್ಲಿಸಿದ್ದು ಸೋಮವಾರದಿಂದ ಪರವಾನಗಿ ವಿತರಿಸಲಾಗುವುದು’ ಎಂದು ಡಿಸಿಪಿ ಮುತ್ತರಾಜ್ ಎಂ. ತಿಳಿಸಿದರು.

‘ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಿದ್ಧ’

‘ಕಳೆದ ವರ್ಷಕ್ಕಿಂತ ಈ ಬಾರಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗಗಳಲ್ಲಿ ಪ್ರತಿ ವೈದ್ಯರು ಸಾರ್ವಜನಿಕರಿಗೆ ಪಟಾಕಿ ಅನಾಹುತದ ಬಗ್ಗೆ ತಿಳಿಸಲು ತೀರ್ಮಾನಿಸಲಾಗಿದೆ. ಗುರುವಾರದಿಂದ ಹಬ್ಬ ಆರಂಭವಾಗಲಿದ್ದು ಎರಡು ದಿನ ಎಚ್ಚರಿಕೆಯಿಂದ ಇರುವಂತೆ ಎಲ್ಲಾ ವೈದ್ಯಾಧಿಕಾರಿಗಳಿಗೆ ಮೌಖಿಕವಾಗಿ ಸೂಚಿಸಲಾಗಿದೆ’ ಎಂದು ಡಿಎಚ್‌ಒ ‍ಡಾ.ಪಿ.ಸಿ. ಕುಮಾರಸ್ವಾಮಿ ತಿಳಿಸಿದರು.

ಹಸಿರು ಪಟಾಕಿ ಮಾರಾಟ: ಶಿಫಾರಸು

ಇದೇ ಮೊದಲ ಬಾರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮೈಸೂರು ನಗರಪಾಲಿಕೆ ಜಂಟಿಯಾಗಿ ಹಸಿರು ಪಟಾಕಿ ಸಿಡಿಸುವ ಕುರಿತು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿವೆ. ‘ಪ್ರತಿದಿನ ಕಸ ಸಂಗ್ರಹಿಸುವ ವಾಹನಗಳಲ್ಲಿ ಸಣ್ಣ ಹಾಡುಗಳನ್ನು ವಾಹನಗಳ ಮೈಕ್‌ಗಳಲ್ಲಿ ಹಾಕುವ ಮೂಲಕ ಯುವಕರು ಮಕ್ಕಳು ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಯ ಸಮೀಪ ಪಟಾಕಿ ಸಿಡಿಸದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಹಸಿರು ಪಟಾಕಿ ಬಳಸಲು ಪ್ರೇರೇಪಿಸಲಾಗುತ್ತಿದೆ’ ಎಂದು ನಗರಪಾಲಿಕೆ ಮಾಲಿನ್ಯ ನಿಯಂತ್ರಣ ಅಧಿಕಾರಿ ಮೃತ್ಯುಂಜಯ ಹೇಳಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಅಧಿಕಾರಿ ವಿ.ಎಸ್.ಕುಮಾರ್ ಮಾತನಾಡಿ ‘ಪಟಾಕಿ ದಾಸ್ತಾನು ಮಳಿಗೆಗಳನ್ನು ಪೊಲೀಸರು ಹಾಗೂ ಅಗ್ನಿಶಾಮಕ ಅಧಿಕಾರಿ ಪರಿಶೀಲಿಸಬೇಕು. ನಿಯಮ ಉಲ್ಲಂಘಿಸಿದಲ್ಲಿ ಅಂತಹ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪರವಾನಗಿ ರದ್ದುಪಡಿಸಬೇಕೆಂದು ತಿಳಿಸಲಾಗಿದೆ’ ಎಂದರು.

ನಿಯಮ ಉಲ್ಲಂಘಿಸಿದರೆ ಕ್ರಮ

‘ನಿಯಮ ಉಲ್ಲಂಘಿಸಿದಲ್ಲಿ ತಹಶೀಲ್ದಾರ್ ನೇತೃತ್ವದ ಸಮಿತಿ ಗಮನಕ್ಕೆ ತಂದರೆ ಅಂತಹ ಮಳಿಗೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ದೀಪಾವಳಿಗೆ ಅಗ್ನಿಶಾಮಕ ಸಿಬ್ಬಂದಿಗೆ ರಜೆ ಇಲ್ಲ. ಎಲ್ಲರೂ ಕರ್ತವ್ಯದಲ್ಲಿರುತ್ತಾರೆ. ರಾಕೆಟ್ ಹಾರಿಸಿದಾಗ ಹುಲ್ಲು ಮನೆ ಕಬ್ಬಿನಗದ್ದೆ ಮೇಲೆ ಬೆಂಕಿ ಬಿದ್ದರೆ ಕೂಡಲೇ ಶಮನ ಮಾಡಲು ವಾಹನ ಸಿದ್ಧವಿರುತ್ತದೆ.

112ಗೆ ಕರೆ ಮಾಡಿದರೆ ಕೂಡಲೆ ಸ್ಪಂದಿಸಲಾಗುವುದು. ಪ್ರತಿ 3 ಗಂಟೆಗಳಿಗೊಮ್ಮೆ ದಿನದ 24 ಗಂಟೆಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ‘ಬುಲೆಟ್ ಅಗ್ನಿ’ ವಾಹನ ಜೊತೆ ಪಹರೆ ನಡೆಸುತ್ತಾರೆ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ್ ಕೆ.ಪಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.