ADVERTISEMENT

Diwali 2024: ದೀಪಾವಳಿಗೆ ದೀಪ ಹಂಚುವ‌ ‘ದೂರ’

ಶಿವಪ್ರಸಾದ್ ರೈ
Published 30 ಅಕ್ಟೋಬರ್ 2024, 6:56 IST
Last Updated 30 ಅಕ್ಟೋಬರ್ 2024, 6:56 IST
<div class="paragraphs"><p>ಮೈಸೂರಿನ ದೂರ ಗ್ರಾಮದಲ್ಲಿ ದೀಪ ತಯಾರಿಯಲ್ಲಿ ತೊಡಗಿರುವ ಕುಟುಂಬ.</p></div>

ಮೈಸೂರಿನ ದೂರ ಗ್ರಾಮದಲ್ಲಿ ದೀಪ ತಯಾರಿಯಲ್ಲಿ ತೊಡಗಿರುವ ಕುಟುಂಬ.

   

– ಪ್ರಜಾವಾಣಿ ಚಿತ್ರ : ಅನೂಪ್ ರಾಘ .ಟಿ

ಮೈಸೂರಿನಿಂದ ಸುಮಾರು ಹದಿನೇಳು ಕಿಲೋ ಮೀಟರ್‌ ಸಾಗಿದರೆ ಸಿಗುವ ‘ದೂರ’ ಎಂಬ ಪುಟ್ಟ ಗ್ರಾಮವು ತನ್ನ ಒಡಲಲ್ಲಿರಿಸಿರುವ ಪ್ರಸಿದ್ಧ ಕುಂಬಾರಿಕೆ ಕಲೆಯಿಂದ ನಾಡಿನೆಲ್ಲೆಡೆ ಪ್ರಸಿದ್ಧಿ ಪಡೆದಿದೆ. ನಾವೆಲ್ಲರೂ ದೀಪಾವಳಿಯ ಸಂಜೆ ಮನೆಯಲ್ಲಿ ಬೆಳಗುವ ಮಣ್ಣಿನ ಹಣತೆಗೆ ಈ ಊರಿನ ಹಲವು ಕುಟುಂಬಗಳು ರೂಪ ನೀಡುತ್ತವೆ.

ADVERTISEMENT

ದೀಪಗಳ ಹಬ್ಬ ಆಚರಿಸಲು ನಾಡು ಸಂಭ್ರಮದಿಂದ ನಿಂತಿದೆ, ಕತ್ತಲನ್ನು ಕಳೆದು, ಬೆಳಕು ಹಂಚುವ ದೀಪಾವಳಿಗೆ ಈ ಕುಟುಂಬದ ಸದಸ್ಯರು ಜೀವ ತುಂಬುವ ಬಗೆ ಹೇಗೆಂದಿರಾ? ಅವರ ಮನೆಯೊಳಕ್ಕೆ ಬನ್ನಿ. ಹಣತೆಗಳ ಸಾಲುಗಳು ಕೈಬೀಸಿ ಕರೆಯುತ್ತವೆ.

ಇಲ್ಲಿರುವ ಸುಮಾರು ಹದಿನೈದು ಕುಟುಂಬಗಳು ಕುಂಬಾರಿಕೆಯನ್ನೇ ಕಸುಬಾಗಿಸಿಕೊಂಡು ಪರಂಪರೆಯನ್ನು ಮುಂದುವರೆಸುತ್ತಿವೆ. ಗಾಂಧಿ ಗ್ರಾಮೋದ್ಯೋಗ ಕುಶಲ ಕರ್ಮಿಗಳ ಸಹಕಾರ ಸಂಘದ ಮೂಲಕ ವಹಿವಾಟು ನಡೆಯುತ್ತದೆ. ವರ್ಷದುದ್ದಕ್ಕೂ ಮಣ್ಣಿನ ಪಾತ್ರೆಗಳು, ಹೂ ಕುಂಡಗಳು.. ಹೀಗೆ ವಿವಿಧ ವಸ್ತುಗಳ ತಯಾರಿಯಲ್ಲಿ ತೊಡಗುವ ಇಲ್ಲಿನ ಜನ ದೀಪಾವಳಿ ಹತ್ತಿರವಾಗುತ್ತಿದ್ದಂತೆ ವಿವಿಧ ಬಗೆಯ ಹಣತೆಗಳನ್ನು ತಯಾರಿಸುವತ್ತ ಗಮನ ಹರಿಸುತ್ತಾರೆ.

ಊರಿನ ಕೆರೆಯ ಮಣ್ಣನ್ನು ತಂದು ಕುಟುಂಬಗಳ ಸದಸ್ಯರು ಜೊತೆಯಾಗಿ ಕುಳಿತು ದೀಪಗಳನ್ನು ತಯಾರಿಸುವುದು ವಿಶೇಷ. ಅವನ್ನು ಒಣಗಿಸಿ, ಓರಣವಾಗಿ ಜೋಡಿಸಿ ಗ್ರಾಹಕರ ಕೈಗೆ ತಲುಪಿಸುವವರೆಗಿನ ಕೆಲಸದಲ್ಲಿ ಇವರೆಲ್ಲ ಕೂಡು ಕುಟುಂಬವಾಗಿರುತ್ತಾರೆ ಎಂಬುದು ಇನ್ನೊಂದು ವಿಶೇಷ.  ಅವರ ವೃತ್ತಿ ಒಗ್ಗಟ್ಟಿಗೆ ಮಾದರಿ.

ಇಲ್ಲಿ ದೊರೆಯುವ ಮಣ್ಣಿನ ವಸ್ತುಗಳ ಗುಣಮಟ್ಟವು ದೂರದೂರಿನ ಗ್ರಾಹಕರನ್ನೂ ಸೆಳೆಯುತ್ತಿದೆ. ತಿಂಗಳಿಗೆ ಸುಮಾರು 30 ಸಾವಿರ ದೀಪಗಳನ್ನು ಮಾರಾಟ ಮಾಡುತ್ತಾರೆ. ₹2 ರಿಂದ ಆರಂಭವಾಗಿ ₹20ರವರೆಗಿನ ದೀಪಗಳು ಲಭ್ಯವಿದ್ದು, ಸಗಟು ವ್ಯಾಪಾರದ ಜೊತೆಗೆ ಚಿಲ್ಲರೆ ಖರೀದಿಗೂ ಅವಕಾಶವಿದೆ.

ಮೈಸೂರಿನ ದೂರ ಗ್ರಾಮದಲ್ಲಿ ದೀಪ ತಯಾರಿಯಲ್ಲಿ ತೊಡಗಿರುವ ಕುಟುಂಬ–

ಕೆಲವೇ ವರ್ಷಗಳ ಹಿಂದೆ ಇದೇ ಗ್ರಾಮದಿಂದ ತಮಿಳುನಾಡಿಗೂ ಮಣ್ಣಿನ ಹಣತೆಗಳನ್ನು ಕಳುಹಿಸಲಾಗುತ್ತಿತ್ತು. ಈಚೆಗೆ ಅಲ್ಲಿಯೇ ಹಣತೆ ತಯಾರಿ ಉದ್ಯಮ ಆರಂಭಿಸಿದ ಬಳಿಕ ಇಲ್ಲಿನ ವ್ಯವಹಾರದಲ್ಲಿ ಗಣನೀಯ ಕುಸಿತವಾಗಿದೆ. ತಿಂಗಳಲ್ಲಿ 2 ರಿಂದ 3 ಲಕ್ಷ ಮಾರಾಟವಾಗುತ್ತಿದ್ದ ಹಣತೆಯ ಸಂಖ್ಯೆ 30 ಸಾವಿರಕ್ಕೆ ಇಳಿದಿದೆ. ಇಂತಹ ಕಠಿಣ ಸಂದರ್ಭದಲ್ಲೂ ಹಿರಿಯರ ಕಸುಬನ್ನು ಮುಂದುವರೆಸುವ ಸತತ ಪ್ರಯತ್ನ ನಡೆದಿದೆ. ನಾಡಿಗೆ ಬೆಳಕು ಹಂಚುವ ಕುಟುಂಬದ ಕತ್ತಲ ದಿನಗಳ ಬಗ್ಗೆ ಸರ್ಕಾರವೂ ಯೋಚಿಸಬೇಕಿದೆ.

‘ಜಿಲ್ಲೆಯಲ್ಲಿ ನಮ್ಮ ಸಂಘದೊಂದಿಗೆ 40ಕ್ಕೂ ಹೆಚ್ಚು ಸಹಕಾರ ಸಂಘ ಆರಂಭವಾಗಿತ್ತು. ಆದರೆ ಈಗ ನಾವು ಮಾತ್ರವೇ ಈ ವೃತ್ತಿ ಮುಂದುವರೆಸುತ್ತಿದ್ದೇವೆ. ಸಂಘದ ಕಟ್ಟದ ದುರಸ್ತಿ ಮಾಡಬೇಕಿದ್ದು, ಸಹಕಾರದ ನಿರೀಕ್ಷೆಯಲ್ಲಿದ್ದೇವೆ’ ಎಂದು ಸಂಘದ ಅಧ್ಯಕ್ಷ ದೇವು ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.