ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ... ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ..
ಅಣ್ಣ ಬಸವಣ್ಣರ ವಚನದಂತೆ ದೀಪಾವಳಿಯಲ್ಲಿ ಬೆಳಕು, ದೀಪಕ್ಕೆ ಮಹತ್ವವಿದೆ. ದೀಪ, ಬಾಣ ಬಿರುಸಿನ ಪಟಾಕಿ ಇಲ್ಲದ ದೀಪಾವಳಿ ಹಬ್ಬ ಕಳೆಗಟ್ಟದು. ಬೆಳಕಿನ ಪಟಾಕಿಯ ಅಬ್ಬರವಿದ್ದರೂ ಶಾಂತವಾಗಿ ಮನೆಯ ಅಂಗಳದಲ್ಲಿ ಬೆಳಗುವ ದೀಪ ಮನೆಯ ಸದಸ್ಯರಲ್ಲಿ ನೆಮ್ಮದಿ– ಸಂತೋಷ ಉಕ್ಕಿಸುತ್ತದೆ.
ಹಣತೆ ನೋಡಿ ಮನೆಗೆ ಬಂದ ಲಕ್ಷ್ಮಿ ದೇವತೆ ಮತ್ತೆ ಹೊರ ಹೋಗಬಾರದೆಂದರೆ ಹಣತೆ ಮನೆಯ ಅಂಗಳ ಬೆಳಗುತ್ತಿರಬೇಕು ಎಂಬ ನಂಬಿಕೆ ಜನಪದರದ್ದು. ಮಣ್ಣಿನ ಹಣತೆಯ ಜೊತೆ ಬೆರೆತ ಎಣ್ಣೆಯ ಕಂಪು ಸೂಸುವ ಹಬ್ಬದಲ್ಲಿ ವರ್ಷಕ್ಕೊಮ್ಮೆ ಪ್ರಜೆಗಳನ್ನು ಪಾತಾಳಲೋಕದಿಂದ ನೋಡಲು ಬರುವ ‘ಬಲೀಂದ್ರ’ ರಾಜನನ್ನು ಉಪಚರಿಸುವ ಹಬ್ಬವಿದು. ನರಕ ಚತುರ್ದಶಿ, ಅಮಾವಾಸ್ಯೆ, ಬಲಿಪಾಡ್ಯಮಿ ಮೂರು ದಿನವಷ್ಟೇ ಅಲ್ಲದೇ ಕಾರ್ತಿಕ ಮಾಸ ಮುಗಿಯುವವರೆಗೂ ಮನೆಯ ಬಾಗಿಲಲ್ಲಿ ದೀಪಗಳನ್ನಿಡಲಾಗುತ್ತದೆ.
ದೀಪದ ಬೆಳಕಲ್ಲಿ ತುಂಬಿಕೊಂಡ ಪ್ರೀತಿ, ವಾತ್ಸಲ್ಯ ಸಂಭ್ರಮದ ನೆನೆಪಿನ ಬುತ್ತಿಯು ವರ್ಷಗಳುರುಳಿದರೂ ಮಾಸುವುದಿಲ್ಲ. ಮತ್ತೊಂದು ದೀಪಾವಳಿ ಬರುವವರೆಗೂ ಅದ್ಧೂರಿತನ, ಸಂಭ್ರಮದ ನೆನಪುಗಳು ಪ್ರತಿ ಹಬ್ಬಕ್ಕೂ ಮಾತಾಗಿ ಬರುತ್ತವೆ. ಹೃದಯಗಳನ್ನು ಬೆಳಗುವ, ಸಂಬಂಧ ಬೆಸೆಯುವ ಅಂತಃಶಕ್ತಿಯ ಬೆಳಕಿನ ಹಬ್ಬವಿದು.
ದೀಪದ ಹರಕೆ: ದೇವಾಲಯಗಳ ಪ್ರಾಂಗಣದಲ್ಲೂ ರಂಗೇರುವ ದೀಪದ ಬೆಳಕನ್ನು ನೋಡುವುದೇ ಆನಂದ. ಲಕ್ಷದೀಪೋತ್ಸವಗಳಲ್ಲಿ ಹೊಸ ಬಟ್ಟೆ ತೊಟ್ಟ ಚಿಣ್ಣರು, ಹೆಣ್ಣು ಮಕ್ಕಳು, ಯುವತಿಯರು ಎಣ್ಣೆಯನ್ನು ದೀಪಗಳಿಗೆ ತುಂಬುತ್ತಾ, ಹೊಸೆದ ಬತ್ತಿಯನ್ನು ಎಣ್ಣೆಯಲ್ಲಿ ಅದ್ದಿ ಅದಕ್ಕೆ ಬೆಳಕನ್ನು ಹಚ್ಚುವ ಕಾರ್ಯದಲ್ಲಿ ತನ್ಮಯರಾಗಿದ್ದನ್ನು ನೋಡುವುದೇ ಸ್ವರ್ಗ. ದೀಪವನ್ನು ಹಚ್ಚುತ್ತ ದೇವರಿಗೆ ಹರಕೆ ಒಪ್ಪಿಸುವುದು ವಾಡಿಕೆ.
ಬೆಳಕಿನ ಹಕ್ಕಿ: ಮೂರು ದಿನದ ಬೆಳಕಿನ ಹಬ್ಬದಲ್ಲಿ ಪಟಾಕಿ ಹೊಡೆಯುವುದು ಎಷ್ಟು ಮುಖ್ಯವೋ ಸಂಭ್ರಮವನ್ನು ಮುಗಿಲೆತ್ತರಕ್ಕೆ ಹಾರಿಸಲು ಆಕಾಶ ಬುಟ್ಟಿಗಳನ್ನೂ ಹಚ್ಚುತ್ತಾರೆ. ಅವುಗಳನ್ನು ನೋಡಿದರೆ ‘ದೇವರಿಗೆ ಮನುಜ ಸಂದೇಶ’ ತಲುಪಿಸುವ ಹಾರುವ ಹಕ್ಕಿಗಳಂತೆ ಕಾಣುತ್ತವೆ.
ಪಟಾಕಿಗಳು ಮುಗಿಯುತ್ತಿದ್ದಂತೆ ಚಿಣ್ಣರು, ಹಿರಿಯರ ಕಣ್ಣಿಗೆ ಬೀಳುವುದೇ ಆಕಾಶಬುಟ್ಟಿ. ದೀಪದ ಬಿಸಿ ತುಂಬಿಕೊಳ್ಳುತ್ತಲೇ ಆಕಾಶವೇರುವ ಬುಟ್ಟಿಯು ಮಾನವನ ಭಕ್ತಿ, ಪ್ರೀತಿಯನ್ನು ದೇವರಿಗೆ ತಲುಪಿಸುತ್ತವೆ.
ಗ್ರಾಮೀಣರಲ್ಲಿ ಯುಗಾದಿ ಸಂಕ್ರಾಂತಿಯಷ್ಟೇ ಮಹತ್ವದ ಹಬ್ಬ ದೀಪಾವಳಿಗಿದೆ. ಎತ್ತಿನಗಾಡಿ ಓಡದ ಸ್ಪರ್ಧೆ ರಾಸು ಅಲಂಕರಿಸುವ ಸ್ಪರ್ಧೆಗಳು ನಡೆಯುತ್ತವೆ. ‘ಬಲಿಪಾಡ್ಯಮಿ’ ದಿನ ಜಾನುವಾರುಗಳ ಮೇಲಿನ ಅಕ್ಕರೆಯ ಮಳೆಗರೆಯುತ್ತಾರೆ.
ಮುಂಜಾನೆ 4 ಗಂಟೆ ಎದ್ದು ರೈತರು ಯುವಕರು ಜಾನುವಾರುಗಳನ್ನು ಹೊಲ ಗದ್ದೆಗಳಿಗೆ ಕರೆದೊಯ್ದು ಮೇಯಿಸಿಕೊಂಡು ನಂತರ ಮನೆಗೆ ಬರುವಾಗ ರಾಸುಗಳ ಮೈ ತೊಳೆದು ಮನೆಯಲ್ಲಿ ಹಿಂದಿನ ದಿನವೇ ಸಿದ್ಧಪಡಿಸಿದ್ದ ಬಣ್ಣಗಳನ್ನು ಕೊಂಬುಗಳಿಗೆ ಬಳಿಯುತ್ತಾರೆ. ಊದುಕೊಳವೆಯಲ್ಲಿ ಬಣ್ಣವನ್ನು ಅದ್ದಿ ಮೈಗಳ ಮೇಲೆ ಚಿತ್ತಾರ ಮೂಡಿಸುತ್ತಾರೆ.
ಬಲೂನುಗಳನ್ನು ಊದಿ ಕೊಂಬು ಮೈಗಳಿಗೆ ಕಟ್ಟುತ್ತಾರೆ. ಚೆಂಡು ಹೂವಿನ ಹಾರವನ್ನು ಹಾಕಿ ಅಲಂಕರಿಸಿ ಮಾರಿಗುಡಿಗೆ ರಾಸುಗಳೊಂದಿಗೆ ತೆರಳಿ ಪೂಜೆ ಸಲ್ಲಿಸಿ ತೀರ್ಥವನ್ನು ಜಾನುವಾರಿನ ಪ್ರೋಕ್ಷಿಸಿಕೊಳ್ಳುತ್ತಾರೆ. ಎಲ್ಲ ದೇವಾಲಯಗಳಿಗೂ ತೆರಳಿ ತೀರ್ಥ ಎರಚಿಸಿಕೊಂಡು ಒಳ್ಳೆಯದಾಗಲೆಂದು ಪ್ರಾರ್ಥಿಸುತ್ತಾರೆ. ಪೂಜಾ ಕಾರ್ಯಗಳ ನಂತರ ನಡೆಯುವುದೇ ರಾಸುಗಳ ಓಟದ ಸ್ಪರ್ಧೆ. ನಂತರ ಸಂಜೆ ವೇಳೆಗೆ ಸಂಕ್ರಾಂತಿ ಮಾದರಿಯಲ್ಲಿಯೇ ಕಿಚ್ಚು ಹಾಯಿಸಲಾಗುತ್ತದೆ. ಎರಡು ಒನಕೆಗಳಿಗೆ ಸುಣ್ಣ ಹಾಗೂ ಮಣ್ಣಿನಲ್ಲಿ ಸವರಿ ಮನೆಯಂಗಳದ ಬಾಗಿಲ ಹೊಸಿಲಿಗೆ ಅಡ್ಡವಿಟ್ಟು ಅವುಗಳ ಮೇಲೆ ಭತ್ತದ ಹುಲ್ಲು ಹಾಕಿ ಕಿಚ್ಚು ಹತ್ತಿಸಿ ರಾಸುಗಳನ್ನು ಹಾಯಿಸಲಾಗುತ್ತದೆ. ಅಲ್ಲಿಗೆ ನೆಲದ ಹಬ್ಬ ಪಾಡ್ಯಮಿ ಮುಗಿಯುತ್ತದೆ. ಪಾಡ್ಯಮಿಯಂದು ಹಸುಗಳಿಂದ ಹಾಲು ಕರೆಯುವುದೇ ಇಲ್ಲ. ಬೆಳಿಗ್ಗಿನಿಂದಲೂ ದಣಿದಿರುತ್ತವೆಂಬ ವಿವೇಕ ರೈತರಿಗೆ. ಹೀಗಾಗಿ ಅರಿವು ನೀಡುವ ಹಬ್ಬವಿದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.