ADVERTISEMENT

ಉಪಚುನಾವಣೆಯಲ್ಲಿ ಡಿಕೆಶಿ ಸ್ಪರ್ಧಿಸಲ್ಲ, ತಂತ್ರಗಾರಿಕೆ ಮಾಡ್ತಿದ್ದಾರಷ್ಟೆ: ಜಿಟಿಡಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 6:21 IST
Last Updated 21 ಜೂನ್ 2024, 6:21 IST
ಜಿ.ಟಿ. ದೇವೇಗೌಡ
ಜಿ.ಟಿ. ದೇವೇಗೌಡ   

ಮೈಸೂರು: ‘ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’ ಎಂದು ಜೆಡಿಎಸ್ ಪ್ರಮುಖರ ಸಮಿತಿ ಅಧ್ಯಕ್ಷ ಜಿ.ಟಿ. ದೇವೇಗೌಡ ಪ್ರತಿಕ್ರಿಯಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಶಿವಕುಮಾರ್ ಅವರು ರಾಜಕೀಯ ತಂತ್ರಗಾರಿಕೆಯಿಂದ ಹೇಳಿಕೆ ನೀಡುತ್ತಿದ್ದಾರಷ್ಟೆ. ಸಹೋದರ ಡಿ.ಕೆ. ಸುರೇಶ್ ಅವರನ್ನು ಕಣಕ್ಕಿಳಿಸುವ ದೃಷ್ಟಿಯಿಂದ, ‘ನಾನು ಬಂದರೆ ಮತ ಹಾಕುತ್ತೀರಾ?’ ಎಂದು ಜನರನ್ನು ಕೇಳುತ್ತಿದ್ದಾರಷ್ಟೆ. ಇದು ನನ್ನ ರಾಜಕೀಯ ಅನುಭವದಿಂದ ಹೇಳುತ್ತಿರುವ ಮಾತು’ ಎಂದರು.

‘ಚನ್ನಪಟ್ಟಣ ಉಪ ಚುನಾವಣೆ ಅಖಾಡ ಇತರ ಕ್ಷೇತ್ರಗಳಿಗಿಂತ ಜೋರಾಗಿರಲಿದ್ದು, ಜಿದ್ದಾಜಿದ್ದಿನ ಫೈಟ್ ನಡೆಯುತ್ತದೆ’ ಎಂದು ಹೇಳಿದರು.

ADVERTISEMENT

‘ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಎಲ್ಲಿಯೂ ಹೇಳಿಲ್ಲ. ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಅವರು ಜನರ ಅಭಿಪ್ರಾಯ ನನ್ನ ಪರವಾಗಿದೆ ಎಂದಷ್ಟೆ ಹೇಳಿದ್ದಾರೆ. ಜೆಡಿಎಸ್‌–ಬಿಜೆಪಿಯ ನಾಯಕರು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

‘ಎಲ್ಲ ಉಪ ಚುನಾವಣೆಗಳಲ್ಲೂ ಆಡಳಿತಾರೂಢ ಪಕ್ಷದವರೇ ಗೆಲ್ಲುವುದಿಲ್ಲ. ಒಂದೊಂದು ಬಾರಿ ಒಂದೊಂದು ಟ್ರೆಂಡ್ ನಡೆಯುತ್ತದೆ. ನಮ್ಮ (ಮೈತ್ರಿಕೂಟ) ಅಭ್ಯರ್ಥಿ ಯಾರೆಂಬುದನ್ನು ನಾವಿನ್ನೂ ತೀರ್ಮಾನಿಸಿಲ್ಲ’ ಎಂದು ತಿಳಿಸಿದರು.

ಪೊಲೀಸರಿಂದ ಉತ್ತಮ ಕೆಲಸ:

‘ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರ ನಟ ದರ್ಶನ್‌ ಬಂಧನ ಮೊದಲಾದ ವಿಷಯದಲ್ಲಿ ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ನಂಬಿಕೆ ಇದೆ. ಗೌರವ ಹೆಚ್ಚಾಗಿದೆ’ ಎಂದರು.

‘ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದಾರೆ. ನಾನೇ ವಿಡಿಯೊ ನೋಡಿದ್ದೇನೆ, ದರ್ಶನ್‌ ಪರವಾಗಿ ನೀವ್ಯಾರೂ ಮಾತನಾಡಬಾರದು ಎಂದು ಸೂಚನೆಯನ್ನೂ ಸಚಿವರಿಗೆ ನೀಡಿದ್ದಾರೆ ಎಂದು ಗೊತ್ತಾಗಿದೆ’ ಎಂದು ಹೇಳಿದರು.

‘ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ, ರೇಣುಕುಸ್ವಾಮಿ ಕುಟುಂಬದವರಿಗೆ ನ್ಯಾಯ ಸಿಗಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.