ADVERTISEMENT

ವೈದ್ಯನಾಗುವ ಆಸೆ ಇತ್ತು, ಅದಾಗಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ:ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 15:05 IST
Last Updated 26 ಜುಲೈ 2024, 15:05 IST
   

ಮೈಸೂರು: ‘ಖಾಸಗಿ ಆಸ್ಪತ್ರೆಗಳ ವೈದ್ಯರು ಸಮಾಜಕ್ಕೆ ಹಾಗೂ ಬಡ ಜನರಿಗೆ ನೆರವಾಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿನ ವಿಶ್ವೇಶ್ವರ ನಗರದ ಸೇಂಟ್ ಥಾಮಸ್‌ ಶಾಲೆ ಬಳಿಯಲ್ಲಿರುವ ‘ಜಿಸಿ ಸ್ಪೋರ್ಟ್ಸ್ ಮೆಡಿಸಿನ್ ಸೆಂಟರ್ ಹಾಗೂ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆ’ಯಲ್ಲಿ, ಮೈಸೂರಿನಲ್ಲೇ ಇದೇ ಮೊದಲ ಬಾರಿಗೆ ಆರಂಭಿಸಿರುವ ‘ರೊಬೊಟಿಕ್ ಮೊಣಕಾಲು ಮತ್ತು ಸೊಂಟದ ಜಾಯಿಂಟ್ ಮರುಜೋಡಣೆ ಕೇಂದ್ರ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಶ್ರೀಮಂತರು ಖಾಸಗಿ ಆಸ್ಪತ್ರೆಗೆ ಬರುತ್ತಾರೆ. ಬಡವರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಶ್ರೀಮಂತರ ಬಳಿ ಹಣ ತೆಗೆದುಕೊಳ್ಳಿ. ಆದರೆ, ಬಡವರು ಬಂದಾಗ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಿ ನೆರವಾಗಬೇಕು. ಸೇವೆಯೇ ನಿಮ್ಮ ಆದ್ಯತೆಯಾಗಲಿ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದರೆ ಹಾಗೂ ಪ್ರಾಣ ಉಳಿಸಿದರೆ ಅವರು ಸದಾ ನಿಮ್ಮನ್ನು ಸ್ಮರಿಸುತ್ತಾರೆ. ಬಡವರು ಹಾಗೂ ಸಮಾಜದ ಬಗ್ಗೆ ಕಾಳಜಿ ಇಟ್ಟುಕೊಂಡು ಕೆಲಸ ಮಾಡಬೇಕು’ ಎಂದು ಹೇಳಿದರು.

ADVERTISEMENT

ರಾಜಕೀಯಕ್ಕೆ ಬರಲಾಗುತ್ತಿರಲಿಲ್ಲ:

‘ನಾನೂ ವೈದ್ಯ ಆಗಬೇಕು ಎಂದುಕೊಂಡಿದ್ದೆ. ಸೀಟು ಸಿಗದಿದ್ದ ಕಾರಣದಿಂದ ಆಗಲಿಲ್ಲ. ಆದ್ದರಿಂದಲೇ ನಾನು ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯವಾಯಿತು. ವೈದ್ಯನಾಗಿಬಿಟ್ಟಿದ್ದರೆ ನಾನು ರಾಜಕೀಯಕ್ಕೆ ಬರಲು ಸಾಧ್ಯವೇ ಆಗುತ್ತಿರಲಿಲ್ಲ’ ಎಂದರು.

‘ಮಂಡಿ ಹಾಗೂ ಸೊಂಟದ ಮೂಳೆ ಮರುಜೋಡಣೆಗೆ ಹೊಸ ತಂತ್ರಜ್ಞಾನವನ್ನು ಮೈಸೂರಿನಲ್ಲೂ ಬಳಸುತ್ತಿರುವುದು ಶ್ಲಾಘನೀಯ. ನಮ್ಮ ಪಕ್ಕದ ಊರಾದ ಕುಪ್ಪೇಗಾಲದ ಡಾ.ಗಿರೀಶ್‌ ಚಂದ್ರ ಅವರು ಮೈಸೂರಿನಲ್ಲಿ ಇದೇ ಮೊದಲಿಗೆ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಹಳ್ಳಿಯಿಂದ ಬಂದ ವ್ಯಕ್ತಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದನ್ನು ನೋಡಿದರೆ ಖುಷಿಯಾಗುತ್ತದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೋವು ಕಾಣಿಸಿಕೊಳ್ಳುತ್ತಿದೆ:

‘ಇತ್ತೀಚಿನ ವರ್ಷಗಳಲ್ಲಿ ಮೂಳೆ ಸಂಬಂಧಿ ಸಮಸ್ಯೆಗಳು ಜಾಸ್ತಿ ವರದಿ ಆಗುತ್ತಿವೆ. ಹಿಂದೆ ಮೂಳೆ ಮರುಜೋಡಣೆಗೆ ವಯಸ್ಸಾದವರು ಹೆದರುತ್ತಿದ್ದರು.‌ ಈಗ ಅತ್ಯಾಧುನಿಕ ತಂತ್ರಜ್ಞಾನದ ಕಾರಣದಿಂದ ಮುಂದೆ ಬರುತ್ತಿದ್ದಾರೆ. ನನಗೂ ಇತ್ತೀಚೆಗೆ ಸ್ವಲ್ಪ ಮಂಡಿ ನೋವು ಕಾಣಿಸಿಕೊಳ್ಳುತ್ತಿದೆ. ಆ.3 ಬಂದರೆ ನನಗೆ 77 ವರ್ಷ ವಯಸ್ಸಾಗುತ್ತದೆ. ಆದ್ದರಿಂದ ಸಹಜವಾಗಿಯೇ ನೋವು ಕಂಡುಬರುತ್ತಿದೆ’ ಎಂದು ತಿಳಿಸಿದರು.

ಕಾಲೇಜಿನ ದಿನಗಳನ್ನು ನೆನೆದ ಅವರು, ‘ಗಿರೀಶ್‌ ಚಂದ್ರ ಅವರ ತಂದೆ ಕುಪ್ಪೇಗಾಲದ ಕುಳ್ಳಯ್ಯನವರು ವಯಸ್ಸಿನಲ್ಲಿ ಹಿರಿಯರಾದರೂ ನನಗೆ ತುಂಬಾ ಆಪ್ತರಾಗಿದ್ದರು. ಬಹಳ ಕಷ್ಟಪಟ್ಟು ಓದಿ ವೈದ್ಯರಾಗಿದ್ದರು. ನಮ್ಮೂರಿನ ಪಕ್ಕದವರು ಎಂಬುದು ನನಗೆ ಹೆಮ್ಮೆಯ ಸಂಗತಿ’ ಎಂದರು.

ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.‌ಮಹದೇವಪ್ಪ ಮಾತನಾಡಿ, ‘ಜನರ ಆರೋಗ್ಯದ ವೃದ್ಧಿಗೆ, ರೋಗ ತಡೆಗಟ್ಟುವಿಕೆಗೆ ಹಾಗೂ ಚಿಕಿತ್ಸೆಗೆ ಆಸ್ಪತ್ರೆಗಳು ಮಹತ್ವದ್ದಾಗಿವೆ. ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಸುಧಾರಣೆಯಿಂದ ಸುಧಾರಿತ ಚಿಕಿತ್ಸೆ ದೊರೆಯುತ್ತಿದೆ. ಹಿಂದೆ ಶಸ್ತ್ರಚಿಕಿತ್ಸೆ ನಡೆಸುವಾಗ ರೋಗಿಗೆ ನರಕ ಯಾತನೆ ಆಗುತ್ತಿತ್ತು. ಈಗ ಅರವಳಿಕೆ ಚುಚ್ಚುಮದ್ದು ನೀಡಿ ಸರ್ಜರಿ ಮಾಡುವ ತಂತ್ರಜ್ಞಾನ ಬಂದಿದೆ. ರೋಗಿಗೆ ಹೆಚ್ಚು ನೋವಾಗದೆ ಸರ್ಜರಿಗೆ ರೊಬೊಟಿಕ್ ತಂತ್ರಜ್ಞಾನವೂ ಬಂದಿದೆ’ ಎಂದು ತಿಳಿಸಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರೀಗೌಡ, ಮಾಜಿ‌ ಶಾಸಕ ಎಂ.ಕೆ. ಸೋಮಶೇಖರ್, ಮುಖಂಡ ಕುಪ್ಪೇಗಾಲ ಮರಿಸ್ವಾಮಿ, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಗಿರೀಶ್‌ ಚಂದ್ರ, ಆಡಳಿತಾಧಿಕಾರಿಗಳಾದ ಲಿಖಿತಾ ಗಿರೀಶ್‌, ಶ್ರೀವತ್ಸ ಹಾಗೂ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಪ್ರಕಾಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.