ADVERTISEMENT

ಮೈಸೂರು | ವರ್ಷಗಳಾದರೂ ಸಿಗದ ನೋಂದಣಿ ಪತ್ರ: ವೈದ್ಯರ ಅಲೆದಾಟ

ಆಯುರ್ವೇದ, ಹೋಮಿಯೋಪಥಿ, ಯುನಾನಿ ಪದ್ಧತಿ ವೈದ್ಯರ ಅಲೆದಾಟ

ಎಂ.ಮಹೇಶ
Published 7 ಸೆಪ್ಟೆಂಬರ್ 2024, 7:06 IST
Last Updated 7 ಸೆಪ್ಟೆಂಬರ್ 2024, 7:06 IST
ಡಾ.ಪಿ.ಸಿ. ಕುಮಾರಸ್ವಾಮಿ
ಡಾ.ಪಿ.ಸಿ. ಕುಮಾರಸ್ವಾಮಿ   

ಮೈಸೂರು: ಖಾಸಗಿಯಾಗಿ ವೈದ್ಯಕೀಯ ಸೇವೆ ನೀಡುವವರು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (ಕೆಪಿಎಂಇ) ಅನುಸಾರ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ 2021ರಲ್ಲೇ ಅರ್ಜಿ ಹಾಕಿದವರಿಗೂ ನೋಂದಣಿ ಪತ್ರ ಕೊಟ್ಟಿಲ್ಲದಿರುವುದು ವೈದ್ಯರ ಅಸಮಾಧಾನಕ್ಕೆ ಕಾರಣವಾಗಿದೆ.

‘ನೂರಾರು ವೈದ್ಯರಿಗೆ ಪ್ರಮಾಣಪತ್ರವನ್ನು ಕೊಡುವುದು ಬಾಕಿ ಇದೆ. ಪಡೆದುಕೊಳ್ಳಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ಅಕ್ರಮ ಎಸಗಿದವರ ಮೇಲೆ ಕಠಿಣ ಕ್ರಮ ಜರುಗಿಸಲಿ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವವರಿಗೆ ತೊಂದರೆ ಕೊಡುತ್ತಿರುವುದು ಎಷ್ಟು ಸರಿ’ ಎನ್ನುವುದು ಎಂದು ಆಯುರ್ವೇದ, ಹೋಮಿಯೋಪಥಿ ಹಾಗೂ ಯುನಾನಿ ಪದ್ಧತಿಯ ವೈದ್ಯರ ಪ್ರಶ್ನೆಯಾಗಿದೆ.

ನೋಂದಣಿಯನ್ನು ಐದು ವರ್ಷಕ್ಕೊಮ್ಮೆ ನವೀಕರಣ ಮಾಡಿಸಬೇಕು ಎನ್ನುವುದು ನಿಯಮ. ಅದರಂತೆ ಅರ್ಜಿ ಸಲ್ಲಿಸಿ ಹಲವು ವರ್ಷಗಳೇ ಕಳೆದರೂ ನಮಗೆ ನೋಂದಣಿ ಪತ್ರ ಸಿಕ್ಕಿಲ್ಲ ಎಂದು ಹಲವು ವೈದ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪ್ರಕ್ರಿಯೆ ಮುಗಿದಿದ್ದರೂ: ‘ಕಾಯ್ದೆಯ ನಿಯಮದಂತೆ ಸಂಬಂಧಿಸಿದ ಅಧಿಕಾರಿಗಳು ಕ್ಲಿನಿಕ್‌ಗೆ ಅಥವಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪತ್ರಗಳೂ ಸಿದ್ಧ ಇವೆ ಎಂದು ಡಿಎಚ್‌ಇ ಕಚೇರಿಯ ಸಿಬ್ಬಂದಿ ಹೇಳುತ್ತಾರೆ. ಆದರೆ, ಕೊಡುತ್ತಿಲ್ಲ. ಹೊಸದಾಗಿ ನೋಂದಣಿಗೆ ಅರ್ಜಿ ಸಲ್ಲಿಸಿದವರ ಸ್ಥಿತಿಯೂ ಇದೇ ಆಗಿದೆ. ಆನ್‌ಲೈನ್‌ನಲ್ಲಿ ಪರಿಶೀಲಿಸಿದರೆ, ಪ್ರಕ್ರಿಯೆಗಳೆಲ್ಲವೂ ಮುಗಿದಿವೆ ಎಂದು ತೋರಿಸುತ್ತದೆ. ಪ್ರಕ್ರಿಯೆ ಪೂರ್ಣಗೊಂಡಿದ್ದರೂ ನೋಂದಣಿ ಪತ್ರ ಕೊಡದಿರುವುದು ಅನುಮಾನ ಮತ್ತು ಆತಂಕಕ್ಕೆ ಕಾರಣವಾಗಿದೆ’ ಎಂದು ಅವರು ದೂರಿದರು.

‘ನಿಮ್ಮೆಲ್ಲರನ್ನೂ ಡಿಎಚ್‌ಒ ಭೇಟಿಯಾಗಿ, ಸಮಸ್ಯೆಗಳನ್ನು ವಿಚಾರಿಸಿ, ಕೌನ್ಸೆಲಿಂಗ್ ಮಾಡಿ ಪತ್ರಗಳನ್ನು ವಿತರಿಸುತ್ತಾರೆ ಎಂದು ಆ ಕಚೇರಿಯ ಸಿಬ್ಬಂದಿ ಹೇಳುತ್ತಾರೆ. ಆ ಪ್ರಕ್ರಿಯೆಯೂ ನಡೆಯುತ್ತಿಲ್ಲ. ಕಚೇರಿಯ ವೇಳೆಯಲ್ಲಿ ಡಿಎಚ್‌ಒ ಭೇಟಿಯೂ ಸಾಧ್ಯವಾಗುತ್ತಿಲ್ಲ. ಐದಾರು ತಿಂಗಳಿಂದಲೂ ನಾವು ಫಾಲೋಅಪ್ ಮಾಡುತ್ತಿದ್ದೇವೆ. ಅಧಿಕಾರಿಗಳು ನಮ್ಮಿಂದ ಏನಾದರೂ ‘ನಿರೀಕ್ಷಿಸುತ್ತಿದ್ದಾರೆಯೇ’ ಎಂಬ ಅನುಮಾವೂ ಇದೆ. ಪತ್ರ ವಿತರಣೆ ನಿಟ್ಟಿನಲ್ಲಿ ನಿಯಮ ಪಾಲನೆಯನ್ನು ಅಧಿಕಾರಿಗಳೆ ಮಾಡದಿರುವುದು ಬೇಸರ ತರಿಸಿದೆ’ ಎಂದು ತಿಳಿಸಿದರು.

ಅಕ್ರಮಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ: ಈ ಬಗ್ಗೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ಪಿ.ಸಿ. ಕುಮಾರಸ್ವಾಮಿ, ‘ಜಿಲ್ಲೆಯಲ್ಲಿ ಇದುವರೆಗೆ 1,800ಕ್ಕೂ ಅಧಿಕ ಸಂಸ್ಥೆಗಳು ಕಾಯ್ದೆಯಡಿ ನೋಂದಾಯಿಸಿವೆ. ನಕಲಿ ವೈದ್ಯರ ಹಾವಳಿ ಹಾಗೂ ಹೆಣ್ಣು ಭ್ರೂಣ ಹತ್ಯೆ ತಡೆಯುವ ಉದ್ದೇಶದಿಂದ ಹೆಚ್ಚು ವಿಚಕ್ಷಣೆ ಮಾಡಲಾಗುತ್ತಿದೆ. ಅಕ್ರಮಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ಜರುಗಿಸಲಾಗುತ್ತಿದೆ’ ಎಂದು ಹೇಳಿದರು.

‘ನಿಯಮಿತವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹಿಂದೆ ಹಲವು ಕಾರಣದಿಂದ ಕ್ರಮಬದ್ಧವಾಗಿ ಪ್ರಕ್ರಿಯೆ ನಡೆದಿರಲಿಲ್ಲ. ನಾನು ಬಂದ ಮೇಲೆ ಆದ್ಯತೆ ಮೇಲೆ ಎಲ್ಲ ಅರ್ಜಿಗಳನ್ನೂ ಪರಿಶೀಲಿಸಲಾಗುತ್ತಿದೆ. ಎಲ್ಲವೂ‌ ಕ್ರಮಬದ್ಧವಾಗಿದ್ದರೆ ಡಿಸಿ ನೇತೃತ್ವದ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದು ಪತ್ರ ಕೊಡಲಾಗುತ್ತದೆ. ಆಕ್ಷೇಪಣೆ ಇರುವುದೇನು ಎಂಬುದು ಹಾಗೂ ಕಾಯ್ದೆಯಲ್ಲಿನ ತಿದ್ದುಪಡಿ ಪ್ರಕಾರ ಕೈಗೊಳ್ಳಬೇಕಾದ ಕ್ರಮವೇನು ಎಂಬ ಬಗ್ಗೆ ವೈದ್ಯರಿಗೆ ಹಿಂಬರಹ ಕೊಡಲಾಗುತ್ತಿದೆ. ಮಾನದಂಡವನ್ನು ಅವರು ಅನುಸರಿಸಬೇಕಾಗುತ್ತದೆ. ಕ್ರಮಬದ್ಧವಾದುವನ್ನು ವಿಲೇವಾರಿ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

ಇನ್ಮುಂದೆ ಪ್ರತಿ ಶನಿವಾರ ಮಧ್ಯಾಹ್ನ 2.30ರಿಂದ ಸಂಜೆ 6ರವರೆಗೂ ಕೆಪಿಎಂಎ ವಿಷಯಗಳಿಗೆ ಸಂಬಂಧಿಸಿದಂತೆ ವೈದ್ಯರು ನನ್ನನ್ನು ನೇರವಾಗಿ ಕಚೇರಿಯಲ್ಲಿ ಭೇಟಿಯಾಗಬಹುದು
ಡಾ‍.ಪಿ.ಸಿ. ಕುಮಾರಸ್ವಾಮಿ ಡಿಎಚ್‌ಒ ಮೈಸೂರು
‘ಕೆಲವರ ಕಣ್ಣು ಕೆಂಪಾಗಿದೆ’
‘ಅಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ 35 ಕ್ಲಿನಿಕ್‌ (ಸಂಸ್ಥೆ)ಗಳನ್ನು ಮುಚ್ಚಿಸಿದ್ದೇವೆ. ಎರಡು ಕ್ರಿಮಿನಲ್‌ ಪ್ರಕರಣವನ್ನೂ ದಾಖಲಿಸಲಾಗಿದೆ. ಮಾನದಂಡಗಳನ್ನು ಪೂರೈಸುವ ಅರ್ಜಿಗಳನ್ನು 3–4 ತಿಂಗಳಲ್ಲಿ ವಿಲೇವಾರಿಗೆ ಪ್ರಯತ್ನಿಸಲಾಗುವುದು. ವಿಚಕ್ಷಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತಿರುವುದಕ್ಕೆ ಕೆಲವರ ಕಣ್ಣು ಕೆಂಪಾಗಿದೆ. ಆಕ್ಷೇಪಣೆ ವ್ಯಕ್ತವಾದಾಗ ಸರಿಯಾದ ಉತ್ತರವನ್ನೇ ಕೊಟ್ಟಿರುವುದಿಲ್ಲ’ ಎಂದು ಡಿಎಚ್‌ಒ ಕುಮಾರಸ್ವಾಮಿ ಹೇಳಿದರು. ‘ನಾನು ಬಂದ ಮೇಲೆ 50ಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶೀಲಿಸಿ ನೋಂದಣಿಪತ್ರ ನವೀಕರಣ ಪತ್ರ ಕೊಟ್ಟಿದ್ದೇವೆ. ಅದಕ್ಕೆ ಅವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.