ಮೈಸೂರು: ಆಯುರ್ವೇದ ಮತ್ತು ಆಧುನಿಕ ವೈದ್ಯ ಪದ್ಧತಿಯನ್ನು ಮಿಶ್ರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಡಿ.11ರಂದು ಮುಷ್ಕರಕ್ಕೆ ಕರೆ ನೀಡಿದೆ. ಅಂದು ತುರ್ತು ಮತ್ತು ಕೋವಿಡ್ ಚಿಕಿತ್ಸೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳಿಂದ ದೂರ ಉಳಿಯಲು ವೈದ್ಯರು ನಿರ್ಧರಿಸಿದ್ದಾರೆ.
ಜಿಲ್ಲೆಯಲ್ಲಿ 3 ಸಾವಿರಕ್ಕೂ ಅಧಿಕ ವೈದ್ಯರು ಬುಧವಾರ ಕಪ್ಪುಪಟ್ಟಿ ಧರಿಸಿ ಕಾರ್ಯ ನಿರ್ವಹಿಸುವ ಮೂಲಕ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.
‘ಸ್ನಾತಕೋತ್ತರ ಆಯುರ್ವೇದದ ಶಾಲ್ಯ ಮತ್ತು ಶಾಲಕ್ಯ ವಿಭಾಗದವರು 58 ಶಸ್ತ್ರಚಿಕಿತ್ಸೆ ಮಾಡಲು ಅನುಮತಿ ನೀಡುವ ಮೂಲಕ ಸರ್ಕಾರ ಜನರ ಜತೆಗೆ ಚೆಲ್ಲಾಟವಾಡುತ್ತಿದೆ’ ಎಂದು ಎಐಂಎ ಮೈಸೂರು ಘಟಕದ ಅಧ್ಯಕ್ಷ ಡಾ.ಬಿ.ಎನ್.ಆನಂದ್ ರವಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಅಲೋಪಥಿ ವಿಧಾನದಲ್ಲೂ ಎಂಬಿಬಿಎಸ್ ಮಾಡಿದವರಿಗೆ ಶಸ್ತ್ರಚಿಕಿತ್ಸೆ ಮಾಡಲು ಅವಕಾಶ ಇಲ್ಲ. ‘ಮಾಸ್ಟರ್ ಆಫ್ ಸರ್ಜರಿ’ ಮಾಡಿದವರು ಸಹ ಎಲ್ಲ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಈಗ ಆಯುರ್ವೇದದವರಿಗೆ ಅವಕಾಶ ನೀಡಿದರೆ ಜನರ ಜೀವದ ಗತಿ ಏನು ಎಂಬುದೇ ಪ್ರಶ್ನೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ನಿರ್ಧಾರ ವೈದ್ಯರಿಗಿಂತ ಹೆಚ್ಚಾಗಿ ಜನಸಾಮಾನ್ಯರಿಗೆ ಅಪಾಯಕಾರಿ ಯಾಗಿದೆ. ಒಂದಷ್ಟು ತರಬೇತಿ ನೀಡಿದರೆ ಶಸ್ತ್ರಚಿಕಿತ್ಸೆ ಮಾಡಬಹುದು ಎಂಬುದು ಅತಾರ್ಕಿಕವಾದ ವಿಚಾರ ಎಂದು ಹರಿಹಾಯ್ದರು.
ಡಿ.11ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ತುರ್ತು ಮತ್ತು ಕೋವಿಡ್ ಚಿಕಿತ್ಸೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಲಾಗುವುದು. ಸಯ್ಯಾಜಿರಾವ್ ರಸ್ತೆಯಲ್ಲಿರುವ ಐಎಂಎ ಕಚೇರಿ ಎದುರು ಬೆಳಿಗ್ಗೆ 11ಕ್ಕೆ ಪ್ರದರ್ಶನ ನಡೆಸಲಾಗುವುದು ಎಂದರು.
ಐಎಂಎ ಕೇಂದ್ರೀಯ ಸಮಿತಿ ಸದಸ್ಯ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ‘ಆಯುರ್ವೇದ, ಯುನಾನಿ ಮತ್ತು ಹೋಮಿಯೊಪಥಿ ಹೀಗೆ... ಪ್ರತಿಯೊಂದಕ್ಕೂ ಪ್ರತ್ಯೇಕವಾದ ಚಿಕಿತ್ಸಾ ವಿಧಾನಗಳಿವೆ. ಇವುಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಒಂದಕ್ಕೊಂದು ಮಿಶ್ರಣ ಮಾಡಿದರೆ ಉಪಯೋಗಕ್ಕಿಂತ ಅಪಾಯವೇ ಹೆಚ್ಚು. ಈ ವಿಚಾರವನ್ನು ಪುನರ್ ಪರಿಶೀಲಿಸ ಬೇಕು’ ಎಂದು ಒತ್ತಾಯಿಸಿದರು.
ಆಲ್ ಇಂಡಿಯಾ ಸರ್ಜಿಕಲ್ ಸೊಸೈಟಿ ಅಧ್ಯಕ್ಷ ಡಾ.ಸಿದ್ದೇಶ್ ಮಾತನಾಡಿ, ‘ಪ್ರತಿ ವೈದ್ಯಕೀಯ ಪದ್ಧತಿಯ ಪಾವಿತ್ರ್ಯತೆ ಕಾಪಾಡಬೇಕು’ ಎಂದು ಒತ್ತಾಯಿಸಿದರು.
‘ಮಹಾನ್’ ಅಧ್ಯಕ್ಷ ಡಾ.ಜಾವೇದ್ ನಹೀಂ, ಎಎಂಎ ಕಾರ್ಯದರ್ಶಿ ಡಾ.ಚಂದ್ರಭಾನ್‌ಸಿಂಗ್, ಕೇಂದ್ರೀಯ ಸಮಿತಿ ಸದಸ್ಯ ಡಾ.ಪಿ.ರಾಜನ್, ‘ಮಾ’ ಅಧ್ಯಕ್ಷ ಡಾ.ಪ್ರಸನ್ನಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.