ADVERTISEMENT

ರಕ್ತದಾನ ಮಾಡಿ, ಆರೋಗ್ಯವಾಗಿರಿ: ಚಂದ್ರಶೇಖರ್‌

ಕೇಂದ್ರ ರೇಷ್ಮೆ ಸಂಶೋಧನೆ, ತರಬೇತಿ ಸಂಸ್ಥೆ ಆವರಣದಲ್ಲಿ ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 15:13 IST
Last Updated 14 ಜೂನ್ 2024, 15:13 IST
ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಆವರಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅತಿಥಿಗಳು ಹಾಗೂ ಸಂಸ್ಥೆ ಸಿಬ್ಬಂದಿ ಭಾಗವಹಿಸಿದ್ದರು
ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಆವರಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅತಿಥಿಗಳು ಹಾಗೂ ಸಂಸ್ಥೆ ಸಿಬ್ಬಂದಿ ಭಾಗವಹಿಸಿದ್ದರು   

ಮೈಸೂರು: ‘ರಕ್ತದಾನದಿಂದ ನಮ್ಮ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಬದಲಾಗಿ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ’ ಎಂದು ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಪ್ರಭಾರ ನಿರ್ದೇಶಕ ಡಾ.ಕೆ.ಬಿ.ಚಂದ್ರಶೇಖರ್‌ ಹೇಳಿದರು.

ಇಲ್ಲಿನ ಸಂಸ್ಥೆ ಆವರಣದಲ್ಲಿ ವಿಶ್ವ ರಕ್ತದಾನಿ ದಿನಾಚರಣೆ ಅಂಗವಾಗಿ ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಸಹಯೋಗದೊಂದಿಗೆ ಶುಕ್ರವಾರ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ರಕ್ತದಾನ ಅಭಿಯಾನದ ಪ್ರತಿಜ್ಞೆ ಬೋಧಿಸಿ ಮಾತನಾಡಿರು.

‘ಯುವ ಸಮುದಾಯವು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಬೇಕು. ಇದರಿಂದ ಬೇರೊಬ್ಬರ ಜೀವ ಉಳಿಸುವ ಮಹಾಕಾಯಕದಲ್ಲಿ ನಾವು ಭಾಗಿಯಾದಂತಾಗುತ್ತದೆ. ರಕ್ತದಾನ ಮಾಡಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ ಮೂಲಕ ಬೇರೆಯವರನ್ನು ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.

ADVERTISEMENT

‘ಹರಿಯಾಣ ಮೂಲದ ಕ್ಯಾಪ್ಟನ್ ಸುರೇಶ್‌ಕುಮಾರ್ ಸೈನಿ ಅವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಾ 131 ಬಾರಿ ರಕ್ತದಾನ ಮತ್ತು 94 ಬಾರಿ ಪ್ಲೇಟ್‌ಲೆಟ್ಸ್ ದಾನ ಮಾಡಿ ದಾಖಲೆ ಮಾಡಿದ್ದಾರೆ. ಇಂಥ ವ್ಯಕ್ತಿಗಳು ನಮಗೆ ಸ್ಫೂರ್ತಿಯಾಗಬೇಕು’ ಎಂದು ಸ್ಮರಿಸಿದರು.

ಲಯನ್ಸ್ ಬ್ಲಡ್ ಸೆಂಟರ್ ಜೀವಧಾರದ ಡಾ.ಸುಷ್ಮಾ ಮಾತನಾಡಿ, ‘ಮಹಿಳೆಯರು ಮೂಢನಂಬಿಕೆಯನ್ನು ತೊರೆದು ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು. ಇದರಿಂದ ಆರೋಗ್ಯ ಲಾಭವೂ ಇದೆ. ರಕ್ತದಾನ ಮಾಡುವುದರಿಂದ ಹೃದ್ರೋಗ, ಥೈರಾಯಿಡ್ ಹಾಗೂ ಇತರ ಸಮಸ್ಯೆಗಳನ್ನು ತಡೆಯಲು ಪರಿಣಾಮಕಾರಿಯಾಗಿರುತ್ತದೆ’ ಎಂದು ಮನವರಿಕೆ
ಮಾಡಿಕೊಟ್ಟರು.

ಸಂಸ್ಥೆಯ 30 ಜನರು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಆಯೋಜಕರಾದ ಕೆ.ಗಾಯಿತ್ರಿ, ರಂಜನಿ, ಕುಸುಮ, ಎಲ್.ವಿ.ರಾಮಕೃಷ್ಣ, ಸಿಬ್ಬಂದಿ ಎಸ್.ಬಾಲಸರಸ್ವತಿ, ಸಿ.ಎಂ.ಬಾಬು, ಎಂ.ಎನ್. ಚಂದ್ರಶೇಖರ್, ಜೀವಧಾರ ಕೇಂದ್ರದ ಮಹಾಂತೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.