ಮೈಸೂರು: ‘ಬೆಲೆ ಏರಿಕೆ, ಸಿಬ್ಬಂದಿ ಕೊರತೆ ಮುಂತಾದ ಸಮಸ್ಯೆಯಿಂದ ಹೋಟೆಲ್ ಉದ್ಯಮವು ಸಂಕಷ್ಟದಲ್ಲಿದ್ದು, ಸರ್ಕಾರವೂ ನಂದಿನಿ ಹಾಲಿನ ಮಾರಾಟ ದರವನ್ನು ಹೆಚ್ಚಿಸಬಾರದು’ ಎಂದು ಹೋಟೆಲ್ ಮಾಲೀಕರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ನಗರದಲ್ಲಿ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಶನಿವಾರ ಮನವಿ ಸಲ್ಲಿಸಿದ ಪದಾಧಿಕಾರಿಗಳು, ‘ಈಗಾಗಲೇ ಅನೇಕ ದಿನಸಿ ಪದಾರ್ಥಗಳ ದರಗಳು ಗಗನಕ್ಕೇರಿವೆ. ಈ ಆಘಾತದೊಂದಿಗೆ ಜನರು ಜೀವನ ನಡೆಸುತ್ತಿದ್ದಾರೆ. ರೈತರಿಗೆ ನೀಡಬೇಕಾದ ಹಾಲಿನ ಸಬ್ಸಿಡಿ ಹಣ ಬಿಡುಗಡೆಗೊಳಿಸಿ ಸಹಕರಿಸಲಿ. ಆದರೆ, ದರ ಹೆಚ್ಚಿಗೆ ಮಾಡಿದರೆ ಉದ್ಯಮಕ್ಕೆ ತೀವ್ರ ತೊಂದರೆಯಾಗಲಿದೆ’ ಎಂದು ಮನವಿ ಮಾಡಿದರು.
‘ಕಳೆದ ಜೂನ್‌ನಲ್ಲಿ ಹಾಲಿನ ಬೆಲೆ ಪರಿಷ್ಕರಿಸಲಾಗಿದೆ. ತಾವು ಹಾಲಿನ ಬೆಲೆ ಹೆಚ್ಚಿಸಿಲ್ಲವೆಂದು, 50 ಎಂಎಲ್ ಹಾಲು ಹೆಚ್ಚಿಸಲಾಗಿದೆ ಎಂದು ಹೇಳಿದರೂ ಅದು ಸೂಕ್ತವಾಗಿ ಜಾರಿಗೆ ಬಂದಿಲ್ಲ. ಬೆಲೆಗಳು ಮಾತ್ರ ಹೆಚ್ಚಾಯಿತು. ಈಗ ಮತ್ತೆ ಹಾಲಿನ ದರ ಏರಿಕೆ ಮಾಡುವಂತೆ ಸಹಕಾರ ಸಚಿವರಿಗೆ ಸೂಚನೆ ನೀಡಿರುವುದು ಆತಂಕಕಾರಿ’ ಎಂದು ಕಳವಳ ವ್ಯಕ್ತಪಡಿಸಿದರು.
ಮಧ್ಯರಾತ್ರಿ 1ರವರೆಗೆ ಅನುಮತಿ ನೀಡಿ: ಕಳೆದ ಬಜೆಟ್‌ನಲ್ಲಿ ಬೆಂಗಳೂರು ಸೇರಿದಂತೆ 11 ಮಹಾನಗರಗಳಲ್ಲಿ ವಾಣಿಜ್ಯ ಚಟುವಟಿಕೆಗೆ ರಾತ್ರಿ 1ರವರೆಗೆ ಅನುಮತಿ ನೀಡುವ ಬಗ್ಗೆ ಪ್ರಸ್ತಾಪಿಸಿದ್ದು, ಅದನ್ನು ಕೂಡಲೇ ಜಾರಿಗೆ ತರಬೇಕು. ಮೈಸೂರಿನಂಥ ಪ್ರವಾಸ ಹಾಗೂ ವೈದ್ಯಕೀಯ ಕ್ಷೇತ್ರದ ಪ್ರಮುಖ ಸ್ಥಳಕ್ಕೆ ಇದು ಅಗತ್ಯವಾಗಿದೆ’ ಎಂದು ಮನವಿಯಲ್ಲಿ ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ಎ.ಆರ್.ರವೀಂದ್ರ ಭಟ್, ಸದಸ್ಯರಾದ ಕೆ ಭಾಸ್ಕರ್ ಶೆಟ್ಟಿ , ಕೆ.ಎಸ್.ಅರುಣ್ ಇದ್ದರು.
‘ಮೈಸೂರಿನ ಎಲ್ಲ ಹೋಟೆಲ್‌ಗಳು ಸಿಹಿ ಉತ್ಪನ್ನದ ಅಂಗಡಿಗಳು ಬೇಕರಿಗಳಲ್ಲಿ ಉದ್ಯಮಿಗಳು ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಸಿ’ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಮನವಿ ಮಾಡಿದ್ದಾರೆ. ‘ಇತ್ತೀಚೆಗೆ ತಿರುಪತಿ ದೇವಾಲಯ ಸೇರಿದಂತೆ ಹಲವಾರು ದೇವಸ್ಥಾನಗಳಲ್ಲಿ ದನದ ಕೊಬ್ಬು ಕಲಬೆರಕೆಗೊಂಡಿರುವ ತುಪ್ಪವನ್ನು ಬಳಸಿ ತಯಾರಿಸಿದ ಲಡ್ಡು ನೀಡಲಾಗುತ್ತಿದೆ ಎಂಬುದು ಆತಂಕಕಾರಿ. ಕಡಿಮೆ ದರಕ್ಕೆ ತುಪ್ಪ ನೀಡಲಾಗುವುದೆಂದು ಹಲವಾರು ಡೇರಿಗಳು ಪ್ರಚಾರ ಮಾಡುತ್ತಿದ್ದು ಈ ಆಮಿಷಕ್ಕೆ ಒಳಗಾದರೆ ಇಂಥ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ನಾಡಿನ ರೈತರ ಬೆನ್ನೆಲುಬಾದ ಕೆ.ಎಂ.ಎಫ್ ಸಂಸ್ಥೆಯ ನಂದಿನಿ ತುಪ್ಪವನ್ನು ಬಳಸುವುದು ಒಳಿತು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.