ADVERTISEMENT

ಬಾಬೂಜಿ ಆದರ್ಶ, ಚಿಂತನೆ ಪಾಲಿಸಿ: ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 16:05 IST
Last Updated 5 ಏಪ್ರಿಲ್ 2024, 16:05 IST
ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಬು ಜಗಜೀವನ ರಾಂ ಅವರ ಭಾವಚಿತ್ರಕ್ಕೆ ಪ್ರೊ.ಎನ್.ಕೆ.ಲೋಕನಾಥ್ ಪುಷ್ಪನಮನ ಸಲ್ಲಿಸಿದರು. ಪ್ರೊ.ಆರ್.ತಿಮ್ಮರಾಯಪ್ಪ, ಎನ್.ಸಿ.ಮುನಿಯಪ್ಪ ಭಾಗವಹಿಸಿದ್ದರು
ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಬು ಜಗಜೀವನ ರಾಂ ಅವರ ಭಾವಚಿತ್ರಕ್ಕೆ ಪ್ರೊ.ಎನ್.ಕೆ.ಲೋಕನಾಥ್ ಪುಷ್ಪನಮನ ಸಲ್ಲಿಸಿದರು. ಪ್ರೊ.ಆರ್.ತಿಮ್ಮರಾಯಪ್ಪ, ಎನ್.ಸಿ.ಮುನಿಯಪ್ಪ ಭಾಗವಹಿಸಿದ್ದರು   

ಮೈಸೂರು: ‘ದಲಿತರು, ಬಡವರು, ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಿದ ಬಾಬು ಜಗಜೀವನರಾಂ ಅವರನ್ನು ಸ್ಮರಿಸಿದರೆ ಸಾಲದು, ಅವರ ಆದರ್ಶ ಪಾಲಿಸಬೇಕು’ ಎಂದು ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್ ಹೇಳಿದರು.

ಇಲ್ಲಿನ ಮಾನಸ ಗಂಗೋತ್ರಿಯಲ್ಲಿ ಡಾ.ಬಾಬು ಜಗಜೀವನರಾಂ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿಶೇಷ ಘಟಕದಿಂದ ಶುಕ್ರವಾರ ನಡೆದ ಡಾ.ಬಾಬು ಜಗಜೀವನ ರಾಂ ಪುಣ್ಯ ಸ್ಮರಣೆ, ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬಾಬೂಜಿ ಅವರು ದೇಶಕ್ಕಾಗಿ ನೀಡಿದ ಕೊಡುಗೆಗಳು ಅಪಾರ. ಹಸಿರು ಕ್ರಾಂತಿಯ ಮೂಲಕ ಜನರ ಹಸಿವು ತಣಿಸಿದ್ದಾರೆ. ದಮನಿತರ ಪರವಾಗಿ ಹೋರಾಟ ನಡೆಸಿದ್ದಾರೆ. ಅವರ ಆದರ್ಶ, ಚಿಂತನೆಗಳು ಇಂದಿಗೂ ದಾರಿದೀಪವಾಗಿದ್ದು, ಯುವ ಜನಾಂಗಕ್ಕೆ ತಿಳಿಸುವ ಕೆಲಸವಾಗಬೇಕು’ ಎಂದರು.

ADVERTISEMENT

‘ಬಾಬು ಜಗಜೀವನರಾಂ ಸ್ವಾತಂತ್ರ್ಯ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರಾಗಿದ್ದರು. ಸಚಿವರಾಗಿದ್ದರು, ಉಪ ಪ್ರಧಾನಿಯಾಗಿದ್ದರು. ಮಹಾನ್ ದಲಿತ ನಾಯಕರಾಗಿದ್ದರು. ಅಸ್ಪೃಶ್ಯತೆ, ಜಾತಿ ನಿರ್ಮೂಲನಾ ವ್ಯವಸ್ಥೆ ವಿರುದ್ಧ ಹೋರಾಡಿ, ಸಮತಾ ಭಾವನೆ ನೆಲೆಯೂರಲು ಅವಿರತ ಶ್ರಮಿಸಿದ ರಾಜಕೀಯ ಮುತ್ಸದ್ದಿ’ ಎಂದು ಬಣ್ಣಿಸಿದರು.

ವಿಷಯ ತಜ್ಞ ಎನ್‌.ಪಿ.ಮುನಿಯಪ್ಪ ಮಾತನಾಡಿ, ‘ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಆಹಾರದ ಕೊರತೆಯಿತ್ತು. ವಿದೇಶದಿಂದ ಎರವಲು ಪಡೆಯುವ ಸ್ಥಿತಿಯಿತ್ತು. ಆಗ ಕೃಷಿ ಕ್ಷೇತ್ರದಲ್ಲಿ ಬಾಬು ಜಗಜೀವನರಾಂ ತಂದ ಕ್ರಾಂತಿಕಾರಕ ಬದಲಾವಣೆಗಳು ಆಹಾರ ಸ್ವಾವಲಂಬನೆ ಸಾಧಿಸಲು ಸಹಾಯವಾಯಿತು’ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮುನಿರಾಜು ಅವರು, ‘ಕರ್ನಾಟಕ ದಲಿತ ಚಳವಳಿಯ ಮೇಲೆ ಬಾಬು ಜಗಜೀವನರಾಂ ಅವರ ಪ್ರಭಾವ’ ಕುರಿತು ವಿಷಯ ಮಂಡಿಸಿದರು.

ಕೇಂದ್ರದ ನಿರ್ದೇಶಕ ಪ್ರೊ.ಆರ್.ತಿಮ್ಮರಾಯಪ್ಪ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಶೇಷ ಘಟಕದ ಉಪ ಕುಲಸಚಿವ ಎನ್‌.ಎಸ್‌.ಚಿದಾನಂದ ಮೂರ್ತಿ, ಎಂ.ಶ್ರೀನಿವಾಸ್‌ ಉಪಸ್ಥಿತರಿದ್ದರು.

ಬಾಬೂಜಿ ದೇಶಕ್ಕೆ ನೀಡಿದ ಕೊಡುಗೆ ಅಪಾರ ಸಮತಾ ಭಾವನೆ ನೆಲೆಯೂರಲು ಅವಿರತ ಶ್ರಮ ಮಹಾನ್‌ ಪುರುಷರ ಚರಿತ್ರೆಯ ಅಧ್ಯಯನ ಅಗತ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.